More

    ಜನತೆಗೆ ಸರಿಯಾಗಿ ನೀರು ಪೂರೈಯಿಸಿ; ಶಾಸಕ ರುದ್ರಪ್ಪ ಲಮಾಣಿ ಸೂಚನೆ

    ಹಾವೇರಿ: ನಗರದ ಬಹುತೇಕ ವಾರ್ಡ್‌ಗಳಲ್ಲಿ ಕುಡಿಯುವ ನೀರು ಪೂರೈಕೆ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಮರ್ಪಕ ನೀರು ಪೂರೈಸಲು ನಗರಸಭೆ ಅಧಿಕಾರಿಗಳು ಮತ್ತು ವಾಲ್‌ಮೆನ್‌ಗಳು ಮುಂದಾಗಬೇಕು ಎಂದು ಶಾಸಕ ರುದ್ರಪ್ಪ ಲಮಾಣಿ ಸೂಚಿಸಿದರು.
    ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ನಗರಸಭೆ ಅಧಿಕಾರಿಗಳ ಮತ್ತು ವಾಲ್‌ಮೆನ್‌ಗಳ ಸಭೆಯಲ್ಲಿ ಮಾತನಾಡಿದ ಅವರು, ನಗರಸಭೆ ಪೂರೈಸುತ್ತಿರುವ ಕುಡಿಯುವ ನೀರು ಅಸಮರ್ಪಕ ಮತ್ತು ಅವೈಜ್ಞಾನಿಕವಾಗಿದೆ. ಬೇಸಿಗೆ ದಿನಗಳಲ್ಲಿ ಜನರು ತತ್ತರಿಸುವಂತಾಗಿದೆ. ಈ ಬಗ್ಗೆ ಅನೇಕರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ನೀರಿನ ಸಮಸ್ಯೆಯನ್ನು ಇನ್ನೆಷ್ಟು ದಿನ ಜೀವಂತ ಇಡುತ್ತೀರಿ? ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಹೇಗೆ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
    ಈ ವೇಳೆ ನಗರಸಭೆ ಸಹಾಯಕ ಇಂಜಿನಿಯರ್ ಕೃಷ್ಣ ನಾಯ್ಕ ಮಾತನಾಡಿ, ನಗರದ ವಾರ್ಡ್ ವ್ಯಾಪ್ತಿಯಲ್ಲಿ 387 ಕೊಳವೆ ಬಾವಿಗಳಿವೆ. ಅವುಗಳ ಪೈಕಿ 14 ಕೊಳವೆ ಬಾವಿಗಳು ನೀರುಣಿಸುತ್ತಿಲ್ಲ. ಕಂಚಾರಗಟ್ಟಿ ಗ್ರಾಮದಿಂದ ನಗರಕ್ಕೆ ನೀರು ಪೂರೈಸುವ ಪೈಪುಗಳು ಆಗಿಂದಾಗ್ಗೆ ಒಡೆಯುತ್ತಿವೆ. ಈ ಮಧ್ಯೆ ಅಂತರ್ಜಲ ಮಟ್ಟ ಕುಸಿದ ಪರಿಣಾಮ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ ಎಂದು ತಿಳಿಸಿದರು.
    ಆಗ ಮಧ್ಯೆ ಪ್ರವೇಶಿಸಿದ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಅಧಿಕಾರಿಗಳು ಹೊಸದಾಗಿ ಕೊಳವೆ ಬಾವಿ ಕೊರೆಸಲು ಕ್ರಮ ಕೈಗೊಳ್ಳಬೇಕು. ಮೂರು ದಿನಗಳಿಗೊಮ್ಮೆ ನೀರು ಪೂರೈಸುವಂತಾಗಬೇಕು. ಆಯಾ ವಾರ್ಡ್‌ಗಳ ವಾಲ್‌ಮೆನ್‌ಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು.
    ಈ ಸಮಯದಲ್ಲಿ ತಮಗೆ ಹಳೆಯ ವೇತನ ಪದ್ಧತಿಯಲ್ಲಿ ವೇತನ ಪಾವತಿಸಲಾಗುತ್ತಿದೆ. ದುಬಾರಿ ದಿನಗಳಲ್ಲಿ ಬದುಕು ಮುನ್ನಡೆಸುವುದು ದುಸ್ತರವಾಗಿದೆ. ಈ ಬಗ್ಗೆ ತಾವು ನಮಗೆ ನ್ಯಾಯ ಒದಗಿಸಬೇಕೆಂದು ವಾಲ್‌ಮೆನ್‌ಗಳು ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts