More

    ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ 16ರಿಂದ; ಯೋಗ, ಫಲಪುಷ್ಪ ಪ್ರದರ್ಶನ, ಜಾನುವಾರು ಜಾತ್ರೆ ಆಯೋಜನೆ; ಶ್ರೀ ಸದಾಶಿವ ಸ್ವಾಮೀಜಿ

    ಹಾವೇರಿ: ಮರಿ ಕಲ್ಯಾಣ ಖ್ಯಾತಿಯ ಹಾವೇರಿಯಲ್ಲಿ ಭಕ್ತಿ ಪರಂಪರೆಯನ್ನು ಬಿಂಬಿಸಿರುವ ಹುಕ್ಕೇರಿ ಮಠದ ರಾಜಯೋಗಿ ಶ್ರೀ ಶಿವಬಸವ ಮಹಾಶಿವಯೋಗಿಯವರ 28ನೇ ಹಾಗೂ ಶ್ರೀ ಶಿವಲಿಂಗ ಸ್ವಾಮೀಜಿಯವರ 15ನೇ ಪುಣ್ಯಸ್ಮರಣೆ ಹಾಗೂ ಜಾತ್ರಾ ಮಹೋತ್ಸವ ಜ.16ರಿಂದ 20ರವರೆಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
    ನಗರದ ಹುಕ್ಕೇರಿ ಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಬಸವ ಸ್ವಾಮೀಜಿ ಶ್ರೀಮಠದ ಘನತೆ ಹೆಚ್ಚಿಸಲು ಕಾರಣರಾದರೆ, ಶಿವಲಿಂಗ ಸ್ವಾಮೀಜಿ ಶಿಕ್ಷಣ ಸಂಸ್ಥೆಗಳಿಗೆ ಭದ್ರ ಬುನಾದಿ ಹಾಕಿಕೊಟ್ಟರು. ಈ ಮಹಾನ್ ಪುರುಷರ ಸ್ಮರಣೋತ್ಸವ ನೆಪದಲ್ಲಿ ಭಕ್ತರಿಗೆ ಜ್ಞಾನ ದಾಸೋಹ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಉಪನ್ಯಾಸ, ಪ್ರವಚನ, ಸಾಹಿತ್ಯ, ಸಂಗೀತ, ಕಲೆ ಮೇಳೈಸಲಿದೆ. ಈ ಬಾರಿ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಮೈದಾನದಲ್ಲಿ ಜಾತ್ರೆ ಜರುಗಲಿದೆ ಎಂದರು.
    ಜ.16ರಂದು ಬೆಳಗ್ಗೆ 8.30ಕ್ಕೆ ಧ್ವಜಾರೋಹಣ, ಸಂಜೆ 6.30ಕ್ಕೆ ವೇದಿಕೆ ಕಾರ್ಯಕ್ರಮ, ನಂತರ ಜಾನಪದ ಸಂಭ್ರಮ, ಅಂತಾರಾಷ್ಟ್ರೀಯ ಯೋಗಪಟುಗಳಿಂದ ಯೋಗ ಪ್ರದರ್ಶನ ಜರುಗಲಿದೆ. ಜ.17ರಂದು ಬೆಳಗ್ಗೆ 10ಕ್ಕೆ ಶಿವಬಸವ ಜಾನುವಾರು ಜಾತ್ರೆ ಆರಂಭವಾಗಲಿದೆ. ಜ.18ರಂದು ಸಂಜೆ 6.30ಕ್ಕೆ ವೇದಿಕೆ ಕಾರ್ಯಕ್ರಮ, ಜಾನಪದ ವೈಭವ ಜರುಗಲಿದೆ. ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ದೊರೆಯಲಿದೆ. ಜ.19ರಂದು ಸಂಜೆ 6.30ಕ್ಕೆ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮಾರಂಭ ಜರುಗಲಿದೆ. ಎಂದಿನಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
    ಸುದ್ದಿಗೋಷ್ಠಿಯಲ್ಲಿ ಶ್ರೀಮಠದ ಆಡಳಿತಮಂಡಳಿ ಚೇರ್ಮನ್ ಎಸ್.ಎಸ್.ಮುಷ್ಠಿ, ಸದಸ್ಯರಾದ ಆರ್.ಎಸ್.ಮಾಗನೂರ, ಉತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ ಕೂಡ್ಲಪ್ಪನವರ, ಕಾರ್ಯದರ್ಶಿ ಆನಂದ ಅಟವಾಳಗಿ, ಪದಾಧಿಕಾರಿಗಳಾದ ಕರಬಸಪ್ಪ ಹಲಗಣ್ಣವರ, ಶಿವಲಿಂಗಪ್ಪ ಕಲ್ಯಾಣಿ, ಶಿವಯೋಗಿ ಹುಲಿಕಂತಿಮಠ, ವನಿತಾ ಮಾಗನೂರ, ಮಹಾಂತಪ್ಪ ಹಲಗಣ್ಣವರ, ಬಿ.ಬಸವರಾಜ, ಇತರರಿದ್ದರು.
    ಭವ್ಯ ಮೆರವಣಿಗೆ, ನಾಟಕ ಪ್ರದರ್ಶನ
    ಜ.21ರಂದು ಸಂಜೆ 4 ಗಂಟೆಗೆ ವಿವಿಧ ಕಲಾ ತಂಡಗಳೊಂದಿಗೆ ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆ ಜರುಗಲಿದೆ. ಜ.22ರಂದು ಸಂಜೆ 5.30ಕ್ಕೆ ಮಕ್ಕಳ ಜಾತ್ರೆ ಸಾಂಸ್ಕೃತಿಕ ಸಂಜೆ, ರಾತ್ರಿ 8.30ಕ್ಕೆ ಬಸವರಾಜ ಬೆಂಗೇರಿ ರಚನೆಯ ಕತೃ ಶ್ರೀ ಜಗದ್ಗುರು ಶಿರಹಟ್ಟಿ ಶ್ರೀ ಫಕ್ಕೀರೇಶ್ವರ ಮಹಾತ್ಮೆ ನಾಟಕ ಪ್ರದರ್ಶನವಾಗಲಿದೆ ಎಂದು ಶ್ರೀಗಳು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts