More

    ಮಕ್ಕಳ ಕಲಿಕೆಗೆ ವಿಜ್ಞಾನ ಕೇಂದ್ರ ಮುಕ್ತ; ವೀಕ್ಷಣೆ, ತಾರಾಲಯ ವಿಭಾಗಕ್ಕೆ ಡಿಸಿ, ಜಿಪಂ ಸಿಇಒ ಚಾಲನೆ

    ಹಾವೇರಿ: ತಾಲೂಕಿನ ದೇವಗಿರಿ ಜಿಲ್ಲಾಡಳಿತ ಭವನದ ಎದುರು ಗುಡ್ಡದ ಮೇಲೆ ನಿರ್ಮಾಣಗೊಂಡಿರುವ ಹಾವೇರಿ ಉಪ ವಿಜ್ಞಾನ ಕೇಂದ್ರದ ವೀಕ್ಷಣೆ ಹಾಗೂ ತಾರಾಲಯ ವಿಭಾಗಕ್ಕೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಗುರುವಾರ ಚಾಲನೆ ನೀಡಿದರು.
    ಫೆ.18ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜ್ಞಾನ ಕೇಂದ್ರ ಉದ್ಘಾಟಿಸಿದ್ದರು. ಇದೀಗ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳ ವೀಕ್ಷಣೆಗೆ ಸಜ್ಜಾಗಿದೆ. ಈ ಮೂಲಕ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಈಗ ಮುಕ್ತಿ ಸಿಕ್ಕಂತಾಗಿದೆ.
    ಈ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ತಿಮ್ಮೇಶಕುಮಾರ, ಡಯಟ್ ಪ್ರಾಂಶುಪಾಲ ಗಿರೀಶ ಪದಕಿ, ಎಸ್.ಎಸ್.ಅಡಿಗ, ಬಸನಗೌಡ ಪಾಟೀಲ, ಮಂಜಪ್ಪ ಆರ್., ಸಿದ್ದರಾಮ ಅಜಗೊಂಡ್ರ, ಲತಾಮಣಿ, ಮತ್ತಿತರರು ಇದ್ದರು.
    ಏಳು ಕೋಟಿ ರೂ. ವೆಚ್ಚ
    ಒಂದೂವರೆ ಎಕರೆ ವಿಸ್ತೀರ್ಣದಲ್ಲಿ ಏಳು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಲವು ವೈಶಿಷ್ಟೃತೆಗಳನ್ನು ಒಳಗೊಂಡಿದೆ. ನಿರ್ಮಿತಿ ಕೇಂದ್ರ ಕಟ್ಟಡ ವಿನ್ಯಾಸ ಮತ್ತು ನಿರ್ಮಾಣ ಕೈಗೊಂಡರೆ, ಒಳ ಆವರಣದ ವೈಜ್ಞಾನಿಕ ಮಾದರಿಗಳ ಅಳವಡಿಕೆಗೆ ಬೆಂಗಳೂರಿನ ಧೀನಬಂಧು ಸಂಸ್ಥೆ, ಪುಣೆಯ ಟಯೋಮಾ ಬಿಫಾಲ್ ಯು ಸಂಸ್ಥೆ ಹಾಗೂ ತಾರಾಲಯ ವಿಭಾಗವನ್ನು ನೊಯ್ಡದ ಫುಲ್‌ಡಾನ್ ಪ್ರೊ ಸಂಸ್ಥೆ ನಿರ್ವಹಿಸಿದೆ.
    ವಿದ್ಯಾರ್ಥಿಗಳಿಗೆ ಹಾಗೂ ವಿಜ್ಞಾನ ಆಸಕ್ತರಿಗೆ ವೈಜ್ಞಾನಿಕ ಜಗತ್ತಿನ ಆಸಕ್ತಿದಾಯಕ ನೂರಾರು ಭೌತವಿಜ್ಞಾನ, ಖಗೋಳ, ತಾರಾಲಯ, ಭಾಹ್ಯಾಕಾಶ, ಮೋಜಿನ ಗ್ಯಾಲರಿಗಳು, ಅಚ್ಚರಿಯ ಸಂಗತಿಗಳ ಪ್ರದರ್ಶನ, ಮಾದರಿ ಕುತೂಹಲ ಮೂಡಿಸುತ್ತಿವೆ. ಒಂದೊಂದು ಮಾದರಿಯು ಒಂದೊಂದು ಕೌತುಕ ಕಥೆಗಳನ್ನು ಬಿಂಬಿಸುತ್ತಿವೆ. ಸುನಾಮಿ-ಪ್ರವಾಹ- ಭೂ ಕುಸಿತ- ಭೂ ಕಂಪನದಿಂದ ಆಕಾಶ ಕಾಯಗಳು ಒಳಗೊಂಡ ನೂರಾರು ಮಾದರಿಗಳು, ವೈಜ್ಞಾನಿಕ ಪ್ರಶ್ನೋತ್ತರಕ್ಕೆ ಗಣಕೀಕೃತ ಕೌಂಟರ್, ಭೂಮಿ ಮೇಲೆ ನಿಂತಾಗ ನಮ್ಮ ತೂಕದ ಸಾಂದ್ರತೆ ಜತೆಗೆ ಬೇರೆ ಬೇರೆ ಕಾಯಗಳಲ್ಲಿ ನಾವು ನಿಂತಾಗ ಎಷ್ಟು ಗ್ರ್ಯಾವಿಟಿ ಎಂಬ ಮಾಹಿತಿಯ ಜತೆಗೆ ವಾಸ್ತವಕ್ಕಿಂತ ಭಿನ್ನವಾಗಿ ಬೇರೆಯೇ ಜಗತ್ತಿಗೆ ನಮ್ಮನ್ನು ಕರೆದೊಯ್ಯುತ್ತವೆ. ಹೊರ ಆವರಣದಲ್ಲಿ ವಿವಿಧ ವಿಜ್ಞಾನ ಮಾದರಿಗಳು, ವಿಜ್ಞಾನಿಗಳ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ.
    ಮೋಜಿನ ವಿಜ್ಞಾನ ಗ್ಯಾಲರಿ:
    ಈ ಗ್ಯಾಲರಿ ಮೋಜಿನ ಗ್ಯಾಲರಿ ಸೇರಿ ಒಟ್ಟು 40 ಒಳಾಂಗಣ ವಿಜ್ಞಾನ ಮಾದರಿಗಳನ್ನು ಹೊಂದಿದ್ದು, ಎಲ್ಲ ಮಾದರಿಗಳು ವಿಜ್ಞಾನ ಹಾಗೂ ಗಣಿತ ವಿಷಯದ ಪರಿಕಲ್ಪನೆ ಆಧಾರದ ಮೇಲೆ ಕಾರ್ಯನಿರ್ವಸುತ್ತದೆ. ಸಂವಾದಾತ್ಮಕ ಪ್ರದರ್ಶನಗಳನ್ನು ಒದಗಿಸುವ ಮೂಲಕ ಅಸಂಖ್ಯಾತ ಜನರ ಕುತೂಹಲವನ್ನು ಪ್ರಚೋದಿಸಲು ಮತ್ತು ಅವರ ಸೃಜನಶೀಲತೆಯನ್ನು ಹೊರಹಾಕು ಸಹಾಯ ಮಾಡುತ್ತದೆ.
    ವಿಪತ್ತು ನಿರ್ವಹಣೆ ಗ್ಯಾಲರಿ:
    ನೈಸರ್ಗಿಕವಾಗಿ ಸಂಭವಿಸುವ ವಿಪತ್ತುಗಳ ಬಗ್ಗೆ ಮಾಹಿತಿಗಳನ್ನು ಹಾಗೂ ಅದನ್ನು ಹೇಗೆ ನಿರ್ವಹಿಸಬೇಕು ಎಂಬ ಐದು ಪ್ರಾಯೋಗಿಕ ಮಾದರಿಗಳನ್ನು ಅಳವಡಿಸಿದ್ದು, ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರಯೋಜನಕಾರಿಯಾಗಿದೆ.
    ಬಾಹ್ಯಾಕಾಶದ ಗ್ಯಾಲರಿ:
    ಬಾಹ್ಯಾಕಾಶದ ಚರಿತ್ರೆ ಹಾಗೂ ಅನ್ವೇಷಣೆಗಳನ್ನು ಒಳಗೊಂಡ ನಾಲ್ಕು ಮಾದರಿಗಳನ್ನು ಏರ್ಪಡಿಸಲಾಗಿದೆ ಹಾಗೂ ರಾಕೆಟ್ ತಂತ್ರಜ್ಞಾನದ ಮಾದರಿಗಳು ಮಕ್ಕಳನ್ನು ವಿಜ್ಞಾನದ ಪ್ರಪಂಚಕ್ಕೆ ಕರೆದೊಯ್ಯಲು ಸಹಕಾರಿಯಾಗಿದೆ.
    ತಾರಾಲಯ:
    ಕಣ್ಮಣ ಸೆಳೆಯುವ ತಾರಾಲಯವು ಈ ವಿಜ್ಞಾನ ಕೇಂದ್ರದ ಅತ್ಯಾಕರ್ಷಣೆಯುಳ್ಳ ಗ್ಯಾಲರಿಯಾಗಿದೆ. ಇಲ್ಲಿ ಆಕಾಶದ ಬಗ್ಗೆ ಶೈಕ್ಷಣಿಕ ಮತ್ತು ಮನರಂಜನೆಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಗುತ್ತದೆ. ಅಳತೆಯುಳ್ಳ ಗುಮ್ಮಟವನ್ನು ನಿರ್ಮಿಸಿದ್ದು, ಪರದೆಯ ಮೇಲೆ 3ಡಿ ವೀಕ್ಷಣೆಯನ್ನು ಮಾಡಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts