More

    ಉ.ಕ. ಹೆಬ್ಬಾಗಿಲಲ್ಲಿ ಅಬ್ಬರದ ಪ್ರಚಾರ; ಇನ್ಮುಂದೆ ಶುರು ಅಸಲಿ ಆಟ

    ಕೇಶವಮೂರ್ತಿ ವಿ.ಬಿ. ಹಾವೇರಿ

    ಬಂಡಾಯ ಅಭ್ಯರ್ಥಿಗಳ ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದ ಕಾಂಗ್ರೆಸ್, ಬಿಜೆಪಿ ಮುಖಂಡರು ಇದೀಗ ಚುನಾವಣೆಯ ಅಬ್ಬರದ ಪ್ರಚಾರದತ್ತ ಗಮನ ಹರಿಸಿದ್ದಾರೆ. ಎರಡೂ ಪಕ್ಷಗಳ ರಾಷ್ಟ್ರೀಯ ನಾಯಕರನ್ನು ಜಿಲ್ಲೆಗೆ ಕರೆಸುವ ಮೂಲಕ ಇನ್ಮುಂದೆ ಅಸಲಿ ಆಟ ಶುರು ಮಾಡಲಿದ್ದಾರೆ. ಈಗಾಗಲೇ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹಾನಗಲ್ಲ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಬೃಹತ್ ಬಹಿರಂಗ ಸಮಾವೇಶದಲ್ಲಿ ಪ್ರಚಾರ ನಡೆಸುವ ಮೂಲಕ ಪಕ್ಷದಲ್ಲಿ ಉತ್ಸಾಹ ತುಂಬಿದ್ದಾರೆ. ಎಲ್ಲ ಅಭ್ಯರ್ಥಿಗಳಿಗೆ ಒಗ್ಗಟ್ಟಿನ ಪಾಠ ಹೇಳುವ ಮೂಲಕ ಹೆಚ್ಚು ಸೀಟು ಗೆಲ್ಲುವಂತೆ ಸೂಚಿಸಿದ್ದಾರೆ. ರಾಹುಲ್ ಭೇಟಿಯಿಂದಾಗಿ ಜಿಲ್ಲೆಯ ಕಾಂಗ್ರೆಸ್ ಮುಖಂಡರಲ್ಲಿ ಹುಮ್ಮಸ್ಸು ಇಮ್ಮಡಿಯಾಗಿದೆ. ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಕಳೆದ ಬಾರಿ ಹಾನಗಲ್ಲ ಮಾತ್ರ ತಮ್ಮದಾಗಿಸಿಕೊಂಡಿದ್ದ ಕಾಂಗ್ರೆಸ್ ಈ ಬಾರಿ ಆರು ಕ್ಷೇತ್ರಗಳನ್ನು ಗೆಲ್ಲುವ ಜಪ ಮಾಡುತ್ತಿದೆ. ಈ ನಿಟ್ಟಿನಲ್ಲಿ ಇನ್ನೂ ಅನೇಕ ರಾಷ್ಟ್ರ ಮಟ್ಟದ ನಾಯಕರ ಪ್ರವಾಸಕ್ಕೆ ಸಿದ್ಧತೆ ನಡೆಸಿದೆ. ಹಾವೇರಿಗೆ ಮೋದಿ ಮೇ 7ರಂದು ರಾಹುಲ್ ಗಾಂಧಿ ನಿರ್ಗಮಿಸುತ್ತಿದ್ದಂತೆ ಜಿಲ್ಲೆಯ ಚುನಾವಣಾ ಕಣಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಧುಮುಕುತ್ತಿದ್ದಾರೆ. ಮೇ 7ರಂದು ಮೋದಿ ಹಾವೇರಿಗೆ ಆಗಮಿಸಲಿದ್ದು ಜಿಲ್ಲೆಯ ಆರು ಕ್ಷೇತ್ರ ಸೇರಿ ಸುತ್ತಮುತ್ತಲಿನ ಒಟ್ಟು ಹತ್ತು ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಬೃಹತ್ ಪ್ರಚಾರ ರ‌್ಯಾಲಿಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಆರ್‌ಟಿಒ ಕಚೇರಿ ಬಳಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದ ಸ್ಥಳದಲ್ಲಿ ಬೃಹತ್ ವೇದಿಕೆ ನಿರ್ಮಿಸಲು ಪಕ್ಷ ಚಿಂತನೆ ನಡೆಸಿದ್ದು, ಇದಕ್ಕಾಗಿ ಸಿದ್ಧತೆ ಆರಂಭಿಸಿದೆ. ಇದಕ್ಕೂ ಮುನ್ನ ಏ.28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾನಗಲ್ಲ ತಾಲೂಕು ಅಕ್ಕಿಆಲೂರಿನಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಮತ ಭೇಟೆ ಆಡಲಿದ್ದಾರೆ. ಇನ್ನೂ ಹಲವು ರಾಷ್ಟ್ರಮಟ್ಟದ ನಾಯಕರು ಆಗಮಿಸಲಿದ್ದು ಶೀಘ್ರದಲ್ಲೇ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ನಟ, ನಟಿಯರ ದಂಡು ಸೂಪರ್ ಸ್ಟಾರ್ ನಟ ಕಿಚ್ಚ ಸುದೀಪ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಪರವಾಗಿ ಪ್ರಚಾರ ನಡೆಸಿದ್ದಾರೆ. ಏ.27ರಂದು ಹಿರೇಕೆರೂರ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲರ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಇತ್ತೀಚೆಗಷ್ಟೇ ಬಿ.ಸಿ.ಪಾಟೀಲರ ಪರವಾಗಿ ನಟಿಯರಾದ ಶೃತಿ ಹಾಗೂ ಪ್ರೇಮಾ ಹಿರೇಕೆರೂರಲ್ಲಿ ಪ್ರಚಾರ ನಡೆಸುವ ಮೂಲಕ ಸುದ್ದಿಯಾಗಿದ್ದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಇನ್ನೂ ಅನೇಕ ನಟ, ನಟಿಯರ ದಂಡು ಜಿಲ್ಲೆಗೆ ಆಗಮಿಸಲಿದೆ. ಜೆಡಿಎಸ್ ಅಭ್ಯರ್ಥಿಗಳೇ ಸ್ಟಾರ್ ಕ್ಯಾಂಪೇನರ್ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ರಾಣೆಬೆನ್ನೂರ ಜೆಡಿಎಸ್ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣವರ ಹಾಗೂ ಹಾನಗಲ್ಲ ಅಭ್ಯರ್ಥಿ ಮನೋಹರ ತಹಸೀಲ್ದಾರ್ ಪರ ಪ್ರಚಾರ ನಡೆಸಿದ್ದಾರೆ. ಸದ್ಯ ಅವರು ಅನಾರೋಗ್ಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಉಳಿದ ಕ್ಷೇತ್ರಗಳಿಗೆ ಇನ್ನೂ ಪ್ರವಾಸ ನಿಗದಿಯಾಗಿಲ್ಲ. ಪಕ್ಷದ ಇತರ ನಾಯಕರು ಉತ್ತರ ಕರ್ನಾಟಕ ಭಾಗಕ್ಕಿಂತ ದಕ್ಷಿಣ ಕರ್ನಾಟಕ ಭಾಗದತ್ತ ಹೆಚ್ಚು ಗಮನ ಹರಿಸಿದ್ದಾರೆ. ಹಾಗಾಗಿ, ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳೇ ಈಗ ಸ್ಟಾರ್ ಕ್ಯಾಂಪೇನರ್ ಆಗಿ ಸ್ವಂತ ಬಲದ ಮೇಲೆ ಪ್ರಚಾರ ನಡೆಸಿದ್ದಾರೆ. ಸದ್ಯದಲ್ಲೇ ಕುಮಾರಣ್ಣನ ಪ್ರವಾಸದ ದಿನಾಂಕ ನಿಗದಿಯಾಗಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಜಯಾನಂದ ಜಾವಣ್ಣವರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಕೋಟ್
    ಹಾನಗಲ್ಲಗೆ ಮೊನ್ನೆ ರಾಹುಲ್ ಗಾಂಧಿ ಆಗಮಿಸಿದ್ದರಿಂದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದೆ. ಸದ್ಯದಲ್ಲೇ ಪ್ರಿಯಾಂಕಾ ಗಾಂಧಿ ಸೇರಿದಂತೆ ಇನ್ನೂ ಅನೇಕ ರಾಷ್ಟ್ರೀಯ ಮುಖಂಡರು ಜಿಲ್ಲೆಗೆ ಆಗಮಿಸಲಿದ್ದಾರೆ.
    > ಸಲೀಂ ಅಹ್ಮದ್, ಕಾರ್ಯಾಧ್ಯಕ್ಷ, ಕೆಪಿಸಿಸಿ ಹಾಗೂ ಜಿಲ್ಲಾ ಉಸ್ತುವಾರಿ

    ಕೋಟ್
    ಮೇ 7ರಂದು ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಆಗಮಿಸಲಿದ್ದಾರೆ. ಜಿಲ್ಲೆಯ ಆರು ಕ್ಷೇತ್ರ ಸೇರಿದಂತೆ ಒಟ್ಟು ಹತ್ತು ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಡುವೆ ಅಮಿತ್ ಶಾ, ಮತ್ತಿತರ ನಾಯಕರು ಜಿಲ್ಲೆಗೆ ಆಗಮಿಸಲಿದ್ದಾರೆ.
    > ಸಿದ್ದರಾಜ ಕಲಕೋಟಿ, ಜಿಲ್ಲಾಧ್ಯಕ್ಷ, ಬಿಜೆಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts