More

    ಕಲಕೇರಿ ಗ್ರಾಮದ ಸ್ಮಾರಕಗಳ ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು; ದೇಗುಲಕ್ಕೆ ಜೀವಕಳೆ; ಕೆಎಲ್‌ಇ ಜಿಎಚ್ ಕಾಲೇಜ್ ಇತಿಹಾಸ ವಿಭಾಗದ ಕಾರ್ಯಕ್ಕೆ ಮೆಚ್ಚುಗೆ

    ಹಾನಗಲ್ಲ: ತಾಲೂಕಿನ ಕಲಕೇರಿ ಗ್ರಾಮದ ಕೆರೆ ಸೋಮೇಶ್ವರ ದೇವಾಲಯದ ಆವರಣದಲ್ಲಿ ಹಾವೇರಿಯ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಇತಿಹಾಸ ವಿಭಾಗ ಮತ್ತು ಐತಿಹಾಸಿಕ ಪರಂಪರಾ ಕೂಟ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಸ್ಮಾರಕಗಳ ಪರಿಚಯ ಹಾಗೂ ಸ್ವಚ್ಛತೆ ಕಾರ್ಯಕ್ರಮ’ದಲ್ಲಿ ವಿದ್ಯಾರ್ಥಿಗಳ ತಂಡ ಸ್ಮಾರಕಗಳಿಗೆ ಜೀವಕಳೆ ತುಂಬಿದ್ದಾರೆ. ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಸ್.ಆರ್.ಕೋರಿಶೆಟ್ಟರ್ ಮಾತನಾಡಿ, ನಮ್ಮ ಪರಂಪರೆಯ ಕುರಿತು ಪ್ರೀತಿ, ಅಭಿಮಾನ, ಗೌರವಗಳು ಜಾಗೃತವಾಗಿರಬೇಕು. ಪರಂಪರೆ, ಇತಿಹಾಸ ಇವೆಲ್ಲ ಒಂದರ್ಥದಲ್ಲಿ ಶ್ರೇಷ್ಠವಾದಂತಹ ಒಂದು ಭಾವನೆ, ಪ್ರಜ್ಞಾವಂತಿಕೆ ಬೆಳೆದ ಹಾಗೆ ಪರಂಪರೆಯ ಮೇಲಿನ ಪ್ರೀತಿಯೂ ಬೆಳೆಯಬೇಕು. ನಮ್ಮ ಸುತ್ತಮುತ್ತಲಿರುವ ಪ್ರಾಚೀನ ಸ್ಮಾರಕಗಳ ರಕ್ಷಣೆ, ಅದರ ಕುರಿತಾದ ತಿಳುವಳಿಕೆ ಹೆಚ್ಚಾಗಬೇಕಿದೆ ಎಂದರು.
    ನಮ್ಮ ಪೂರ್ವಜರು ಕೊಡುಗೆಯಾಗಿ ನೀಡಿದ ಸ್ಮಾರಕಗಳ ಸಂರಕ್ಷಣೆ ನಮ್ಮ ಹೊಣೆಯಲ್ಲವೇ? ಪರಂಪರೆ ಎಂದರೆ ಕೇವಲ ಸ್ಮಾರಕಗಳೊಂದೇ ಅಲ್ಲ. ಅದರ ವ್ಯಾಪ್ತಿ ತುಂಬಾ ವಿಸ್ತಾರವಾದದ್ದು. ಹಳೆಯ ಶ್ರೇಷ್ಠತೆಗಳೆಲ್ಲವನ್ನೂ ಅಳಿಯಲು ಬಿಡದೆ ಉಳಿಸಿಕೊಂಡು ಹೊಳೆಯುವಂತೆ ಮಾಡೋಣ. ಪರಂಪರೆಯನ್ನ ಪ್ರೀತಿಸೋಣ ಮತ್ತು ಸಂರಕ್ಷಿಸೋಣ. ಸ್ಮಾರಕಗಳು ನಮ್ಮ ನಾಡಿನ ಸಾಂಸ್ಕೃತಿಕ ಪ್ರತಿಬಿಂಬಗಳಾಗಿದ್ದು, ನಮ್ಮ ಪ್ರಾಚೀನ ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಯನ್ನು ಅರಿಯಲು ಸಹಾಯಕವಾಗಿವೆ ಎಂದು ಕರೆ ನೀಡಿದರು.
    ಪ್ರಾಧ್ಯಾಪಕ ಡಾ.ಶರಣಪ್ಪ ಜಗ್ಗಲ ಮಾತನಾಡಿ, ಸ್ಮಾರಕಗಳು ನಮ್ಮೆಲ್ಲರ ಪರಂಪರೆ. ಐತಿಹಾಸಿಕ ದೇವಾಲಯಗಳು, ಶಾಸನಗಳು, ಸ್ಮಾರಕ ಶಿಲ್ಪಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವುದು ನಮ್ಮ ಕರ್ತವ್ಯವಾಗಿದೆ. ಈ ಕಾರ್ಯಕ್ರಮದ ಮೂಲಕ ಸ್ಮಾರಕಗಳ ಮಹತ್ವದ ಬಗ್ಗೆ ಸ್ಥಳೀಯರಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
    ಹೇರೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗುಂಡನಗೌಡ ಪಾಟೀಲ, ಪಿಡಿಒ ಎಸ್.ಪಿ.ಮರಾಠಿ, ಸದಸ್ಯರಾದ ರಾಜು ಕಮ್ಮಾರ, ಗೂಳಪ್ಪ ಹುಳ್ಳಾಳ, ಮಂಜಮ್ಮ ಕಿರವಾಡಿ ಹಾಗೂ ಮಾಜಿ ಸೈನಿಕ ನವೀನಕುಮಾರ ಮೆಳ್ಳಳ್ಳಿ, ಹಾಗೂ ಗ್ರಾಮದ್ಥರು ಉಪಸ್ಥಿತರಿದ್ದರು. ಸಿಂಧೂ ಬುಳ್ಳಣ್ಣನವರ ನಿರೂಪಿಸಿದರು. ಕಾರ್ತಿಕ ಪವಾರ ವಂದಿಸಿದರು.

    ಕೋಟ್:
    ನಮ್ಮ ಸ್ಮಾರಕಗಳು ಉಳಿದರೆ ನಮ್ಮ ಸಂಸ್ಕೃತಿ ಹಾಗೂ ಇತಿಹಾಸ ಉಳಿದಂತೆ. ದೇವಾಲಯಗಳ ಸ್ವಚ್ಛತಾ ಕಾರ್ಯ ಕೇವಲ ಸರ್ಕಾರದ ಕಾರ್ಯವಲ್ಲ. ಸಂಘ-ಸಂಸ್ಥೆಗಳ, ಪ್ರಜ್ಞಾವಂತರ, ಸಮಾಜದ ಕಾರ್ಯವೂ ಹೌದು. ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳ ಮನಸ್ಸು ಬೇರೆ ಕಡೆ ಹೋಗುತ್ತಿದೆ. ಆದರೆ, ಇಂತಹ ಸ್ಮಾರಕಗಳ ಪರಿಚಯ ಮತ್ತು ಸ್ವಚ್ಛತಾ ಕಾರ್ಯಕ್ರಮಗಳ ಮೂಲಕ ಅವರಲ್ಲಿ ನಮ್ಮ ಪರಿಸರ ಹಾಗೂ ನಮ್ಮ ಪರಂಪರೆಯ ಅರಿವನ್ನು ಮೂಡಿಸಲು ಸಾಧ್ಯ.
    ಡಾ.ಸಂಧ್ಯಾ ಕುಲಕರ್ಣಿ, ಪ್ರಾಚಾರ್ಯೆ, ಜಿಎಚ್ ಕಾಲೇಜ್, ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts