More

    ಸರ್ಕಾರಿ ನೌಕರರ ಮುಷ್ಕರದಿಂದ ರೋಗಿಗಳ ಪರದಾಟ; ಬಹುತೇಕ ಕಚೇರಿಗಳಿಗೆ ಬೀಗ

    ಹಾವೇರಿ: ವೇತನ ಪರಿಷ್ಕರಣೆ, ಒಪಿಎಸ್ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬುಧವಾರ ಕೆಲ ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲ ಇಲಾಖೆಗಳು ಬಂದ್ ಆಗಿದ್ದವು. ಇದರಿಂದಾಗಿ ಜಿಲ್ಲೆಯಲ್ಲಿ ಬಹುತೇಕ ಸರ್ಕಾರಿ ಸೇವೆ ಬಂದ್ ಆದಂತಾಗಿತ್ತು. ಇದರಿಂದ ಸಾರ್ವಜನಿಕರು, ರೋಗಿಗಳು ಪರದಾಡಿದರು. ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಬೆಳಗ್ಗೆಯಿಂದಲೇ ತುರ್ತು ಸೇವಾ ಘಟಕ, ಐಸಿಯು, ಹೆರಿಗೆ ಘಟಕ ಹೊರತುಪಡಿಸಿ ಉಳಿದ ಸೇವೆಗಳನ್ನು ಬಂದ್ ಮಾಡಲಾಗಿತ್ತು. ಒಪಿಡಿ ಬಂದ್ ಮಾಡಲಾಗಿತ್ತು.

    ಕೆಲವೇ ಸಿಬ್ಬಂದಿ ಮಾತ್ರ ಕಪ್ಪು ಪಟ್ಟಿ ಧರಿಸಿ ಸೇವೆಗೆ ಹಾಜರಾಗಿದ್ದರು. ಇದರಿಂದಾಗಿ ಆಸ್ಪತ್ರೆಗೆ ಬಂದ ಕೆಲ ರೋಗಿಗಳು ಕಣ್ಣೀರಿಡುತ್ತಿದ್ದ ದೃಶ್ಯ ಕಂಡು ಬಂತು. ಕೆಲವರು ಖಾಸಗಿ ಆಸ್ಪತ್ರೆಯ ಮೊರೆ ಹೋದರು. ಜಿಲ್ಲೆಯ ಇತರ ತಾಲೂಕು ಆಸ್ಪತ್ರೆಗಳಲ್ಲೂ ಸಿಬ್ಬಂದಿ ಹೆಚ್ಚಾಗಿ ಕಂಡು ಬರಲಿಲ್ಲ. ರೋಗಿಗಳ ಸಂಖ್ಯೆಯೂ ವಿರಳವಾಗಿತ್ತು. ಜನರಿಂದ ತುಂಬಿರುತ್ತಿದ್ದ ಆಸ್ಪತ್ರೆ ಬಣಗುಡುತ್ತಿತ್ತು. ಜಿಲ್ಲೆಯ ವಿವಿಧ ಇಲಾಖೆಗಳ 18,000 ರಾಜ್ಯ ಸರ್ಕಾರಿ ನೌಕರರ ಪೈಕಿ ಶೇ.90ಕ್ಕೂ ಅಧಿಕ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದರು.

    ಆರೋಗ್ಯ ಇಲಾಖೆ, ಪೊಲೀಸ್, ಅಗ್ನಿಶಾಮಕ, ಹಾಸ್ಟೆಲ್, ಸೇರಿ ಕೆಲ ತುರ್ತು ಸೇವೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಸರ್ಕಾರಿ ಸೇವೆ ಬಂದ್ ಆಗಿತ್ತು. ಜಿಲ್ಲೆಯ ಎಲ್ಲ ಸರ್ಕಾರಿ ಶಾಲಾ- ಕಾಲೇಜುಗಳು ಬಂದ್ ಆಗಿದ್ದವು. ಜಿಲ್ಲಾಧಿಕಾರಿ ಕಚೇರಿಯ ಬಹುತೇಕ ನೌಕರರು ಮೊದಲೇ ಗೈರಾಗಿದ್ದರು. ಮೇಲಧಿಕಾರಿಗಳ ಒತ್ತಡಕ್ಕೆ ಮಣಿದು ಕೆಲ ನೌಕರರು ಕಚೇರಿಗೆ ಆಗಮಿಸಿದ್ದರು. ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ನಂತರ ಉಳಿದವರ ಮನವೊಲಿಸಿ ಮನೆಗೆ ಕಳುಹಿಸಿದರು.

    ಹಾವೇರಿ, ರಾಣೆಬೆನ್ನೂರ, ಬ್ಯಾಡಗಿ, ಹಿರೇಕೆರೂರ, ರಟ್ಟೀಹಳ್ಳಿ, ಶಿಗ್ಗಾಂವಿ, ಸವಣೂರ, ಹಾನಗಲ್ಲ ತಹಸೀಲ್ದಾರ್ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ನೌಕರರು ಕರ್ತವ್ಯಕ್ಕೆ ಗೈರಾಗಿದ್ದರು. ಇದರಿಂದ ಸಾರ್ವಜನಿಕರ ಸರ್ಕಾರಿ ಕೆಲಸಗಳಿಗೆ ತೊಂದರೆ ಉಂಟಾಗಿತ್ತು. ರಾಜ್ಯ ಸರ್ಕಾರ ಶೇ.17ರಷ್ಟು ವೇತನ ಪರಿಷ್ಕರಣೆಗೆ ಒಪ್ಪಿದ ಬಳಿಕ ಮಧ್ಯಾಹ್ನವೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಕೆಲ ನೌಕರರು ಹಾಜರಾದರೆ ಮತ್ತೆ ಕೆಲವರು ಹಾಜರಿ ಹಾಕಿ ವಾಪಸಾದದ್ದು ಕಂಡು ಬಂತು.

    ಹಸುಗೂಸು ಹೊತ್ತು ಓಡಿಬಂದ ದಂಪತಿ
    ಸವಣೂರು ತಾಲೂಕಿನ ಮೆಳ್ಳಾಗಟ್ಟಿ ಗ್ರಾಮದ 8 ತಿಂಗಳ ಹಸುಗೂಸೊಂದು ಮಂಗಳವಾರ ರಾತ್ರಿಯಿಂದ ತೀವ್ರ ಜ್ವರದಿಂದ ಬಳಲುತ್ತಿತ್ತು. ಆತಂಕಗೊಂಡ ಪಾಲಕರು ಬೆಳಗ್ಗೆ ಮಗುವನ್ನು ಎತ್ತಿಕೊಂಡು ಓಡೋಡಿ ಜಿಲ್ಲಾಸ್ಪತ್ರೆ ಕಡೆಗೆ ಬಂದರು. ತುರ್ತು ಘಟಕದಲ್ಲಿ ಚಿಕಿತ್ಸೆ ಪಡೆದರು. ಸಿಬ್ಬಂದಿ ಮಗುವನ್ನು ಉಳಿಸಿಕೊಳ್ಳದೇ ವಾಪಸ್ ಕಳುಹಿಸಿದರು.
    ಕೋಟ್
    ನಮ್ಮ ಪ್ರತಿಭಟನೆ ಯಶಸ್ವಿಯಾಗಿದೆ. ರಾಜ್ಯ ಸರ್ಕಾರ ವೇತನ ಹೆಚ್ಚಳ ಮಾಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಸೂಚನೆ ಮೇರೆಗೆ ಬುಧವಾರ ಮಧ್ಯಾಹ್ನವೇ ಮುಷ್ಕರ ವಾಪಸ್ ಪಡೆಯಲಾಗಿದೆ.
    ಅಮೃತಗೌಡ ಪಾಟೀಲ, ಜಿಲ್ಲಾಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts