More

    ಮೆಡಿಕಲ್ ಕಾಲೇಜು ಅವೈಜ್ಞಾನಿಕ ಕಾಮಗಾರಿಗೆ ಸಚಿವರು ಗರಂ ; ಮೊದಲು ಎ, ಬಿ ಬ್ಲಾೃಕ್ ಕಾಮಗಾರಿ ಪೂರ್ಣಗೊಳಿಸಲು ತಾಕೀತು

    ಹಾವೇರಿ: ‘ಹಾವೇರಿ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿ ಅವೈಜ್ಞಾನಿಕವಾಗಿದೆ. ಯಾರು ಇದನ್ನೆಲ್ಲ ಯೋಜನೆ ರೂಪಿಸಿದವರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು, ಗುತ್ತಿಗೆದಾರರು ಹಾಗೂ ಡೀನ್ ವಿರುದ್ಧ ಗರಂ ಆದ ಪ್ರಸಂಗ ಜರುಗಿತು.
    ಸೋಮವಾರ ಇಲ್ಲಿನ ದೇವಗಿರಿ ಯಲ್ಲಾಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ಹಾವೇರಿ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿ ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಲ್ಲ ಕಟ್ಟಡಗಳನ್ನು ಒಂದೇ ಬಾರಿಗೆ ಏಕೆ ಆರಂಭಿಸಿದ್ದೀರಿ. ಎಲ್ಲವನ್ನೂ ಮುಗಿಸಲು ಸಮಯಾವಕಾಶ ಬೇಕಾಗುತ್ತದೆ. ಆಗಸ್ಟ್ ಒಳಗಾಗಿ ತರಗತಿಗೆ ಅಗತ್ಯವಾದ ಕೊಠಡಿ ಕೊಡುವುದು ನಿಮ್ಮಿಂದ ಆಗದು. ಮೊದಲಿಗೆ ಮತ್ತು ಬಿ ಬ್ಲಾೃಕ್‌ಗೆ ಹೆಚ್ಚು ಒತ್ತು ಕೊಟ್ಟು ಪೂರ್ಣಗೊಳಿಸಿ ಎಂದು ತಾಕೀತು ಮಾಡಿದರು.
    ಅಕ್ಟೋಬರ್ ವೇಳೆ ತರಗತಿ ಆರಂಭಿಸುವ ನಿರೀಕ್ಷೆ ಇದೆ. ನೂತನ ಬೋಧಕರ ನೇಮಾಕತಿಯಲ್ಲಿ 35ರಲ್ಲಿ 22 ಉಪನ್ಯಾಸಕರು ಹಾಜರಾಗಿದ್ದು, ಉಳಿದವರಿಗೆ ಡೀನ್ ಮುಂದಿನ ವಾರ ನೋಟಿಸ್ ಕೊಡಲಿದ್ದಾರೆ ಎಂದರು.
    ಈ ವೇಳೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ, ಜಿಲ್ಲಾಧಿಕಾರಿ ರಘುನಂನಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್‌ಪಿ ಡಾ.ಶಿವಕುಮಾರ ಗುಣಾರೆ, ಮೆಡಿಕಲ್ ಕಾಲೇಜು ಡೀನ್ ಡಾ.ಉದಯ ಮುಳಗುಂದ, ಇತರರಿದ್ದರು.
    ಸಿಎಂಗೆ ಮೆಡಿಕಲ್ ಕಾಲೇಜು ಅಂದ್ರೆ ಭಯ
    ಬಹಳಷ್ಟು ಮೆಡಿಕಲ್ ಕಾಲೇಜುಗಳ ಕಟ್ಟಡ ನಿರ್ಮಾಣದಲ್ಲಿ ಅವ್ಯವಹಾರ ಆಗಿದೆ. ಹಾಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೆಡಿಕಲ್ ಕಾಲೇಜು ಅಂದರೆ ಭಯ. ಹಾಗಾಗಿ, ಹಾವೇರಿ ಮೆಡಿಕಲ್ ಕಾಲೇಜು ಕಾಮಗಾರಿ ಕುರಿತು ಸಿಎಂ ಪರಿಶೀಲನೆ ನಡೆಸಲಿದ್ದಾರೆ. ಬೇರೆ ಬೇರೆ ಮೆಡಿಕಲ್ ಕಾಲೇಜಿನ ಕಾಮಗಾರಿಗಳಲ್ಲಿ 150 ಕೋಟಿಗಿಂತಲೂ ಹೆಚ್ಚು ಅವ್ಯವಹಾರ ಆಗಿದೆ. ಈ ಬಗ್ಗೆ ಅವರು ತನಿಖೆ ಮಾಡುತ್ತಿದ್ದಾರೆ. ಹಾವೇರಿ ಮೆಡಿಕಲ್ ಕಾಲೇಜಿನಲ್ಲಿ ಈವರೆಗೆ ಯಾವ ಅವ್ಯವಹಾರವೂ ಕಂಡುಬಂದಿಲ್ಲ. ಇಲ್ಲಿಯೂ ಹಾಗೆ ಆಗಬಾರದು ಎಂಬುದು ಸಿಎಂ ಅವರ ಉದ್ದೇಶ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
    ಸಿಎಂ ಆಗಮನದಿಂದ ಕಾಮಗಾರಿಗಳಿಗೆ ಸಿಗಲಿದೆ ವೇಗ
    ಕಳೆದ ಬಾರಿ ಕೆಡಿಪಿ ಸಭೆ ಮಾಡಿದಾಗ ಜಿಲ್ಲೆಯಲ್ಲಿ ಬರ ಸೇರಿದಂತೆ ಹಲವು ಸಮಸ್ಯೆಗಳು ಕಂಡು ಬಂದಿದ್ದವು. ಈ ಕುರಿತು ಹಾವೇರಿಯಲ್ಲಿ ಪರಿಶೀಲನಾ ಸಭೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಲ್ಲ ಶಾಸಕರು ಮನವಿ ಮಾಡಿದ್ದೆವು. ಹಾಗಾಗಿ, ಸಿಎಂ ಮೊದಲ ಪರಿಶೀಲನಾ ಸಭೆಗೆ ಹಾವೇರಿ ಜಿಲ್ಲೆ ಆಯ್ಕೆ ಮಾಡಿಕೊಂಡಿರುವುದು ನಮ್ಮ ಸುದೈವ. ಅವರ ಆಗಮನದಿಂದ ಜಿಲ್ಲೆಯ ಕುಡಿಯುವ ನೀರು, ನೀರಾವರಿ, ಮೆಡಿಕಲ್, ಮತ್ತಿತರ ಕಾಮಗಾರಿಗಳಿಗೆ ವೇಗ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts