More

    ಹಾವಂಶಿ, ಶಾಕಾರ ಗ್ರಾಮಸ್ಥರ ಪರದಾಟ

    ಗುತ್ತಲ: ಕರೊನಾ ವೈರಸ್​ನಿಂದಾಗಿ ಜಿಲ್ಲೆಯ ಗಡಿಭಾಗದ ಹಾವಂಶಿ ಹಾಗೂ ಶಾಕಾರ ಗ್ರಾಮಗಳ ಜನರು ತೊಂದರೆಗೊಳಗಾಗಿದ್ದಾರೆ. ಅನಾರೋಗ್ಯ ಪೀಡಿತರು ಚಿಕಿತ್ಸೆಗೆ, ಜನರು ಬ್ಯಾಂಕ್​ಗಳಿಗೆ ಹೋಗಲು ಹಾಗೂ ಅಗತ್ಯವಸ್ತು ತರಲು ಆಗದ ಸ್ಥಿತಿ ನಿರ್ವಣವಾಗಿದೆ.

    ಜಿಲ್ಲೆಯ ಅತ್ಯಂತ ಚಿಕ್ಕ ಗ್ರಾಮ ಪಂಚಾಯಿತಿ ಆಗಿರುವ ಹಾವಂಶಿ ವ್ಯಾಪ್ತಿಯ ಈ ಗಡಿ ಗ್ರಾಮಗಳು ತುಂಗಭದ್ರಾ ನದಿಯ ಬಲದಂಡೆಯಲ್ಲಿವೆ. ನಿತ್ಯದ ಅಗತ್ಯತೆಗಳಿಗೆ ಈ ಗ್ರಾಮಗಳ ಜನರು ಪಕ್ಕದ ಹೊಳಲು ಗ್ರಾಮಕ್ಕೆ ಆಗಮಿಸಬೇಕು. ಬ್ಯಾಂಕ್ ವ್ಯವಹಾರಕ್ಕೆ ಗುತ್ತಲ ಹಾಗೂ ಹಾವನೂರಕ್ಕೆ ತುಂಗಭದ್ರಾ ನದಿ ದಾಟಿ ಬರಬೇಕು. ಆದರೆ, ತುಂಗಭದ್ರಾ ನದಿಯಲ್ಲಿ ನೀರಿರುವ ಕಾರಣ ನದಿ ದಾಟುವುದು ದುಸ್ತರ ಹಾಗೂ ಅಪಾಯಕಾರಿಯಾಗಿದೆ.

    ದೋಣಿ ಅಥವಾ ತೆಪ್ಪ ಬಳಸಲು ಇಲ್ಲಿ ಅನುಮತಿ ಇಲ್ಲ. ರಸ್ತೆ ಮಾರ್ಗವಾಗಿ ಹೋಗಲು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಬಳ್ಳಾರಿ ಜಿಲ್ಲೆಯ ಹೊಳಲು ಗ್ರಾಮದಲ್ಲಿರುವ ಪೊಲೀಸರು ಅನುಮತಿ ನೀಡುತ್ತಿಲ್ಲ. ಅಲ್ಲದೆ, ಎರಡು ಗ್ರಾಮಗಳ ಜನರಿಗೂ ರಸ್ತೆ ಮಾರ್ಗವಾಗಿ ಹೊಳಲು ಮುಖಾಂತರ ಗುತ್ತಲ ಹಾಗೂ ಹಾವೇರಿಗೆ ತೆರಳಲು ಪೊಲೀಸರು ಅನುಮತಿ ನೀಡುವುದಿಲ್ಲ.

    ಜನರು ಸಮಸ್ಯೆಯನ್ನು ಹಾವೇರಿ ತಾ.ಪಂ. ಮುಖ್ಯಾಧಿಕಾರಿ ಹಾಗೂ ತಹಸೀಲ್ದಾರ್ ಅವರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಬಳ್ಳಾರಿ ಜಿಲ್ಲೆಯ ಪೊಲೀಸರಿಗೆ ಅನುಮತಿ ನೀಡುವಂತೆ ಸಲ್ಲಿಸಿದ ಅಧಿಕಾರಿಗಳ ಕೋರಿಕೆಯನ್ನು ಅಲ್ಲಿನ ಜಿಲ್ಲಾಡಳಿತ ಒಪ್ಪಿಲ್ಲ. ಹೀಗಾಗಿ ಅಲ್ಲಿನ ಜನರ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

    ಲಾಕ್​ಡೌನ್ ಸಮಸ್ಯೆಯಿಂದ ಅಗತ್ಯವಸ್ತು ತರಲು ಹಾಗೂ ಬ್ಯಾಂಕ್​ಗೆ ತೆರಳಲು ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಹಾವೇರಿ ಜಿಲ್ಲಾಡಳಿತ ಬಳ್ಳಾರಿ ಜಿಲ್ಲೆಯ ಆಡಳಿತದೊಂದಿಗೆ ರ್ಚಚಿಸಿ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.

    ಗಡಿ ಗ್ರಾಮಗಳ ಜನರಿಗೆ ತೀವ್ರ ತೊಂದರೆಯಾಗಿದೆ. ನಮ್ಮ ತಾಲೂಕಿನ ಜನರಿಗೆ ಬ್ಯಾಂಕ್ ಹಾಗೂ ಆಸ್ಪತ್ರೆಗೆ ತೆರಳಲು ಬಳ್ಳಾರಿ ಜಿಲ್ಲೆಯ ಪೊಲೀಸರು ಬಿಡುತ್ತಿಲ್ಲ. ಅಲ್ಲದೆ, ಗ್ರಾ.ಪಂ. ಸಿಬ್ಬಂದಿಗೆ ಗುರುತಿನ ಚೀಟಿ ಇದ್ದರೂ, ಅವರನ್ನು ಬಿಡುತ್ತಿಲ್ಲ. ಇದರಿಂದ ಪಂಚಾಯಿತಿ ಕೆಲಸಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಹಡಗಲಿ ತಹಸೀಲ್ದಾರ್ ಅವರೊಂದಿಗೆ ರ್ಚಚಿಸಿ, ಕ್ರಮ ಕೈಗೊಳ್ಳುವಂತೆ ಹಾವೇರಿ ತಹಸೀಲ್ದಾರ್ ಅವರಿಗೆ ಮನವಿ ಮಾಡಿದ್ದೇನೆ.

    | ಡಾ. ಬಸವರಾಜ ತಾ.ಪಂ. ಇಒ, ಹಾವೇರಿ

    ನದಿಯಲ್ಲಿ ನೀರಿರುವ ಕಾರಣ ಹಾವನೂರ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ. ಹೊಳಲು ಮೂಲಕ ಗುತ್ತಲ, ಹಾವನೂರ ಅಥವಾ ಹಾವೇರಿ ತೆರಳಲು ಹೊಳಲ ಹಾಗೂ ಮೈಲಾರ ಗ್ರಾಮದಲ್ಲಿರುವ ಪೊಲೀಸರು ನಮ್ಮನ್ನು ಬಿಡುತ್ತಿಲ್ಲ. ಇದರಿಂದ ನಮಗೆ ತೊಂದರೆಯಾಗಿದೆ.

    | ಅರವಿಂದ ಪೂಜಾರ, ಶಾಕಾರ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts