More

    ಏಲಕ್ಕಿ ಕಂಪಿನ ಹಾವೇರಿ; ಹಾಲಿಗಳಿಗೆ ಆಕಾಂಕ್ಷಿತರ ವರಿ!

    ಏಲಕ್ಕಿ ಕಂಪಿನ ನಾಡು ಹಾವೇರಿ ರಾಜ್ಯ ರಾಜಕೀಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಿಲ್ಲೆ. ರಾಜ್ಯದಲ್ಲಿ ಬಿಜೆಪಿ ಬಲ ಗಟ್ಟಿಗೊಳಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ. ಮುಖ್ಯಮಂತ್ರಿ ಸ್ವಂತ ಜಿಲ್ಲೆ ಎಂಬ ಅಭಿದಾನ ಬೇರೆ ಸಿಕ್ಕಿದೆ. ಇಬ್ಬರು ಶಾಸಕರು ಮಧ್ಯಂತರದಲ್ಲಿ ಕಮಲಕ್ಕೆ ವಲಸೆ ಹೋಗಿ ಗೆದ್ದಿದ್ದು ಗಮನಾರ್ಹ. ಹಾನಗಲ್ ಕ್ಷೇತ್ರದ ಜನರು ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಸಿ, ಕಾಂಗ್ರೆಸ್​ನವರಲ್ಲಿ ಆಶಾಕಿರಣ ಮೂಡಿಸುವ ಮೂಲಕ ರಾಜ್ಯ-ರಾಷ್ಟ್ರದ ಗಮನ ಸೆಳೆದಿದ್ದರು. 2023ರ ಚುನಾವಣೆಯ ತಾಲೀಮು ಈಗಾಗಲೆ ಆರಂಭಗೊಂಡಿದೆ. ಸಿಎಂ, ಸಚಿವರು, ಹಾಲಿ ಶಾಸಕರು ಮತ್ತೊಮ್ಮೆ ಗೆಲುವಿಗಾಗಿ ಕಸರತ್ತು ಆರಂಭಿಸಿದ್ದಾರೆ. ಇವರ ಜತೆಗೆ ಮಾಜಿ ಶಾಸಕರು, ಹೊಸಬರು ಪೈಪೋಟಿ ನೀಡಲು ಕ್ಷೇತ್ರದಲ್ಲಿ ಸುತ್ತಾಟ ಶುರು ಮಾಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಆರು ವಿಧಾನಸಭೆ ಕ್ಷೇತ್ರಗಳಿದ್ದು, ಹಾವೇರಿ (ಎಸ್​ಸಿ ಮೀಸಲು), ಶಿಗ್ಗಾಂವಿ, ರಾಣೆಬೆನ್ನೂರ, ಹಿರೇಕೆರೂರ, ಬ್ಯಾಡಗಿ, ಹಾನಗಲ್ಲ ಕ್ಷೇತ್ರಗಳಲ್ಲಿ ಸದ್ಯದ ರಾಜಕೀಯ ಚಿತ್ರಣ ಗಮನಿಸಿದರೆ ಹಾಲಿ, ಮಾಜಿಗಳ ನಡುವೆ; ವಲಸೆಗೆ ಪ್ರತಿವಲಸೆ ಬಂದವರು- ಮೂಲನಿವಾಸಿಗಳ ಮಧ್ಯೆಯೇ ಕದನ ಕಣ ಏರ್ಪಡುವ ಲಕ್ಷಣಗಳು ಕಾಣುತ್ತಿವೆ. ಕೆಲ ಕ್ಷೇತ್ರಗಳಲ್ಲಿ ಪಕ್ಷಕ್ಕಿಂತ ನಾಯಕರ ವೈಯಕ್ತಿಕ ವರ್ಚಸ್ಸೂ ಕೆಲಸ ಮಾಡುತ್ತ ಬಂದಿದೆ. ಇದರ ಮಧ್ಯೆ ಹಾಲಿಗಳಿಗೆ ಸೋಲಿನ ರುಚಿ ಉಣಿಸಲು ಮಾಜಿಗಳೊಂದಿಗೆ ಕೆಲ ಹೊಸಬರು ಸಜ್ಜಾಗಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್ ಅಷ್ಟೊಂದು ಪ್ರಭಾವ ಹೊಂದಿಲ್ಲ. ಕೊನೇ ಕ್ಷಣದಲ್ಲಿ ಟಿಕೆಟ್ ವಂಚಿತರು ಜೆಡಿಎಸ್​ನಿಂದ ಸ್ಪರ್ಧೆಗಿಳಿಯುವ ಸಾಧ್ಯತೆಗಳಿವೆ.

    |ಪರಶುರಾಮ ಕೇರಿ ಹಾವೇರಿ

    ಸಿಎಂ ವಿರುದ್ಧ ಪ್ರಬಲ ಎದುರಾಳಿಗೆ ಕೈ ಹುಡುಕಾಟ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಗ್ಗಾಂವಿ-ಸವಣುರು ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಗೆದ್ದಿದ್ದಾರೆ. ಮೂರು ಬಾರಿಯೂ ಅವರಿಗೆ ಕಾಂಗ್ರೆಸ್​ನಿಂದ ಮಾಜಿ ಶಾಸಕ ಅಜೀಮ್ೕರ್ ಖಾದ್ರಿ ತೀವ್ರ ಪೈಪೋಟಿ ನೀಡಿದ್ದರು. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ಚುನಾವಣೆ ಸಮಯದಲ್ಲಿ ತೀವ್ರ ಜಿದ್ದಾಜಿದ್ದಿ ಎದುರಿಸುತ್ತ ಬಂದಿದ್ದಾರೆ. ಸದ್ಯ ಸಿಎಂ ಆಗಿರುವುದರಿಂದ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿದ್ದು, ಚುನಾವಣೆ ಸಮಯದಲ್ಲಿ ತಾವು ರಾಜ್ಯ ಸುತ್ತಾಟ ನಡೆಸಿದರೂ ಇಲ್ಲಿ ಸಮಸ್ಯೆಯಾಗಬಾರದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಪಂಚಮಸಾಲಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರ ಇದು. ಅಲ್ಪಸಂಖ್ಯಾತರೂ ಪ್ರಬಲರೇ. 2ಎ ಮೀಸಲಾತಿಗಾಗಿ ಪಂಚಮಸಾಲಿಗಳ ಹೋರಾಟ ಕ್ಷೇತ್ರದಲ್ಲಿ ತೀವ್ರಗೊಳ್ಳುತ್ತಿದೆ. ದಾವಣಗೆರೆ ಜಿಲ್ಲೆಯಿಂದ ಸಿಎಂ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಕೇಳಿಬರಲು ಇದೂ ಒಂದು ಕಾರಣ. ಸತತ ನಾಲ್ಕು ಬಾರಿ ಸೋಲು ಕಂಡಿರುವ ಕಾಂಗ್ರೆಸ್​ನ ಅಜೀಮ್ೕರ್ ಖಾದ್ರಿ ಬದಲಿಸುವ ಮಾತು ಕೈ ಪಾಳೆಯದಲ್ಲಿ ಕೇಳಿಬಂದಿದೆ. ಮಾಜಿ ಸಚಿವ ದಿ. ಸಿ.ಎಸ್.ಶಿವಳ್ಳಿ ಸಹೋದರ ಷಣ್ಮುಖ ಶಿವಳ್ಳಿ ಟಿಕೆಟ್ ಮೇಲೆ ಕಣ್ಣಿಟ್ಟು ಕ್ಷೇತ್ರ ಸುತ್ತಾಟ ಆರಂಭಿಸಿದ್ದಾರೆ. ಮಾಜಿ ಸಚಿವ ವಿನಯ ಕುಲಕರ್ಣಿ ಹೆಸರೂ ಚಾಲ್ತಿಯಲ್ಲಿದೆ. ಆದರೆ, ಅಲ್ಪಸಂಖ್ಯಾತರ ಪ್ರಮುಖ ಖಾದ್ರಿ ಅವರನ್ನು ನಿರ್ಲಕ್ಷಿಸುವಂತೆಯೂ ಇಲ್ಲ. ಬೊಮ್ಮಾಯಿ ವಿರುದ್ದ ಪ್ರಬಲ ಅಭ್ಯರ್ಥಿಗಾಗಿ ಕಾಂಗ್ರೆಸ್​ನಿಂದ ಶೋಧ ಮುಂದುವರಿದಿದೆ.

    ಜೋಡೆತ್ತುಗಳಲ್ಲಿಯೇ ಪೈಪೋಟಿ: ಹಿರೇಕೆರೂರು ಕ್ಷೇತ್ರದಿಂದ 2018ರಲ್ಲಿ ಕಾಂಗ್ರೆಸ್​ನಿಂದ ಗೆದ್ದಿದ್ದ ಬಿ.ಸಿ.ಪಾಟೀಲ್ ರಾಜೀನಾಮೆ ನೀಡಿ ಕಮಲ ಹಿಡಿದು ಉಪಚುನಾವಣೆ ಟಿಕೆಟ್ ಪಡೆದಾಗ ಮಾಜಿ ಶಾಸಕ ಯು.ಬಿ. ಬಣಕಾರ ಹೆಗಲು ಕೊಟ್ಟು ದುಡಿದರು. ಈ ಇಬ್ಬರನ್ನು ಜೋಡೆತ್ತು ಎಂದೇ ಕರೆಯಲಾಗಿತ್ತು. ಯು.ಬಿ. ಬಣಕಾರಗೆ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಯಿತು. ಬಿ.ಸಿ.ಪಾಟೀಲ್ ಕೃಷಿ ಸಚಿವರಾದರು. ಈಗ ಜೋಡೆತ್ತುಗಳಲ್ಲಿ ಭಿನ್ನಮತ ಶುರುವಾದಂತಿದ್ದು, ಇಬ್ಬರೂ ತಮ್ಮದೇ ಆದ ಕಾರ್ಯಕರ್ತರ ಪಡೆ ಕಟ್ಟುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಸದ್ಯ ಪ್ರಬಲ ನಾಯಕತ್ವದ ಕೊರತೆ ಇದ್ದು, ಬಿ.ಸಿ.ಪಾಟೀಲ್ ಅಥವಾ ಬಣಕಾರ ಇಬ್ಬರಲ್ಲಿ ಯಾರು ಬಂದರೂ ರೆಡ್ ಕಾರ್ಪೆಟ್ ಹಾಸಲು ಸಿದ್ಧವಿದೆ. ಬಣಕಾರ ಅವರನ್ನು ಪಕ್ಷಕ್ಕೆ ಸೆಳೆಯಲು ತುಸು ಹೆಚ್ಚೇ ತಂತ್ರಗಾರಿಕೆ ನಡೆದಿದೆ. ಹೀಗಾಗಿ ಇಂದಿನ ಜೋಡೆತ್ತುಗಳೇ ಮುಂದಿನ ಎದುರಾಳಿಗಳಾದರೆ ಅಚ್ಚರಿ ಇಲ್ಲ. ಜೋಡೆತ್ತುಗಳನ್ನು ಕಮಲ ನಾಯಕರು ಗಟ್ಟಿಯಾಗಿ ಕಟ್ಟಿ ಹಾಕಿದರೆ ಕೈ ಪಕ್ಷದಲ್ಲಿ ಬಿ.ಎಚ್. ಬನ್ನಿಕೋಡ, ಪ್ರಕಾಶ ಬನ್ನಿಕೋಡ ಸೇರಿ ಕೆಲವರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

    ಶ್ರೀನಿವಾಸ ಮಾನೆಗೆ ಸದ್ಯಕ್ಕಿಲ್ಲ ಎದುರಾಳಿ: ಸಿ.ಎಂ. ಉದಾಸಿ ಅವರ ಅಕಾಲಿಕ ನಿಧನದಿಂದ ನಡೆದ ಉಪಚುನಾವಣೆಯಲ್ಲಿ ಸರ್ಕಾರವೇ ಬಂದು ಪ್ರಚಾರ ನಡೆಸಿದರೂ ಹಾನಗಲ್ಲ ಕ್ಷೇತ್ರದ ಜನರು (ಹುಬ್ಬಳ್ಳಿಯವರಾದ) ಕಾಂಗ್ರೆಸ್​ನ ಶ್ರೀನಿವಾಸ ಮಾನೆಗೆ ಜೈ ಎಂದರು. ಸೌಮ್ಯ ಸ್ವಭಾವದ, ಜನರ ಮಧ್ಯೆ ನಿರಂತರ ಸಂಚಾರ ಇತ್ಯಾದಿ ಕಾರಣದಿಂದ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಶ್ರೀನಿವಾಸ ಮಾನೆಗೆ ಸದ್ಯಕ್ಕೆ ಪಕ್ಷದೊಳಗೆ ಎದುರಾಳಿಗಳಿಲ್ಲ. ಉಪಚುನಾವಣೆಯಲ್ಲಿ ಸೋತ ಬಿಜೆಪಿಯ ಶಿವರಾಜ ಸಜ್ಜನರ ಸಹ ಕ್ಷೇತ್ರದ ಜನರೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ. ಇತರ ಮೂರ್ನಾಲ್ಕು ಆಕಾಂಕ್ಷಿಗಳೂ ಕ್ಷೇತ್ರದಲ್ಲಿ ಸಂಚಾರ ಆರಂಭಿಸಿದ್ದಾರೆ. ಟಿಕೆಟ್ ಸಿಗದೆ ಇದ್ದರೆ ಶಿವರಾಜ ಸಜ್ಜನರ ಅವರನ್ನು ಪಕ್ಷೇತರರಾಗಿ ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದು ಹೇಳುವವರೂ ಇದ್ದಾರೆ.

    ಹಾವೇರಿಯಲ್ಲಿ ಮೀಸಲು ಹೋರಾಟ: ಹಾಲಿ ಶಾಸಕ ನೆಹರು ಓಲೇಕಾರಗೆ ಕಳೆದ ಬಾರಿಯಂತೆ ಈ ಸಾರಿಯೂ ಪಕ್ಷದೊಳಗಿನ ಆಕಾಂಕ್ಷಿಗಳದ್ದೇ ಸಮಸ್ಯೆ. ಕೆಲ ನಾಯಕರು ಸ್ವತಂತ್ರವಾಗಿ ಕ್ಷೇತ್ರದುದ್ದಕ್ಕೂ ಸಂಚರಿಸುತ್ತಿರುವುದು ಕಾರ್ಯಕರ್ತರಲ್ಲೂ ತುಸು ಗೊಂದಲ ಮೂಡಿಸಿದೆ. ಕಾಂಗ್ರೆಸ್​ನಿಂದ ಮಾಜಿ ಶಾಸಕ ರುದ್ರಪ್ಪ ಲಮಾಣಿಗೂ ಪಕ್ಷದೊಳಗಿನ ಆಕಾಂಕ್ಷಿಗಳ ಕಾಟ ದಿನೇದಿನೆ ಹೆಚ್ಚುತ್ತಿದೆ. ಎಸ್​ಸಿ ಮೀಸಲು ಕ್ಷೇತ್ರ ಇದಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಹಿರೇಮಠ ಬೇಡ ಜಂಗಮ ಎಸ್​ಸಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಇವರು ಸಹ ಸಿದ್ಧತೆ ನಡೆಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೊಡದೆ ಇದ್ದರೆ ಪಕ್ಷೇತರಾಗಿ ಕಣಕ್ಕಿಳಿದರೂ ಅಚ್ಚರಿ ಇಲ್ಲ. ಒಂದೊಮ್ಮೆ ಎಂ.ಎಂ.ಹಿರೇಮಠ ಸ್ಪರ್ಧೆಗಿಳಿದರೆ ಕ್ಷೇತ್ರದ ರಣಕಣದ ಚಿತ್ರಣವೇ ಬದಲಾಗುವ ಸಾಧ್ಯತೆಗಳು ದಟ್ಟವಾಗಿವೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಏರ್ಪಾಟಾಗಿದ್ದ ಬೇಡ ಜಂಗಮ ಎಸ್​ಸಿ ಮೀಸಲಾತಿ ಹೋರಾಟದ ಸಭೆಯಲ್ಲಿನ ಮುಖಂಡರು ಎಂ.ಎಂ.ಹಿರೇಮಠ ಹಾವೇರಿಯಿಂದ ಕಣಕ್ಕಿಳಿಯುತ್ತಾರೆ ಎಂದಿರುವ ವಿಡಿಯೋ ತುಣುಕು ಕ್ಷೇತ್ರದಲ್ಲಿ ಹರಿದಾಡುತ್ತಿದೆ.

    ಬ್ಯಾಡಗಿಯಲ್ಲಿ ಮೆಣಸಿನಕೈ ಘಾಟು: ಬಿಜೆಪಿಯ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿಗೆ ಸದ್ಯ ಯಾವುದೇ ಅಡ್ಡಿ ಪಕ್ಷದೊಳಗೆ ಕಾಣುತ್ತಿಲ್ಲ. ಆದರೆ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆಯಂತೂ ಕಾಣತೊಡಗಿದೆ. ವಿಶ್ವ ಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಕ್ಷೇತ್ರದಲ್ಲಿ ಕಾಂಗ್ರೆಸ್​ನಲ್ಲಿ ಮೆಣಸಿನಕಾಯಿ ರೇಟಿನಂತೆಯೇ ಟಿಕೆಟ್​ಗಾಗಿ ಭಾರಿ ಪೈಪೋಟಿ ಎದ್ದಿದೆ. 2018ರಲ್ಲಿ ಅಂದಿನ ಹಾಲಿ ಶಾಸಕರಾಗಿದ್ದ ಬಸವರಾಜ ಶಿವಣ್ಣನವರಗೆ ತಪ್ಪಿಸಿ ಟಿಕೆಟ್ ಪಡೆದಿದ್ದ ಎಸ್.ಆರ್.ಪಾಟೀಲ ಮತ್ತೊಮ್ಮೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇನ್ನೊಂದೆಡೆ ಬಸವರಾಜ ಈ ಸಾರಿ ಅವಕಾಶ ನನಗೆ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಕೈ ವರಿಷ್ಠರು ಯಾರಿಗೆ ಜೈ ಎಂದರೂ ಒಬ್ಬರ ಕಾಲನ್ನು ಮತ್ತೊಬ್ಬರು ಜಗ್ಗುವುದು ನಿಶ್ಚಿತ!

    ಅರುಣೋದಯಕ್ಕೆ ನೂರೆಂಟು ವಿಘ್ನ: ಮೈತ್ರಿ ಸರ್ಕಾರದ ಪತನ ವೇಳೆ, ರಾಣೆಬೆನ್ನೂರು ಕ್ಷೇತ್ರದಿಂದ ಪಕ್ಷೇತರ (ಕೆಪಿಜೆಪಿ) ಶಾಸಕರಾಗಿ ಆಯ್ಕೆಗೊಂಡಿದ್ದರೂ ಕಾಂಗ್ರೆಸ್ ಸೇರ್ಪಡೆ ಕಾರಣಕ್ಕೆ ಶಾಸಕ ಸ್ಥಾನದಿಂದ ಆರ್.ಶಂಕರ್ ಅನರ್ಹಗೊಂಡಿದ್ದರು. ಮರಳಿ ಕಣಕ್ಕಿಳಿದರೆ ಜನರ ವಿರೋಧ ಎದುರಿಸುವ ಆತಂಕ ಕಾರಣಕ್ಕೆ ಅರುಣಕುಮಾರ ಪೂಜಾರ ಆಶ್ಚರ್ಯಕರ ರೀತಿಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡು, ಗೆಲುವು ಸಾಧಿಸಿದರು. ಅವರು ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, ಇದನ್ನು ನಿಯಂತ್ರಿಸಲು ಬಿರುಸಿನ ಸುತ್ತಾಟ ಆರಂಭಿಸಿದ್ದಾರೆ. ಇದೀಗ ಎಂಎಲ್​ಸಿ ಆರ್.ಶಂಕರ್, ಪ್ರಮುಖರಾದ ಸಂತೋಷಕುಮಾರ ಪಾಟೀಲ, ಡಾ. ಬಸವರಾಜ ಕೇಲಗಾರ ಸಹ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್​ನಿಂದ ಕೆ.ಬಿ. ಕೋಳಿವಾಡ ‘ನನಗಾದರೂ ಟಿಕೆಟ್ ಕೊಡಿ, ಮಗ ಪ್ರಕಾಶ ಕೋಳಿವಾಡಗಾದರೂ ಕೊಡಿ’ ಎಂಬ ಪ್ರಸ್ತಾವ ವರಿಷ್ಠರೆದುರು ಇಟ್ಟಿದ್ದಾರೆ. ಜಟ್ಟೆಪ್ಪ ಕರೇಗೌಡ್ರ ಸೇರಿ ಹಲವರು ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ದರೆ ಆರ್.ಶಂಕರ್, ಸಂತೋಷಕುಮಾರ ಪಾಟೀಲ ಇಬ್ಬರಲ್ಲಿ ಒಬ್ಬರು ಕೈ ಹಿಡಿಯುವ ಸಾಧ್ಯತೆ ತಳ್ಳಿಹಾಕಲಾಗದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts