More

    ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ವಹಿಸಿ; ಬ್ಯಾಂಕ್ ವಹಿವಾಟು ಗಮನಿಸಿ; ವೆಚ್ಚ ನಿರ್ವಹಣಾ ಅಧಿಕಾರಿಗಳಿಗೆ ಡಿಸಿ ರಘುನಂದನ ಮೂರ್ತಿ ಸೂಚನೆ

    ಹಾವೇರಿ: ಚುನಾವಣಾ ವೆಚ್ಚಗಳ ಮೇಲೆ ತೀವ್ರವಾದ ನಿಗಾ ವಹಿಸಬೇಕು. ಪ್ರತಿ ರಾಜಕೀಯ ಚಟುವಟಿಕೆಗಳು, ಚುನಾವಣಾ ಸಭೆ-ಸಮಾರಂಭ, ರ‌್ಯಾಲಿಗಳು ಹಾಗೂ ಸಂಶಯಾಸ್ಪದ ಬ್ಯಾಂಕ್ ವಹಿವಾಟು ಹಾಗೂ ವ್ಯಾಲೆಟ್ ಮೂಲಕ ಹಣ ವರ್ಗಾವಣೆಯ ಚಟುವಟಿಕೆ ಮೇಲೆ ನಿಗಾ ವಹಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ಸೂಚನೆ ನೀಡಿದರು.
    ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಲೋಕಸಭಾ ಚುನಾವಣೆಯ ಗದಗ ಹಾಗೂ ಹಾವೇರಿ ಜಿಲ್ಲೆಯಲ್ಲಿ ನೇಮಕಗೊಂಡಿರುವ ವಿಧಾನಸಭಾ ಕ್ಷೇತ್ರವಾರು ವೆಚ್ಚ ನಿಗಾ ತಂಡಗಳ ಮುಖ್ಯಸ್ಥರು, ಸದಸ್ಯರು ಹಾಗೂ ಸಹಾಯಕ ವೆಚ್ಚ ವೀಕ್ಷಕರ ತಂಡದ ಮುಖ್ಯಸ್ಥರು ಹಾಗೂ ಸದಸ್ಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ನಿಗಾವಹಿಸುವುದರ ಜತೆಗೆ ರಾಜಕೀಯ ಪಕ್ಷ ಹಾಗೂ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ದೈನಂದಿನ ಚುನಾವಣಾ ವೆಚ್ಚಗಳ ಮೇಲೆ ನಿಗಾ ವಹಿಸಬೇಕು. ಅಭ್ಯರ್ಥಿಗಳು ನಡೆಸುವ ಸಭೆ-ಸಮಾರಂಭ, ಸಮಾವೇಶ, ರ‌್ಯಾಲಿಗಳ ಮೇಲೆ ಗಮನ ಹರಿಸಬೇಕು. ಪ್ರತಿ ಚಟುವಟಿಕೆಗಳನ್ನು ವಿಡಿಯೋ ಚಿತ್ರೀಕರಣದ ಮೂಲಕ ಸಾಕ್ಷ್ಯಗಳನ್ನು ಕ್ರೂಢೀಕರಿಸಿ ವೆಚ್ಚದ ಮಾಹಿತಿಯನ್ನು ಸಲ್ಲಿಸಬೇಕು ಎಂದರು.
    ಸುವಿಧಾ ಆ್ಯಪ್‌ನಲ್ಲಿ ಚುನಾವಣಾ ಸಭೆ-ಸಮಾರಂಭ, ರ‌್ಯಾಲಿಗಳ ಅನುಮತಿಗೆ ಅರ್ಜಿ ಸಲ್ಲಿಸಲಾಗುತ್ತದೆ. ವೆಚ್ಚ ನಿಗಾ ತಂಡದ ಮುಖ್ಯಸ್ಥರು ಆಯಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ನಿರಂತರ ಸಂಪರ್ಕ ಹಾಗೂ ಸಮನ್ವತೆಯನ್ನು ಹೊಂದಬೇಕು. ಕೇವಲ ಅನುಮತಿ ಪಡೆದ ಸಭೆ-ಸಮಾರಂಭಗಳಲ್ಲದೆ ಅನುಮತಿ ಪಡೆಯದೇ ಇರುವ ಸಮಾರಂಭಗಳ ವಿಡಿಯೋ ಚಿತ್ರೀಕರಣ ಮಾಡಬೇಕು ಹಾಗೂ ಜನ್ಮದಿನ ಸಮಾರಂಭ, ಇತರ ಖಾಸಗಿ ಸಮಾರಂಭಗಳಲ್ಲಿ ರಾಜಕೀಯ ಚಟುವಟಿಕೆಗಳ ಕುರಿತಂತೆ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.
    ಚುನಾವಣಾ ರ‌್ಯಾಲಿ, ಸಮಾರಂಭಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಊಟ-ಉಪಹಾರ ಪೂರೈಕೆ ಮಾಡುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಆದರೆ ಅಭ್ಯರ್ಥಿ ಜತೆಗೆ ಪ್ರಚಾರಕ್ಕೆ ಬರುವ ಕಾರ್ಯಕರ್ತರಿಗೆ ಪೂರೈಸುವ ಊಟ-ಉಪಹಾರ ವೆಚ್ಚವನ್ನು ಈಗಾಗಲೇ ಜಿಲ್ಲಾ ಚುನಾವಣಾ ಅಧಿಕಾರಿಗಳು ಅಧಿಸೂಚಿತ ದರಪಟ್ಟಿಯಂತೆ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು ಎಂದರು.
    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಇತರರಿದ್ದರು.
    ಸ್ಟಾರ್ ಕ್ಯಾಂಪೇನರ್ ವೆಚ್ಚ
    ಚುನಾವಣಾ ಪ್ರಚಾರಕ್ಕಾಗಿ ಆಗಮಿಸುವ ಸ್ಟಾರ್ ಕ್ಯಾಂಪೆನೇರ್ ಬಳಸುವ ಹೆಲಿಕ್ಯಾಪ್ಟರ್ ವೆಚ್ಚ ಆಯಾ ಪಕ್ಷದ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು. ಆದರೆ, ಹೆಲಿಪ್ಯಾಡ್ ನಿರ್ಮಾಣ ವೆಚ್ಚ ಆಯಾ ಕ್ಷೇತ್ರದ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರ್ಪಡೆ ಮಾಡಬೇಕು. ಸ್ಟಾರ್ ಕ್ಯಾಂಪೆನೇರ್ ನಡೆಸುವ ಚುನಾವಣಾ ಸಮಾರಂಭದ ವೇದಿಕೆಯಲ್ಲಿ ಆಯಾ ಕ್ಷೇತ್ರದ ಅಭ್ಯರ್ಥಿ ಜತೆಗೆ ಇತರ ಕ್ಷೇತ್ರದ ಅಭ್ಯರ್ಥಿಗಳು ವೇದಿಕೆ ಹಂಚಿಕೊಂಡರೆ ಸಮಾರಂಭದ ವೆಚ್ಚವನ್ನು ಎಲ್ಲ ಅಭ್ಯರ್ಥಿಗಳಿಗೆ ವಿಂಗಡಣೆ ಮಾಡಿ ಎಂದು ಡಿಸಿ ತಿಳಿಸಿದರು.
    95 ಲಕ್ಷ ರೂ. ಮಿತಿ
    ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗೆ ಗರಿಷ್ಠ 95 ಲಕ್ಷ ರೂ. ಮಿತಿಯೊಳಗೆ ಖರ್ಚು ಮಾಡುವ ಅವಕಾಶವನ್ನು ಚುನಾವಣಾ ಆಯೋಗ ನಿಗಧಿಪಡಿಸಿದೆ. 10 ಸಾವಿರ ರೂ.ಗಿಂತ ಹೆಚ್ಚಿನ ಖರ್ಚನ್ನು ನಗದಾಗಿ ಭರಿಸುವಂತಿಲ್ಲ. ಉಳಿದ ಹಣವನ್ನು ಬ್ಯಾಂಕ್ ಖಾತೆ ಮೂಲಕ ಪಾವತಿಸಬೇಕು. ಪ್ರತಿ ವೆಚ್ಚಕ್ಕೂ ರಸೀದಿ ಸಲ್ಲಿಸಬೇಕು. ಸೂಕ್ತ ದಾಖಲೆ ಇಲ್ಲದೆ 50 ಸಾವಿರ ರೂ.ಗಿಂತ ಹೆಚ್ಚು ಹಣವನ್ನು ಯಾರೂ ಕೊಂಡೊಯ್ಯುವಂತಿಲ್ಲ. ದಾಖಲೆಗಳಿಲ್ಲದೆ ವಸ್ತು, ಆಭರಣ, ನಗದು ಸೀಜರ್ ಕಮೀಟಿಗೆ ವರ್ಗಾಯಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಹಾಗೂ ಚುನಾವಣೆಯ ವೆಚ್ಚ ನಿರ್ವಾಹಣಾ ತಂಡದ ನೋಡಲ್ ಅಧಿಕಾರಿ ವಸಂತಕುಮಾರ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts