More

    ಯಾವ ಮೂರ್ಖನೂ ಆಪರೇಶನ್ ಕಮಲ ಮಾಡಲ್ಲ; ಕಳೆದ ವರ್ಷ ಇಷ್ಟೊತ್ತಿಗಾಗಲೇ ಬಿಜೆಪಿ ಸರ್ಕಾರ ಬೆಳೆಹಾನಿ ಪರಿಹಾರ ಕೊಟ್ಟಿತ್ತು; ಬಿ.ಸಿ.ಪಾಟೀಲ

    ಹಾವೇರಿ: ಬರ ನಿರ್ವಹಣೆಯಲ್ಲಿ ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಗುಂಪುಗಾರಿಕೆ, ಒಳಜಗಳ ತಾರಕಕ್ಕೇರಿದೆ. ಹಾಗಾಗಿ, 135 ಶಾಸಕರಿದ್ದರೂ ಇದನ್ನು ಮರೆಮಾಚಲು ‘ಆಪರೇಶನ್ ಕಮಲ’ ನಡೆಯುತ್ತಿದೆ ಎಂದು ನಾಟಕವಾಡುತ್ತಿದೆ. ಅದರ ಅವಶ್ಯಕತೆ ನಮಗೆ ಇಲ್ಲ. ಯಾವ ಮೂರ್ಖನೂ ಆಪರೇಶನ್ ಕಮಲ ಮಾಡಲು ತಯಾರಿಲ್ಲ. ಅಂತಹ ಪರಿಸ್ಥಿತಿ ನಮಗೆ ಬಂದಿಲ್ಲ ಎಂದು ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ಕಿಡಿಕಾರಿದರು. ಸೋಮವಾರ ರಾಣೆಬೆನ್ನೂರ, ಬ್ಯಾಡಗಿ ಹಾಗೂ ಹಾವೇರಿ ತಾಲೂಕಿನಲ್ಲಿ ಬರ ಪರಿಶೀಲನೆ ನಡೆಸಿದ ಬಳಿಕ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ಈ ವರ್ಷ ಶೇ.65ರಷ್ಟು ಮಳೆ ಕೊರತೆಯಾಗಿದೆ. ಮುಂಗಾರು, ಹಿಂಗಾರು ಎರಡೂ ಕೈಕೊಟ್ಟಿದೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸದೇ ಗ್ಯಾರಂಟಿ ಈಡೇರಿಸುವಲ್ಲಿ ಸರ್ಕಾರ ನಿರತವಾಗಿದೆ. ಕೇಂದ್ರದ ಕಡೆ ಬೊಟ್ಟು ಮಾಡಿಕೊಂಡು ರೈತರಿಗೆ ಮೋಸ ಮಾಡುತ್ತಿದೆ. ರೈತರ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ ಎಂದು ಆರೋಪಿಸಿದರು. ಕಳೆದ ವರ್ಷ ಅತಿವೃಷ್ಠಿಯಿಂದ ರೈತರ ಬೆಳೆಹಾನಿಯಾಗಿತ್ತು. ಇಷ್ಟೊಂದು ಪ್ರಮಾಣದ ಹಾನಿ ಆಗಿರಲಿಲ್ಲ. ಆದರೂ, ಅಂದಿನ ಬಿಜೆಪಿ ಸರ್ಕಾರ ಕೇಂದ್ರದ ಕಡೆಗೆ ಬೊಟ್ಟು ಮಾಡದೇ ಜಿಲ್ಲೆಯಲ್ಲಿ 430 ಕೋಟಿ ರೂ. ಮದ್ಯಂತರ ಬೆಳೆ ವಿಮೆ, ರಾಜ್ಯದಲ್ಲಿ 2,100 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿತ್ತು. ಬಿಜೆಪಿ ಜಾರಿಗೊಳಿಸಿದ್ದ ಎಲ್ಲ ರೈತಪರ ಯೋಜನೆಗಳನ್ನು ಕಾಂಗ್ರೆಸ್ ರದ್ದುಪಡಿಸಿದೆ. ಆ ಹಣವನ್ನೂ ಗ್ಯಾರಂಟಿಗೆ ಸುರಿಯುತ್ತಿದೆ ಎಂದರು.
    ಸತೀಶ ಜಾರಕಿಹೊಳಿ, ಬಸವರಾಜ ರಾಯರೆಡ್ಡಿ, ಬಿ.ಕೆ.ಹರಿಪ್ರಸಾದ. ಹೀಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ. ಈ ನಡುವೆ ಬರ ನಿರ್ವಹಣೆ ಮಾಡದ ಕಾರಣ ರೈತರು ಜನ ಆಕ್ರೋಶಗೊಳ್ಳುತ್ತಾರೆ ಎಂಬ ಉದ್ದೇಶಕ್ಕೆ ಕಾಂಗ್ರೆಸ್‌ನವರು ನಾಟಕ ಮಾಡುತ್ತಿದ್ದಾರೆ. ಹುಲಿ ಉಗುರಿನ ನಾಟಕ ಶುರು ಮಾಡಿದ್ದಾರೆ. ಇಷ್ಟು ವರ್ಷ ಅರಣ್ಯ ಇಲಾಖೆ ಕತ್ತೆ ಕಾಯುತ್ತಿತ್ತಾ ಎಂದು ಟೀಕಿಸಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಬರದಿಂದಾಗಿ ಜಿಲ್ಲೆಯಲ್ಲಿ ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆಯಾಗಿದೆ. ಮೇನಿಂದ ಈವರೆಗೆ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆಹಾನಿ ಕುರಿತು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಬಿಜೆಪಿ ಬರ ತಂಡ ಪರಿಶೀಲಿಸಿದೆ. ಇದೇ ತಂಡ ಗದಗನಲ್ಲೂ ಪರಿಶೀಲನೆ ಮಾಡಿ ರಾಜ್ಯ, ಕೇಂದ್ರ ಘಟಕಕ್ಕೆ ವರದಿ ಸಲ್ಲಿಸಲಿದೆ. ನಂತರ ಹೋರಾಟದ ಕುರಿತು ನಿರ್ಧರಿಸಲಿದೆ ಎಂದರು.
    ಶಾಸಕ ಚಂದ್ರು ಲಮಾಣಿ, ಮಾಜಿ ಶಾಸಕರಾದ ಕಳಕಪ್ಪ ಬಂಡಿ, ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ, ಕೆ.ಶಿವಲಿಂಗಪ್ಪ, ಭೋಜರಾಜ ಕರೂದಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಪಾಲಾಕ್ಷಗೌಡ ಪಾಟೀಲ, ಮತ್ತಿತರರು ಇದ್ದರು.

    ಸರ್ಕಾರಕ್ಕೆ ಪರಿಹಾರ ವಾಪಸ್
    ಕಾಡುಹಂದಿಗಳು 5 ಎಕರೆ ಗೋವಿನಜೋಳ ಬೆಳೆ ಹಾನಿ ಮಾಡಿದ್ದಕ್ಕೆ ಸರ್ಕಾರ ಕೇವಲ 2,804 ರೂ. ಪರಿಹಾರ ಕೊಟ್ಟಿದೆ. ಇದು ಯಾವುದಕ್ಕೂ ಸಾಲುವುದಿಲ್ಲ. ಈ ಹಣವನ್ನು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ವಾಪಸ್ ಕೊಡುತ್ತೇನೆ. ಸರ್ಕಾರ ಇಂತಹ ಹೀನ ಕೆಲಸ ಬಿಟ್ಟು ಕಾಡಿಗೆ ಬೇಲಿ ಹಾಕಲಿ. ಆಗ ನಾನೇ 10 ಸಾವಿರ ರೂ. ದೇಣಿಗೆ ಕೊಡುತ್ತೇನೆ ಎಂದು ಕಡೂರಿನ ರೈತ ಸುರೇಶ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts