More

    ರೈತರ ಆತ್ಮಹತ್ಯೆ ತಡೆಗಾಗಿ ಜಾಗೃತಿ ಅಭಿಯಾನ; ಭಾರತೀಯ ಕಿಸಾನ್ ಸಂಘದಿಂದ ಆಯೋಜನೆ

    ಹಾವೇರಿ: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದ್ದು, ರೈತರಲ್ಲಿ ಧೈರ್ಯ ತುಂಬಲು ಭಾರತೀಯ ಕಿಸಾನ್ ಸಂಘದ ವತಿಯಿಂದ ಜು.24ರಿಂದ 30ರವರೆಗೆ ರಾಜ್ಯಾದ್ಯಂತ ಗ್ರಾಮ ಮಟ್ಟದಲ್ಲಿ ಆತ್ಮಸ್ಥೈರ್ಯ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಾಸರಘಟ್ಟ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ತಿಂಗಳಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಹಾವೇರಿ ಜಿಲ್ಲೆಯೊಂದರಲ್ಲೇ 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಎಲ್ಲರೂ ಯೋಚಿಸಬೇಕಾದ ಸಂಗತಿಯಾಗಿದೆ. ಗುರುವಾರ ಮತ್ತು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಲಾಗುವುದು. ಜು.22ರಿಂದ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಅಭಿಯಾನ ಆರಂಭಿಸಲಾಗುವುದು. ಆತ್ಮಹತ್ಯೆಯೊಂದೇ ಪರಿಹಾರವಲ್ಲ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬುತ್ತೇವೆ ಎಂದರು.
    ರೈತರ ಪರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷೃ ವಹಿಸುತ್ತಿವೆ. ಉಚಿತ ಕೊಡುಗೆಗೆ ಕೊಟ್ಟ ಮಹತ್ವವನ್ನು ರೈತರಿಗೆ ಕೊಟ್ಟರೆ ರೈತನ ಉಳಿವು ಸಾಧ್ಯವಾಗಲಿದೆ. ವಿಧಾನಸಭೆ ಅಧಿವೇಶನದಲ್ಲಿ ಒಬ್ಬ ಬಸ್ ಚಾಲಕ ಆತ್ಮಹತ್ಯೆಗೆ ಯತ್ನಿಸಿದ್ದರ ಕುರಿತು ಚರ್ಚಿಸುತ್ತಾರೆ. ಆದರೆ, ದೇಶಕ್ಕೆ ಅನ್ನ ನೀಡುವ ರೈತನ ಆತ್ಮಹತ್ಯೆಯಂಥ ಗಂಭೀರ ವಿಚಾರದ ಕುರಿತು ಚರ್ಚಿಸುವುದೇ ಇಲ್ಲ. ಸರ್ಕಾರಗಳು ರೈತರ ಆತ್ಮಹತ್ಯೆ ತಡೆಗೆ ಮುಂದಾಗದಿದ್ದರೆ, ರೈತರ ಪರವಾಗಿ ನಿಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
    ಈ ವೇಳೆ ಕಿಸಾನ್ ಸಂಘದ ಉತ್ತರ ಪ್ರಾಂತ ಅಧ್ಯಕ್ಷ ವಿವೇಕ ಮೋರೆ, ಪ್ರಧಾನ ಕಾರ್ಯದರ್ಶಿ ಮಾಧವ ಹೆಗಡೆ, ಕೋಶಾಧ್ಯಕ್ಷ ರಮೇಶ ಕೊರವಿ, ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಜಿಲ್ಲಾಧ್ಯಕ್ಷ ಶ್ರೀನಿವಾಸ ಶಿವಪೂಜಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts