More

    ಲೋಕಸಭೆ ಅಖಾಡಕ್ಕೆ ಪೈಪೋಟಿ ಶುರು; ಕೈ-ಕಮಲ ಪಡೆಗಳಲ್ಲಿ ಬೆಳೆಯುತ್ತಿದೆ ಆಕಾಂಕ್ಷಿಗಳ ಪಟ್ಟಿ

    ಕೇಶವಮೂರ್ತಿ ವಿ.ಬಿ. ಹಾವೇರಿ
    ವಿಧಾನಸಭೆ ಚುನಾವಣೆ ಬೆನ್ನಲ್ಲೇ 2024ರ ಲೋಕಸಭೆ ಚುನಾವಣೆ ಅಖಾಡಕ್ಕೆ ಧುಮುಕಲು ಕೈ-ಕಮಲ ನಾಯಕರು ನಾ ಮುಂದು ತಾ ಮುಂದು ಎಂದು ನುಗ್ಗುತ್ತಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳುತ್ತಿದ್ದರೆ, ಮತ್ತೆ ಕೆಲವರು ಸದ್ದಿಲ್ಲದೇ ಹೈಕಮಾಂಡ್ ಮಟ್ಟದಲ್ಲಿ ಟಿಕೆಟ್‌ಗಾಗಿ ಸದ್ದಿಲ್ಲದೇ ಪೈಪೋಟಿ ನಡೆಸುತ್ತಿದ್ದಾರೆ.
    ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದು ಸರ್ಕಾರ ರಚಿಸಿರುವ ಹುರುಪಿನಲ್ಲಿರುವ ಕಾಂಗ್ರೆಸ್ ಪಡೆ ಈ ಬಾರಿ ಶತಾಯಗತಾಯ ಹಾವೇರಿ- ಗದಗ ಲೋಕಸಭೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಒಳಗೊಳಗೆ ತಂತ್ರ ಹೆಣೆಯುತ್ತಿದೆ. ವಿಧಾನಸಭೆಯಲ್ಲಿ ಸೋತರೇನು, ಅದೇ ಬೇರೆ, ಇದೇ ಬೇರೆ. ದೇಶ- ವಿದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರುವ ವರ್ಚಸ್ಸನ್ನೇ ಅಸ್ತ್ರವನ್ನಾಗಿ ಇಟ್ಟುಕೊಂಡು ಚುನಾವಣೆ ಮಾಡುತ್ತೇವೆ. ಮತ್ತೆ ಜಯಭೇರಿ ಭಾರಿಸುತ್ತೇವೆ ಎಂಬ ಭಾವನೆಯಲ್ಲಿ ಬಿಜೆಪಿ ಲೋಕಸಭೆ ಚುನಾವಣೆಯತ್ತ ಚಿಂತನೆ ನಡೆಸುತ್ತಿದೆ.
    ಹಾವೇರಿ- ಗದಗ ಲೋಕಸಭೆ ಕ್ಷೇತ್ರದಲ್ಲಿ ಯಾಟ್ರಿಕ್ ಗೆಲುವು ಸಾಧಿಸಿರುವ ಸಂಸದ ಶಿವಕುಮಾರ ಉದಾಸಿ, ‘ವೈಯಕ್ತಿಕ ಕಾರಣಗಳಿಂದ 2024ರ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಯಾರಿಗೇ ಟಿಕೆಟ್ ಕೊಟ್ಟರೂ ಬೆಂಬಲಿಸುವೆ’ ಎಂದು ಈಗಾಗಲೇ ಸ್ಪಷ್ಟವಾಗಿ ನೀಡಿರುವ ಹೇಳಿಕೆ ಬಿಜೆಪಿ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಹೇಳಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
    ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಮಾಜಿ ಜಿಲ್ಲಾಧ್ಯಕ್ಷ, ರಾಣೆಬೆನ್ನೂರಿನ ವಕೀಲ ಕೆ.ಶಿವಲಿಂಗಪ್ಪ, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ, ಹಿರೇಕೆರೂರಿನ ಪಾಲಾಕ್ಷಗೌಡ ಪಾಟೀಲ, ಕಾಂಗ್ರೆಸ್ ತೊರೆದು ಮತ್ತೆ ಬಿಜೆಪಿಗೆ ವಾಪಸಾಗಿರುವ ಹಾವೇರಿಯ ಜಗದೀಶ ಬಸೇಗೆಣ್ಣಿ, ಮತ್ತಿತರ ಮುಖಂಡರ ಹೆಸರು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.
    ಇನ್ನು ರಾಜ್ಯದಲ್ಲಿ ಸರ್ಕಾರ ರಚಿಸಿರುವ ಕಾಂಗ್ರೆಸ್ ಪಾಳಯ ನಾವೇನು ಕಮ್ಮಿ ಇಲ್ಲ ಎಂಬಂತೆ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಉದಾಸಿ ವಿರುದ್ಧ ಪರಾಭವಗೊಂಡಿದ್ದ ಗದಗ ಜಿಲ್ಲೆಯ ಮಾಜಿ ಶಾಸಕ ಡಿ.ಆರ್.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನಸಭಾ ಸದಸ್ಯ ಸಲೀಂ ಅಹ್ಮದ್ ಹೆಸರು ಈ ಬಾರಿ ಮುಂಚೂಣಿಯಲ್ಲಿದೆ. ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಪುತ್ರ, ಎಐಸಿಸಿ ಕಾರ್ಯದರ್ಶಿ, ಹುಬ್ಬಳ್ಳಿಯ ಶಾಕೀರ್ ಸನದಿ ಹೆಸರೂ ಮುನ್ನೆಲೆಗೆ ಬಂದಿದೆ.
    ಈ ನಡುವೆ ಕೆಲ ಹೊಸ ಮುಖಗಳು ಕೂಡ ಎರಡೂ ಪಕ್ಷದ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದು, ಯಾರಿಗೆ ಟಿಕೆಟ್ ಒಲಿಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
    ಗರಿಬಿಚ್ಚಿದ ಮುಖಂಡರು
    ಸಂಸದ ಶಿವಕುಮಾರ ಉದಾಸಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದ್ದೇ ತಡ ಬಿಜೆಪಿ ಪಾಳಯದಲ್ಲಿ ಆಕಾಂಕ್ಷಿಗಳ ದಂಡೇ ಸೃಷ್ಟಿಯಾಗುತ್ತಿದೆ. ಜಿಲ್ಲಾ ಮಟ್ಟದ ಪ್ರಭಾವಿ ಮುಖಂಡರು, ಯುವ ಮುಖಂಡರು, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಲ್ಲಿ ಇಲ್ಲಿ ಕಾಣಿಸಿಕೊಂಡಿದ್ದ ನಾಯಕರು, ಹೊರ ಜಿಲ್ಲೆಗಳ ಪ್ರಭಾವಿಗಳು ಹಾವೇರಿ- ಗದಗ ಲೋಕಸಭೆ ಕುರ್ಚಿಗೆ ಕರ್ಚೀಫ್ ಹಾಕಲು ಮುಂದಾಗುತ್ತಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ತಾವೂ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳಲು ತಂತ್ರ ಹೆಣೆಯುತ್ತಿದ್ದಾರೆ.
    ರೇಸ್‌ನಲ್ಲಿ ಜೆಡಿಎಸ್ ಹಿಂದೆ
    ಬಿಜೆಪಿ- ಕಾಂಗ್ರೆಸ್ ಪಾಳಯದಲ್ಲಿ ಲೋಕಸಭೆ ಚುನಾವಣೆಗೆ ಪೈಪೋಟಿ ತೀವ್ರವಾಗಿದ್ದರೆ, ಜೆಡಿಎಸ್ ಈ ರೇಸ್‌ನಲ್ಲಿ ಹಿಂದೆ ಉಳಿದಿದೆ. ಚುನಾವಣೆ ಸಮೀಪಿಸುತ್ತಿದ್ದಾಗ, ರಾಷ್ಟ್ರೀಯ ಪಕ್ಷಗಳ ಟಿಕೆಟ್ ವಂಚಿತರು ಸೇರಿದಂತೆ ಹಲವರಿಂದ ಜೆಡಿಎಸ್ ಟಿಕೆಟ್‌ಗೂ ಬೇಡಿಕೆ ಉಂಟಾಗುವ ಸಂಭವವಿದೆ.
    ಬಿ.ಸಿ.ಪಾಟೀಲ ಹಸಿರು ನಿಶಾನೆ
    ‘ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚಿಸಿದರೆ ಸ್ಪರ್ಧಿಸಲು ನಾನು ಸಿದ್ಧ’ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಈಗಾಗಲೇ ಬಹಿರಂಗವಾಗಿ ಹೇಳಿಕೊಳ್ಳುವ ಮೂಲಕ ಚುನಾವಣೆಯ ಕಾವು ಮತ್ತಷ್ಟು ಏರತೊಡಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts