More

    ವರದಕ್ಷಿಣೆ ಕಿರುಕುಳ ನೀಡಿದ್ದವ ಕಂಬಿ ಹಿಂದೆ; ಮಹತ್ವದ ತೀರ್ಪು ನೀಡಿದ ಕೋರ್ಟ್

    ಹಾವೇರಿ: ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾಗಿದ್ದ ಪತಿಗೆ ಜೀವಾವಧಿ ಶಿಕ್ಷೆ ಹಾಗೂ 21 ಸಾವಿರ ರೂ. ದಂಡ ವಿಧಿಸಿ ನಗರದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ತೀರ್ಪು ಪ್ರಕಟಿಸಿದ್ದಾರೆ.
    ಶಿಗ್ಗಾಂವಿ ತಾಲೂಕು ಬ್ಯಾಹಟ್ಟಿ ಗ್ರಾಮದ ಅಂದಾನಯ್ಯ ಓಂಪ್ರಕಾಶ ನೀಲಗುಂದಿಮಠ ಶಿಕ್ಷೆಗೀಡಾದ ಅಪರಾಧಿ.
    ದುಂಡಸಿ ಗ್ರಾಮದ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಎಸ್.ಡಿ.ಸಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಪಿ ಅಂದಾನಯ್ಯ, ದೀಪಾ ಎಂಬುವರ ಜತೆಗೆ ವಿವಾಹವಾಗಿದ್ದ. ಮದುವೆ ವೇಳೆ 25 ಸಾವಿರ ರೂ., 40 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ. ಬೆಲೆ ಬಾಳುವ ವಸ್ತುಗಳನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಆದರೂ ‘ನಿನ್ನ ತಂದೆಯ ನಿವೃತ್ತಿಯಿಂದ ಬಂದ ಹಣ ತೆಗೆದುಕೊಂಡು ಬಾ. ಧಾರವಾಡದಲ್ಲಿ ಸೈಟ್ ಹಿಡಿಯೋಣ’ ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಹಲ್ಲೆ ಮಾಡಿ, ವಿಚ್ಛೇದನ ಕೊಡುವುದಾಗಿ ಕಿರುಕುಳ ನೀಡುತ್ತಿದ್ದ. ಈತನ ಕಾಟಕ್ಕೆ ಬೇಸತ್ತ ದೀಪಾ ದುಂಡಸಿ ಆರ್.ಎಫ್.ಒ. ಕಚೇರಿಯ ಆವರಣದ ವಸತಿ ಗೃಹದಲ್ಲಿ ಮೈ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದರು. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
    ಶಿಗ್ಗಾಂವಿ ವೃತ್ತದ ಅಂದಿನ ತನಿಖಾಧಿಕಾರಿ, ಡಿವೈಎಸ್‌ಪಿ ವಿಜಯಕುಮಾರ ಬಿಸ್ನಳ್ಳಿ ತನಿಖೆ ನಡೆಸಿ, ಆರೋಪಿತನ ವಿರುದ್ಧ ದೋಷಾರೋಪಣ ಪತ್ರವನ್ನು 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
    ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸರೋಜಾ ಜಿ. ಕೂಡಲಗಿಮಠ ವಾದ ಮಂಡಿಸಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts