More

    ನಾಲ್ಕು ತಿಂಗಳಲ್ಲಿ 20 ಸಾವಿರ ಪ್ರಕರಣ ವಿಲೇ; ಉಳಿದ ಕೇಸ್ ವಿಲೇವಾರಿಗೆ ನ.24ರ ಗಡವು; ಕಂದಾಯ ಸಚಿವ ಕೃಷ್ಣ ಬೈರೇಗೌಡ

    ಹಾವೇರಿ: ಕಂದಾಯ ಇಲಾಖೆ ವ್ಯಾಪ್ತಿಯ ರಾಜ್ಯದ ಎಸಿ ನ್ಯಾಯಾಲಯಗಳಲ್ಲಿ 80 ಸಾವಿರ ಪ್ರಕರಣಗಳು ಬಾಕಿ ಉಳಿದುಕೊಂಡಿದ್ದು, ಐದು ವರ್ಷ ಮೀರಿದ 32,780 ಕೇಸ್‌ಗಳಿವೆ. ಇದರಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 20,500 ಪ್ರಕರಣಗಳ ವಿಲೇವಾರಿ ಮಾಡಲಾಗಿದೆ. ಉಳಿದ 12,000 ಪ್ರಕರಣಗಳ ವಿಲೇವಾರಿಗೆ ನ.24ರ ಗಡವು ನೀಡಿದ್ದೇನೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ವ್ಯಾಪ್ತಿಗೆ ಬಾರದ ಅನೇಕ ಪ್ರಕರಣಗಳೂ ಎಸಿ, ತಹಶೀಲ್ದಾರ್ ತೆಗೆದುಕೊಂಡಿದ್ದಾರೆ. ಇದರಿಂದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ತಪ್ಪುಗಳನ್ನು ಗುರುತಿಸಿ ವಿಲೇ ಮಾಡುವ ಅಭಿಯಾನ ಆರಂಭಿಸಿದ್ದೇವೆ. ಹೀಗೆ ಐದು ವರ್ಷಕ್ಕಿಂತ ಮೇಲ್ಪಟ್ಟು ಬಾಕಿ ಇರುವ ಎಲ್ಲ ಪ್ರಕರಣಗಳ ವಿಲೇವಾರಿ ಮಾಡಲು ನ.24ರ ಗಡವು ನೀಡಿದ್ದೇವೆ. ನ.26ರಂದು ನಮ್ಮ ಸರ್ಕಾರಕ್ಕೆ 6 ತಿಂಗಳು ತುಂಬುವುದರ ಒಳಗಾಗಿ ಅಭಿಯಾನ ಪೂರ್ಣಗೊಳ್ಳಲಿದೆ ಎಂದರು.

    ಕಾವೇರಿ 2 ಸಾಫ್ಟವೇರ್ ಸಮಸ್ಯೆ ಬಗೆಹರಿದಿದೆ. ವಾಡಿಕೆ ಪ್ರಕಾರ ದಿನಕ್ಕೆ 10, 11 ಸಾವಿರ ನೋಂದಣಿ ಆಗುತ್ತಿದ್ದವು. ಸೆಪ್ಟೆಂಬರ್ ಕೊನೆಯಲ್ಲಿ 26 ಸಾವಿರ ದಸ್ತಾವೇಜುಗಳ ನೋಂದಣಿಯಾಗಿದೆ. ವಾಡಿಕೆಗಿಂತ ಎರಡೂವರೆ ಪಟ್ಟು ನೋಂದಣಿಯಾಗಿದೆ ಎಂದರು. ರಾಜ್ಯದಾದ್ಯಂತ ನಾನ್ ಎನ್‌ಎ ಸೈಟ್‌ಗಳ ಸಮಸ್ಯೆ ಹಲವು ವರ್ಷಗಳಿಂದ ಇದೆ. ಈ ಕುರಿತು ಚರ್ಚೆ ನಡೆದಿದೆ. ಗ್ರಾಮ ಲೆಕ್ಕಿಗರು (ವಿಎ) ಗ್ರಾಮಗಳಲ್ಲಿ ಸಿಗುವುದಿಲ್ಲ. ಅವರು ಎಲ್ಲಿದ್ದಾರೆ ಎಂಬುದೇ ಗೊತ್ತಿರುವುದಿಲ್ಲ. ಗ್ರಾಪಂ ಕಚೇರಿಗಳಲ್ಲೇ ಅವರೂ ಸಿಗುವಂತಾಗಬೇಕು ಎಂದು ಸ್ಥಳೀಯ ಶಾಸಕರೂ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಚರ್ಚೆ ನಡೆದಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಎಂ.ಎಂ.ಹಿರೇಮಠ, ಕೊಟ್ರೇಶಪ್ಪ ಬಸೇಗೆಣ್ಣಿ, ಸಂಜೀವಕುಮಾರ ನೀರಲಗಿ, ಇತರರಿದ್ದರು.

    ಇ-ಆಫಸ್‌ಗೆ ಚಾಲನೆ

    ಕಡತಗಳು ಕಳೆಯುವುದು, ಬೇಕಾದವರದ್ದು ಮಾತ್ರ ಟೇಬಲ್‌ನಿಂದ ಟೇಬಲ್‌ಗೆ ಕಳುಹಿಸುವುದು, ಅಧಿಕಾರಿಗಳ ಕಣ್ಣಾಮುಚ್ಚಾಲೆ ತಪ್ಪಿಸಲು ತಹಶೀಲ್ದಾರ್ ಕಚೇರಿಗಳಲ್ಲಿ ಇ ಆಫೀಸ್ ಯೋಜನೆ ಜಾರಿಗೊಳಿಸುತ್ತಿದ್ದೇವೆ. ಇದರಿಂದಾಗಿ ಎಲ್ಲವೂ ಕಾಲಮಿತಿಯೊಳಗೆ ಕೆಲಸ ಆಗಲಿದೆ. ಯಾವ ಕಚೇರಿಗೆ ಹೋದರೂ ಆದಷ್ಟು ಬೇಗ ವಿಲೇವಾರಿ ಮಾಡಬಹುದು. ಪಾರದರ್ಶಕವಾಗಿ, ವೇಗವಾಗಿ ಕೆಲಸ ಮಾಡಲು ಅನುಕೂಲವಾಗಲಿದೆ. ಎಲ್ಲ ತಾಲೂಕುಗಳಲ್ಲಿ ಮಾಡಲಾಗುತ್ತಿದೆ ಎಂದರು.

    ಸಂಸದರು ಕೇಂದ್ರಕ್ಕೆ ಮನವರಿಕೆ ಮಾಡಲಿ

    ಬಿಜೆಪಿಯವರು ಗಾಳಿಯಲ್ಲಿ ಮಾತನಾಡುವುದನ್ನು ಬಿಟ್ಟು ಕೇಂದ್ರದ ತಮ್ಮದೇ ಸರ್ಕಾರದ ಜತೆಗೆ ಮಾತನಾಡಿ ರಾಜ್ಯಕ್ಕೆ ಬರಬೇಕಾದ ಹಣ ಬಿಡುಗಡೆ ಮಾಡಿಸಬೇಕು. 17,700 ಕೋಟಿ ರೂ. ಪರಿಹಾರ ಕೊಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ದೇಶದಲ್ಲೇ ಎರಡನೇ ಅತಿ ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕಕ್ಕೆ ಕೇಂದ್ರ ಕೂಡಲೇ ಪರಿಹಾರ ನೀಡಬೇಕು. 26 ಸಂಸದರು, ಕೇಂದ್ರ ಸಚಿವರು ರಾಜ್ಯದ ಸಮಸ್ಯೆ ಕುರಿತು, ಬರದ ಕುರಿತು ಕೇಳಲೂ ಅವರಿಗೆ ಬಾಯಿ ಇಲ್ಲದಂತಾಗಿದೆ. ಅಧ್ಯಯನ ನಾಟಕ ಬಿಡಿ. ಕನಿಷ್ಠ ಕೇಂದ್ರ ಸಚಿವರನ್ನು ಭೇಟಿ ಮಾಡಿಸಿ. ಮತ ಚಲಾಯಿಸಿ ಗೆಲ್ಲಿಸಿದ ಜನರ ಋಣ ತೀರಿಸಲಿ. ಕೇಂದ್ರಕ್ಕೆ ಮನವರಿಕೆ ಮಾಡಿಸಲಿ ಎಂದು ಕೃಷ್ಣ ಬೈರೇಗೌಡ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts