More

    ಜಾತಿ, ಧರ್ಮಗಳ ಹೆಸರಲ್ಲಿ ಜಗಳ ಬೇಡ; ಅಗಡಿ ಜೀವನ ದರ್ಶನ ಪ್ರವಚನದಲ್ಲಿ ಇಬ್ರಾಹಿಂ ಸಾಧಿಕ್ ಹೇಳಿಕೆ

    ಹಾವೇರಿ: ನಾವೆಲ್ಲರೂ ಇದೇ ನೆಲದಲ್ಲಿ ಹುಟ್ಟಿ ಬೆಳೆದಿದ್ದೇವೆ. ನಮ್ಮದು ಮಾನವ ಜಾತಿ, ಭಾರತಾಂಬೆಯ ಪುತ್ರರು ಎನ್ನೋಣ. ಜಾತಿ, ಧರ್ಮಗಳ ಹೆಸರಿನಲ್ಲಿ ಜಗಳವಾಡುವುದು ಬೇಡ. ‘ಸಬಕೋ ಸನ್ಮತಿ ದೇ ಭಗವಾನ್’ ಎಂದು ದಾವಣಗೆರೆಯ ಇಬ್ರಾಹಿಂ ಸಾದಿಕ್ ಹೇಳಿದರು.
    ತಾಲೂಕಿನ ಅಗಡಿ ಗ್ರಾಮದಲ್ಲಿ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ‘ಜೀವನ ದರ್ಶನ’ ಪ್ರವಚನ ಹಾಗೂ ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
    ಸಮೂಹ ಜೀವನದಲ್ಲಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳುವುದೇ ಧರ್ಮ. ಅಂತಹ ಜೀವನ ಧರ್ಮದಿಂದ ಮಾತ್ರ ಸಭ್ಯ ಹಾಗೂ ಸಹನೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ತಿಳಿಸಿದರು.
    ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅತಿಥಿಯಾಗಿ ಮಾತನಾಡಿ ಅಗಡಿ ಗ್ರಾಮ ಐತಿಹಾಸಿಕ ಹಾಗೂ ಧಾರ್ಮಿಕ ಸಾಂಸ್ಕೃತಿಕ ಶಕ್ತಿ ಕೇಂದ್ರ ಎಂದರು.
    ನೆಗಳೂರಿನ ಗುರುಶಾಂತ ಶಿವಾಚಾರ್ಯರು ಮಾತನಾಡಿ, ದೇವರು ಧರ್ಮದ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು. ನಮ್ಮ ಪರಂಪರೆಯ ದೇವಾಲಯಗಳನ್ನು ಉಳಿಸಿಕೊಳ್ಳಬೇಕಾಗಿದೆ. ಅನ್ನದಾತರಿಗೆ ವಧುಗಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದೆಸೆಯಲ್ಲಿ ನಾವೆಲ್ಲರೂ ಚಿಂತನೆ ನಡೆಸಬೇಕಿದೆ ಎಂದರು.
    ಅಕ್ಕಿ ಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ, ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಈ ಶತಮಾನದ ಸಂತರು. ಅನ್ನ, ಅರಿವು, ಅಕ್ಷರ ನೀಡಿದ ತ್ರಿವಿಧ ದಾಸೋಹಿಗಳು. ಅವರ ಆದರ್ಶ ನಮಗೆಲ್ಲ ದಾರಿ ದೀಪ ಎಂದರು.
    ಪ್ರಭುಸ್ವಾಮಿ ಮಠದ ಗುರುಸಿದ್ಧ ಸ್ವಾಮೀಜಿ, ಶರಣೆ ಜಯಶ್ರೀದೇವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಹೊಂಬರಡಿ, ಸಾಹಿತಿ ಹನುಮಂತಗೌಡ ಗೊಲ್ಲರ, ಇತರರು ಉಪಸ್ಥಿತರಿದ್ದರು, ಅಂಜುಮನ್ ಇಸ್ಲಾಂ ಕಮಿಟಿಯವರು ಪೂಜ್ಯರನ್ನು ಸನ್ಮಾನಿಸಿ ಗೌರವಿಸಿದರು, ವೀರಭದ್ರಪ್ಪ ದೊಂಬರಮತ್ತೂರ ಸ್ವಾಗತಿಸಿದರು, ನ್ಯಾಯವಾದಿ ಮಹಾಂತೇಶ ಮೂಲಿಮನಿ ನಿರೂಪಿಸಿದರು. ಬಸವರಾಜ ಕಡ್ಲಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts