More

    ದೃಷ್ಟಿಹೀನವಾದ ಮೂರನೇ ಕಣ್ಣು !

    ಹಟ್ಟಿಚಿನ್ನದಗಣಿ: ಪಟ್ಟಣದ ಪ್ರಮುಖ ಆರು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ 18 ಸಿಸಿ ಕ್ಯಾಮರಾಗಳು ಕಣ್ಗಾವಲಾಗಿ ಅಳವಡಿಸಲಾಗಿದ್ದರೂ ಅಸಮರ್ಪಕ ನಿರ್ವಹಣೆಯಿಂದ ಬೆದರು ಬೊಂಬೆಯಂತಾಗಿದ್ದು, ನಿಷ್ಪ್ರಯೋಜಕವಾಗಿ ಉಳಿದಿವೆ.

    ಪಟ್ಟಣದಲ್ಲಿ ವಿವಿಧ ಅಕ್ರಮಗಳು ಹೆಚ್ಚುತ್ತಿದ್ದಂತೆ ಪೊಲೀಸ್ ಇಲಾಖೆ ಮನವಿ ಮೇರೆಗೆ ನಾಲ್ಕೈದು ವರ್ಷಗಳ ಹಿಂದೆ ಹಟ್ಟಿಚಿನ್ನದಗಣಿ ಕಂಪನಿ ಆಡಳಿತ ವರ್ಗ 18 ಸಿಸಿ ಕ್ಯಾಮರಾಗಳನ್ನು ಒದಗಿಸಿಕೊಟ್ಟಿತ್ತು. ಈಗ ಅವೆಲ್ಲ ಕೆಲಸಕ್ಕೆ ಬಾರದಂತಾಗಿವೆ. ಪಟ್ಟಣದ ಎಸ್‌ಬಿಐ ಬ್ಯಾಂಕ್ ಎಟಿಎಂ ಕಳ್ಳತನ, ಸಿದ್ಧಾರೂಡ ಮಠದ ಹತ್ತಿರ ಬಂಗಾರದ ಅಂಗಡಿ ಕಳವು, ಕೋಠಾ ಕ್ರಾಸ್ ಬಳಿ ಮೊಬೈಲ್ ಅಂಗಡಿಯಲ್ಲಿ ಕಳವು ಹಾಗೂ ಗಂಧದ ಮರ ಕಳ್ಳತನ ಹೆಚ್ಚಿದ್ದರ ಪರಿಣಾಮ ಹಟ್ಟಿಚಿನ್ನದಗಣಿ ಕಂಪನಿ ಆಡಳಿತ ಮಂಡಳಿ ಹೊಸಬಸ್ ನಿಲ್ದಾಣ, ಕಾಕಾನಗರ, ಕೋಠಾಕ್ರಾಸ್ ಹಳೆಯ ಬಸ್‌ನಿಲ್ದಾಣ, ಸಿನಿಮಾ ಮಂದಿರ, ಸಂತೆ ಬಜಾರ, ಮಸೀದಿ, ದೇವಸ್ಧಾನ, ಪಾಮನಕೆಲ್ಲೂರ್ ಕ್ರಾಸ್ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ 18 ಕಾಮರಾಗಳನ್ನು ಅಳವಡಿಸಲಾಗಿತ್ತು. ಆದರೆ, ಅವುಗಳಲ್ಲಿ ಒಂದೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.

    ಕೆಲ ವರ್ಷಗಳ ಹಿಂದೆ ಎಟಿಎಂನಿಂದ ಹಣ ದರೋಡೆ ಮಾಡಿದ ಕಳ್ಳರು ಇಂದಿಗೂ ಪತ್ತೆಯಾಗಿಲ್ಲ. ಕಳೆದ ನವೆಂಬರ್‌ನಲ್ಲಿ ಪಟ್ಟಣದಲ್ಲಿ ಕೊಲೆಯಾಗಿದ್ದು, ಕೊಲೆಗಾರರ ಪತ್ತೆಗೆ ಅಂಗಡಿ ಮುಂದೆ ಮಾಲೀಕರು ತಮ್ಮ ಸ್ವಂತ ಖರ್ಚಿನಲ್ಲಿ ಅಳವಡಿಸಿದ ಕ್ಯಾಮರಾಗಳನ್ನು ಬೆನ್ನತ್ತಿ ತನಿಖೆ ನಡೆಸುತ್ತಿದ್ದಾರೆ. ಕಳೆದ 15-20 ದಿನಗಳ ಅವಧಿಯಲ್ಲಿ ಮೆಡಿಕಲ್ ಸ್ಟೋರ್, ಪಾನ್ ಶಾಪ್, ಕಿರಾಣಿ ಅಂಗಡಿ ಹಾಗೂ ಹಟ್ಟಿಚಿನ್ನದಗಣಿ ಕಂಪನಿ ಆಸ್ಪತ್ರೆ ರಸ್ತೆಯಲ್ಲಿ ನಿಲ್ಲಿಸಿದ ಬೈಕ್‌ಗಳು ಸೇರಿದಂತೆ ಪಟ್ಟಣದಲ್ಲಿ ಈಗಾಗಲೇ ಹಲವು ಕಳ್ಳತನ ಪ್ರಕರಣಗಳು ನಡೆದಿವೆ.

    ಗಣಿ ಕಂಪನಿ ಆಡಳಿತ ವರ್ಗ ಪೊಲೀಸ್ ಇಲಾಖೆ ಮನವಿ ಮೇರೆಗೆ ಹಟ್ಟಿ ಪಪಂ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿದೆ. ಗಣಿ ಕಂಪನಿ, ಪಪಂ ಆಡಳಿತವರ್ಗ ಹಾಗೂ ಪೊಲೀಸ್ ಇಲಾಖೆ.. ಇವುಗಳಲ್ಲಿ ಯಾರೊಬ್ಬರು ನಿರ್ವಹಣೆ ಹೊಣೆ ಹೊತ್ತಿಲ್ಲ. ಹಬ್ಬಗಳು ಸೇರಿದಂತೆ ಪ್ರಮುಖ ಜನಸಂದಣಿ ಕಾರ್ಯಕ್ರಮಗಳು ಬಂದರೆ ಪೊಲೀಸ್ ಇಲಾಖೆ ಕೆಟ್ಟು ನಿಂತ ಕ್ಯಾಮರಾಗಳನ್ನು ಗಣಿ ಕಂಪನಿಯಿಂದ ರಿಪೇರಿ ಮಾಡಿಸುತ್ತಿದೆ. ಹೀಗೆ ಅವಶ್ಯಕತೆ ಇದ್ದಾಗ ಮಾತ್ರ ಕ್ಯಾಮರಾಗಳು ಕೆಲಸ ಮಾಡುತ್ತಿವೆ. ದಿನ ನಿತ್ಯ ಅಕ್ರಮಗಳ ಪತ್ತೆಗೆ ಸಮರ್ಪಕವಾಗಿ ನಿರ್ವಹಿಸಲು ಯಾರು ಕ್ರಮಕೈಗೊಳ್ಳಬೇಕು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಕಳ್ಳತನ ಮಾಡಿದವರು ಇನ್ನೂ ಮುಂದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಮದರೆ ದಿನವಿಡೀ ಕ್ಯಾಮರಾಗಳು ಕಾರ್ಯ ನಿರ್ವಹಿಸಲಿವೆ ಎಂಬ ನಿರೀಕ್ಷೆ ಹುಸಿಯಾಗಿದೆ. ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ನಾನಾ ರೀತಿ ಅಕ್ರಮಗಳು ನಡೆಯುವ ಸಂಭವವಿದ್ದು, ಕೂಡಲೆ ಸಂಬಂಧಪಟ್ಟವರು ಕ್ರಮವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts