More

    ಚುನಾವಣೆ ಅಕ್ರಮ ತಡೆಗೆ ಖಾಕಿ ಹದ್ದಿನ ಕಣ್ಣು; ಮಿಲಿಟರಿ ಪಡೆ ಸಾಥ್

    ಕೇಶವಮೂರ್ತಿ ವಿ.ಬಿ. ಹಾವೇರಿ
    ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅಕ್ರಮ ಚಟುವಟಿಕೆ ಮಾಡುವವರು ಗರುಗೆದರುತ್ತಾರೆ. ಅಕ್ರಮವಾಗಿ ಹಣ, ಹೆಂಡ, ಸೀರೆ, ಕುಕ್ಕರ್, ಮತ್ತಿತರ ವಸ್ತುಗಳನ್ನು ಮತದಾರರಿಗೆ ಹಂಚಲು ಮುಂದಾಗುತ್ತಾರೆ. ಇಂತಹ ಅಕ್ರಮ ಚಟುವಟಿಕೆಗಳ ಮೇಲೆ ಕಣ್ಣು ಇಡಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಭದ್ರತೆಗಾಗಿ ಖಾಕಿಗೆ ಪ್ಯಾರಾ ಮಿಲಿಟರಿ ಪಡೆ ಸಾಥ್ ನೀಡಿದೆ.
    ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ 21 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ದಿನದ 24 ಗಂಟೆ ಮೂರು ಶಿಫ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿಯೊಂದು ವಾಹನವನ್ನೂ ತಪಾಸಣೆ ಮಾಡುತ್ತಿದ್ದಾರೆ. ದಾಖಲೆ ಇಲ್ಲದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ 61.74 ಲಕ್ಷ ರೂ. ಮೌಲ್ಯದ ನಗದು, ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
    ಚುನಾವಣೆ ಕರ್ತವ್ಯಕ್ಕೆಂದು ಭದ್ರಾವತಿಯ ರ‌್ಯಾಪಿಡ್ ಆ್ಯಕ್ಷನ್ ಫೋರ್ಸ್ (ಆರ್‌ಎಎಫ್) ಒಂದು ತುಕಡಿ, ಕೆಎಸ್‌ಆರ್‌ಪಿ ನಾಲ್ಕು ತುಕಡಿ ಬುಧವಾರ ಜಿಲ್ಲೆಗೆ ಆಗಮಿಸಿದೆ. ಒಂದು ತುಕಡಿಯಲ್ಲಿ 80 ಅಧಿಕಾರಿ, ಸಿಬ್ಬಂದಿ ಇದ್ದು, ಈ ಪಡೆ ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಬೀಡು ಬಿಡಲಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಕ್ರಮಗಳ ತಡೆಯಲು ಸಾಥ್ ನೀಡಲಿದೆ. ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ಮತ್ತಷ್ಟು ಹೆಚ್ಚಿನ ಅಧಿಕಾರಿ, ಸಿಬ್ಬಂದಿ ಪಡೆ ಜಿಲ್ಲೆಗೆ ಆಗಮಿಸಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಿಯಂತ್ರಣ ಕೊಠಡಿ ಆರಂಭ
    ಚುನಾವಣೆಗೆ ಸಂಬಂದಿಸಿದ ದೂರುಗಳನ್ನು ಸ್ವೀಕರಿಸಲು ಜಿಲ್ಲೆಯಲ್ಲಿ ಕ್ಷೇತ್ರವಾರು ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಹಾನಗಲ್ಲ- 08375-200390, ಶಿಗ್ಗಾಂವಿ-08375-200391, ಹಾವೇರಿ- 08375-200394, ಬ್ಯಾಡಗಿ- 08375-200395, ಹಿರೇಕೆರೂರ: 08375-200394, ರಾಣೆಬೆನ್ನೂರ: 08375-200395 ಹಾಗೂ ಜಿಲ್ಲಾ ಮಟ್ಟದಲ್ಲಿ 1950 ಸಂಖ್ಯೆಯ ಉಚಿತ ಸಹಾಯವಾಣಿ ಆರಂಭಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಈ ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.

    ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ
    ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಆರ್‌ಎಎಫ್, ಸಿಆರ್‌ಪಿಎಫ್ ಹಾಗೂ ಪೊಲೀಸ್ ಸಿಬ್ಬಂದಿ ಪಥ ಸಂಚಲನ ನಡೆಸಲಿದ್ದಾರೆ. ಈ ಮೂಲಕ ಅಪರಾಧ ಕೃತ್ಯ ಎಸಗುವವರಿಗೆ ಮುನ್ನೆಚ್ಚರಿಕೆ ನೀಡಲಿದ್ದಾರೆ. ಈ ನಿಟ್ಟಿನಲ್ಲಿ ಬುಧವಾರ ಆರಂಭಿಕವಾಗಿ ಸವಣೂರ, ಕಾರಡಗಿ, ಬಂಕಾಪುರ, ಬೆಳಗಾಲಪೇಟ, ಬೊಮ್ಮನಹಳ್ಳಿಯಲ್ಲಿ ಪಥ ಸಂಚಲನ ನಡೆಸಲಾಗಿದೆ.

    ಚೆಕ್‌ಪೋಸ್ಟ್ ವಿವರ
    ಜಿಲ್ಲೆಯಲ್ಲಿ 13 ಗಡಿ ಭಾಗಗಳನ್ನು ಸೇರಿ ಒಟ್ಟು 21 ಚೆಕ್‌ಪೋಸ್ಟ್ ತೆರೆಯಲಾಗಿದೆ. ಹಾನಗಲ್ಲ ಕ್ಷೇತ್ರದಲ್ಲಿ ಕೊಪ್ಪರಸಿಕೊಪ್ಪ, ಗೊಂದಿ, ಹಳ್ಳಿಬೈಲ್, ಸಮ್ಮಸಗಿ, ಶಿಗ್ಗಾಂವಿ ಕ್ಷೇತ್ರದಲ್ಲಿ ತಡಸ ವಡಗಟ್ಟಿ, ರಾಮನಕೊಪ್ಪ (ತಡಸ), ಕೋಣನಕೇರಿ (ಬಸವನಕೊಪ್ಪ), ಪಾಣಿಗಟ್ಟಿ, ಹಾವೇರಿ ಕ್ಷೇತ್ರದ ಯಲವಗಿ, ಹಾವೇರಿ ಶಹರದ ಅಜ್ಜಯನ ಗುಡಿ ಬಳಿ, ತೆರೆದಹಳ್ಳಿ, ಕಂಚಾರಗಟ್ಟಿ, ಬ್ಯಾಡಗಿ ಕ್ಷೇತ್ರದಲ್ಲಿ ಕುಮ್ಮೂರ ಕ್ರಾಸ್, ಮೋಟೆಬೆನ್ನೂರ, ಹುಲಬಿಕೊಂಡ, ರಾಣೆಬೆನ್ನೂರ ಕ್ಷೇತ್ರದ ಮಾಕನೂರ ಕ್ರಾಸ್, ತುಮ್ಮಿನಕಟ್ಟಿ, ಹರನಗಿರಿ ಸೇತುವೆ ಹಾಗೂ ಮಾಗೋಡ ಕ್ರಾಸ್‌ನಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ.

    ಚುನಾವಣೆ ಭದ್ರತೆ ಕುರಿತು ಎಲ್ಲ ಅಧಿಕಾರಿ, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಭದ್ರತೆಗೆ ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಕ್ರಮ ನಗದು, ವಸ್ತುಗಳನ್ನು ಜಪ್ತಿ ಮಾಡಲಾಗುತ್ತಿದೆ.
    ಡಾ.ಶಿವಕುಮಾರ ಗುಣಾರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts