More

    ತಾಂಡಾ ನಿವಾಸಿಗಳಿಗೆ ಪಟ್ಟಾ ವಿತರಣೆ; ಚಿಕ್ಕಮರಳಿಹಳ್ಳಿ ತಾಂಡಾ ಕಂದಾಯ ಗ್ರಾಮಕ್ಕೆ ಆಯ್ಕೆ; ಶಾಸಕ ರುದ್ರಪ್ಪ ಲಮಾಣಿ ಹೇಳಿಕೆ

    ಹಾವೇರಿ: ಸರ್ಕಾರಿ, ಅರಣ್ಯ ಹಾಗೂ ಖಾಸಗಿ ಪ್ರದೇಶಗಳಲ್ಲಿ ವಾಸಿಸುವ ಹಾಡಿ, ಹಟ್ಟಿ, ತಾಂಡಾ ನಿವಾಸಿಗಳ ಜಾಗೆಯನ್ನು ಸಕ್ರಮಗೊಳಿಸಿ, ಎಲ್ಲ ತಾಂಡಾ ನಿವಾಸಿಗಳಿಗೆ ಪಟ್ಟಾ ನೀಡಲಾಗುವುದು. ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗುವುದು. ಮೊದಲ ಹಂತದಲ್ಲಿ ಜಿಲ್ಲೆಯ ಚಿಕ್ಕಮರಳಿಹಳ್ಳಿ ತಾಂಡಾವನ್ನು ಕಂದಾಯ ಗ್ರಾಮಕ್ಕೆ ಆಯ್ಕೆ ಮಾಡಲಾಗಿದೆ ಎಂದು ಶಾಸಕ ಹಾಗೂ ವಿಧಾನಸಭಾ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
    ಇಲ್ಲಿನ ಜಿಲ್ಲಾ ಬಂಜಾರ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ಕಂದಾಯ ಸಚಿವ ಕೃಷ್ಣಬೈರೇಗೌಡ ತಾಂಡಾವಾಸಿಗಳಿಗೆ ಪಟ್ಟಾ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ ಎಂದು ಹೇಳಿದರು.
    ಎಲ್ಲ ಜಿಲ್ಲೆಗಳಲ್ಲಿ ಬಂಜಾರ ಭವನ ನಿರ್ಮಾಣ ಮಾಡಲಾಗಿದೆ. ತಾಲೂಕು ಕೇಂದ್ರಗಳಲ್ಲಿ ಬಂಜಾರ ಭವನ ನಿರ್ಮಾಣ ಮಾಡಲಾಗುತ್ತಿದೆ. ಅದೇ ರೀತಿ ತಾಂಡಾಗಳಲ್ಲಿ ಬಂಜಾರ ಭವನ ಬೇಡಿಕೆ ಸಲ್ಲಿಸಿದರೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದರು.
    ಲಂಬಾಣಿ ಭಾಷೆಗೆ ಲಿಪಿ ತಯಾರಿಸುವ ನಿಟ್ಟಿನಲ್ಲಿ ಈಗಾಗಲೇ ಸಂಶೋಧಕ ಭಾಯಾ ನಾಯಕ್ ಅವರು ಲಂಬಾಣಿ ಭಾಷೆಯ ಎರಡು ನಿಘಂಟಗಳನ್ನು ತಯಾರಿಸಿದ್ದಾರೆ. ಪ್ರಾಧ್ಯಾಪಕ ಡಾ.ಸಣ್ಣರಾಮ ಲಂಬಾಣಿ ಭಾಷೆ ಬೆಳವಣಿಗೆಯ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ. ಮುಂದಿನ ಒಂದು ತಿಂಗಳೊಳಗಾಗಿ ಲಂಬಾಣಿ ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
    ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಸಣ್ಣರಾಮ ವಿಶೇಷ ಉಪನ್ಯಾಸ ನೀಡಿದರು. ಬಂಜಾರ ಯುವ ಸಮೂಹ ಸಂಘಟಿತರಾಗಬೇಕು ಹಾಗೂ ಶಿಕ್ಷಣವಂತರಾಗಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರ ಉಜ್ವಲ ಭವಿಷ್ಯ ರೂಪಿಸಬೇಕು ಎಂದು ಕರೆ ನೀಡಿದರು.
    ಸಾನ್ನಿಧ್ಯ ವಹಿಸಿದ್ದ ಲಿಂಗಸಗೂರು ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಶಾಖಾ ಅನುಭವ ಮಂಟಪದ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಹುಬ್ಬಳ್ಳಿಯ ತಿಪ್ಪೇಶ ಮಹಾರಾಜರು, ಗುತ್ತಲ ತಾಂಡಾದ ನಾಗರಾಜ ಮಹಾರಾಜರು ಹಾಗೂ ದಾವಣಗೆರೆಯ ನಾಗರಾಜ ಮಹಾರಾಜರು, ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಈರಪ್ಪ ಲಮಾಣಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ.ನಾಗರಾಜ, ಆರ್.ವಿ.ಚಿನ್ನಿಕಟ್ಟಿ, ಸಂಜೀವಕುಮಾರ ನೀರಲಗಿ, ಗಣೇಶ ಬಿಷ್ಟಣ್ಣನವರ, ಎಂ.ಎಂ.ಮೈದೂರ, ಎಂ.ಎಸ್.ಕೋರಿಶೆಟ್ಟರ, ಲಕ್ಷ್ಮಣ ಲಮಾಣಿ, ನಾಗಪ್ಪ ಲಮಾಣಿ, ರಾಮಣ್ಣ ಲಮಾಣಿ, ಚಂದ್ರಪ್ಪ ಲಮಾಣಿ, ಇತರರು ಉಪಸ್ಥಿತರಿದ್ದರು.
    ಸೇವಾಲಾಲರ ಭಾವಚಿತ್ರದ ಮೆರವಣಿಗೆ :
    ಕಾರ್ಯಕ್ರಮಕ್ಕೂ ಮೊದಲು ಹಾವೇರಿ ನಗರದ ಹುತಾತ್ಮ ಮಹದೇವ ಮೈಲಾರ ವೃತ್ತದಿಂದ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ ಅವರ ಭಾವಚಿತ್ರದ ಮೆರವಣಿಗೆಗೆ ಶಾಸಕ ರುದ್ರಪ್ಪ ಲಮಾಣಿ ಚಾಲನೆ ನೀಡಿದರು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು.
    42 ಕೋಟಿ ವೆಚ್ಚದಲ್ಲಿ ಬಂಜಾರ ವಸತಿ ಶಾಲೆ
    ಉದ್ಯೋಗ ಹುಡುಕಿ ವಲಸೆ ಹೋಗುವ ಬಂಜಾರ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಸೂರಗೊಂಡನಕೊಪ್ಪದಲ್ಲಿ ಬಂಜಾರ ವಸತಿ ಶಾಲೆ ನಿರ್ಮಾಣಕ್ಕಾಗಿ 42 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ತಯಾರಿಸಿ ಸಿಎಂ ಅವರಿಗೆ ಸಲ್ಲಿಸಲಾಗಿದೆ ಎಂದು ಹೇಳಿ ರುದ್ರಪ್ಪ ಲಮಾಣಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts