More

    ಹೊರಗುತ್ತಿಗೆ ನೌಕರರ ಪ್ರತಿಭಟನೆ ವಾಪಸ್; ಅಹೋರಾತ್ರಿ ಧರಣಿಗೆ ಮಣಿದ ಸರ್ಕಾರ; ಜಿಲ್ಲಾಸ್ಪತ್ರೆಯಲ್ಲಿ ಮತ್ತೆ ಕೆಲಸಕ್ಕೆ ಹಾಜರಾದ ಕಾರ್ಮಿಕರು

    ಹಾವೇರಿ: ಇಲ್ಲಿನ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಎಂಟು- ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ 37 ಹೊರಗುತ್ತಿಗೆ ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದನ್ನು ಖಂಡಿಸಿ ಜಿಲ್ಲಾಸ್ಪತ್ರೆ ಹೊರಗುತ್ತಿಗೆ ನೌಕರರು, ಕಾರ್ಮಿಕರ ಸಂಘ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿಗೆ ರಾಜ್ಯ ಸರ್ಕಾರ ಕೊನೆಗೂ ಮಣಿಯಿತು. ಶನಿವಾರ ಪ್ರತಿಭಟನೆ ಕೈಬಿಟ್ಟ ನೌಕರರು ಸಂಜೆ ಕರ್ತವ್ಯಕ್ಕೆ ಹಾಜರಾದರು.
    ಹೆಚ್ಚುವರಿ ಕೆಲಸದ ನೆಪ ಹೇಳಿ ಗುತ್ತಿಗೆದಾರರು ಇತ್ತೀಚೆಗೆ 11 ಸಿಬ್ಬಂದಿಯನ್ನು, ನ.23ರಂದು 26 ನೌಕರರನ್ನು ಕೆಲಸದಿಂದ ತೆಗೆದಿದ್ದರು. ಇದರಿಂದ ಕಂಗಾಲಾದ ನೌಕರರು ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಟೆಂಟ್ ಹಾಕಿ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದರು. ಹಾಲಿ ಹೊರಗುತ್ತಿಗೆ ನೌಕರರೂ ಕೆಲಸ ಬಹಿಷ್ಕರಿಸಿ ಧರಣಿಗೆ ಸಾಥ್ ನೀಡಿದ್ದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ ಅವರ ಮನವಿಗೂ ಬಗ್ಗಲಿಲ್ಲ. ಎಲ್ಲರನ್ನೂ ಕೆಲಸಕ್ಕೆ ವಾಪಸ್ ತೆಗೆದುಕೊಳ್ಳುವವರೆಗೂ ಹಿಂದೆ ಸರಿಯಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದರು. ರಾತ್ರಿ ಟೆಂಟ್‌ನಲ್ಲೇ ಮಲಗಿ ಶುಕ್ರವಾರವೂ ಪ್ರತಿಭಟನೆ ಮುಂದುವರೆಸಿದ್ದರು.
    ಪ್ರತಿಭಟನಾ ಸ್ಥಳಕ್ಕೆ ಶುಕ್ರವಾರ ಹಾವೇರಿ ವೈದ್ಯಕೀಯ ಕಾಲೇಜಿ(ಹಿಮ್ಸ್)ನ ಡೀನ್ ಡಾ.ಪ್ರದೀಪಕುಮಾರ ಆಗಮಿಸಿ ಎಲ್ಲ ನೌಕರರನ್ನು ವಾಪಸ್ ಕರ್ತವ್ಯಕ್ಕೆ ನೇಮಿಸಿಕೊಳ್ಳಲಾಗುವುದು. ಈ ಕುರಿತು ಆರೋಗ್ಯ ಇಲಾಖೆ ಆಯುಕ್ತರು, ನಿರ್ದೇಶಕರು, ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಯವರೊಂದಿಗೆ ಚರ್ಚಿಸಿ ನಿರ್ಧರಿಸಲಾಗಿದೆ ಎಂದು ಖಚಿತಪಡಿಸಿದ ಬಳಿಕ ಪ್ರತಿಭಟನೆ ವಾಪಸ್ ಪಡೆದರು. ಸಂಜೆಯೇ ನಗುಮೊಗದಿಂದ ಕರ್ತವ್ಯಕ್ಕೆ ಹಾಜರಾದರು.
    ಪ್ರತಿಭಟನೆ ನೇತೃತ್ವ ವಹಿಸಿಕೊಂಡಿದ್ದ ಸುಭಾಷ ಬೆಂಗಳೂರು, ಸತೀಶ ಮಡಿವಾಳರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ, ಗುತ್ತಿಗೆದಾರ ರತ್ನಾಕರ ಕುಂದಾಪುರ, ಇಮಾಮಸಾಬ್ ನದಾಫ್, ರೇಣುಕಾ ದೇವಿಹೊಸೂರ, ಮತ್ತಿತರರು ಇದ್ದರು.
    ಗುತ್ತಿಗೆದಾರರಿಗೆ ನೋಟಿಸ್
    ಹೆಚ್ಚುವರಿ ನೆಪದಲ್ಲಿ 37 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವಂತೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಈ ಹಿಂದೆ ತೆಗೆದವರನ್ನೂ ವಾಪಸ್ ನೇಮಿಸಲಾಗುತ್ತಿದೆ. ಗುತ್ತಿಗೆದಾರ ರತ್ನಾಕರ ಕುಂದಾಪುರ ಸಿಬ್ಬಂದಿಗೆ ಯಾಕೆ ಹಾಗೆ ಹೇಳಿದ್ದರೋ ಗೊತ್ತಿಲ್ಲ. ಇದರಿಂದ ಗೊಂದಲ ಸೃಷ್ಟಿಯಾಗಿತ್ತು. ಹಾಗಾಗಿ, ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದೇವೆ ಎಂದು ಮೆಡಿಕಲ್ ಕಾಲೇಜು ಡೀನ್ ಪ್ರದೀಪಕುಮಾರ ಹೇಳಿದರು.
    ವಿವಿಧ ವಿಭಾಗಕ್ಕೆ ನೇಮಕ
    37 ಸಿಬ್ಬಂದಿ ಪೈಕಿ ಎಂಸಿಎಚ್ ವಿಭಾಗಕ್ಕೆ 12, ಟ್ರಾಮಾ ಸೆಂಟರ್‌ಗೆ 18, ಜೆಎನ್‌ಎಂಗೆ 4, ಕುಕ್ ಸೆಕ್ಷನ್‌ಗೆ 5 ಸಿಬ್ಬಂದಿ ವಾಪಸ್ ನೇಮಿಸಲಾಗಿದೆ. ಉಳಿದ 6 ಸಿಬ್ಬಂದಿಯನ್ನು ಶೀಘ್ರದಲ್ಲೇ ಮೆಡಿಕಲ್ ಕಾಲೇಜ್‌ಗೆ ನೇಮಿಸಲು ಡೀನ್ ಒಪ್ಪಿದ್ದಾರೆ. ಅಲ್ಲಿಯವರೆಗೆ ಆಸ್ಪತ್ರೆಯಲ್ಲಿ ಕೆಲಸ ಮಾಡಲಿದ್ದಾರೆ ಎಂದು ಗುತ್ತಿಗೆದಾರ ರತ್ನಾಕರ ತಿಳಿಸಿದ್ದಾರೆ.
    ಮೊದಲು ಧನಿ ಎತ್ತಿದ್ದು ‘ವಿಜಯವಾಣಿ’
    ಜಿಲ್ಲಾಸ್ಪತ್ರೆಯ 26 ಸಿಬ್ಬಂದಿಯನ್ನು ದಿಢೀರನೇ ಕೆಲಸದಿಂದ ತೆಗೆದು ಹಾಕಿದ್ದರ ಕುರಿತು ‘ವಿಜಯವಾಣಿ’ ಪತ್ರಿಕೆ ಮೊದಲು ಧನಿ ಎತ್ತಿತ್ತು. ನ.24ರಂದು ‘ಜಿಲ್ಲಾಸ್ಪತ್ರೆ 26 ಹೊರಗುತ್ತಿಗೆ ಸಿಬ್ಬಂದಿಗೆ ಕತ್ತರಿ’ ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿ, ಜಿಲ್ಲಾಡಳಿತದ ಗಮನ ಸೆಳೆದಿತ್ತು. ವರದಿ ಬೆನ್ನಲೇ ನೌಕರರು ಪ್ರತಿಭಟನೆ ಆರಂಭಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts