ನವದೆಹಲಿ: ವೀಕ್ಷಕವಿವರಣೆಕಾರ ಸಂಜಯ್ ಮಂಜ್ರೇಕರ್ ಕಳೆದ ವರ್ಷ ಏಕದಿನ ಕ್ರಿಕೆಟ್ ವಿಶ್ವಕಪ್ ವೇಳೆ ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ಟೀಕಿಸಿ ವಿವಾದಕ್ಕೆ ಸಿಲುಕಿದ್ದರು. ಜಡೇಜಾರನ್ನು ‘ಬಿಟ್ ಆ್ಯಂಡ್ ಪೀಸಸ್ ಕ್ರಿಕೆಟರ್’ ಎಂದು ಅವರು ಕರೆದಿದ್ದರು. ಇದಕ್ಕೆ ಪ್ರತಿಯಾಗಿ ಜಡೇಜಾ, ನ್ಯೂಜಿಲೆಂಡ್ ವಿರುದ್ಧದ ಸೆಮಿೈನಲ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಿರ್ವಹಣೆ ತೋರುವ ಮೂಲಕ ತಿರುಗೇಟು ನೀಡಿದ್ದರು. ಅಲ್ಲದೆ ನಾನು ನಿಮಗಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ ಎಂದು ಟ್ವೀಟಿಸಿದ್ದರು. ಇದರ ನಡುವೆಯೂ ಸಂಜಯ್ ಮಂಜ್ರೇಕರ್, ಜಡೇಜಾರನ್ನು ಟೀಕಿಸುವುದನ್ನು ಮುಂದುವರಿಸಿದ್ದರು. ಆದರೆ ಬುಧವಾರ ಕ್ಯಾನ್‌ಬೆರಾದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲೂ ಜಡೇಜಾ ಅಮೋಘ ಬ್ಯಾಟಿಂಗ್ ನಿರ್ವಹಣೆ ತೋರಿದ ಬಳಿಕ ಸಂಜಯ್ ಮಂಜ್ರೇಕರ್ ಬದಲಾಗಿದ್ದಾರೆ! ಜಡೇಜಾ ಅವರ ಬ್ಯಾಟಿಂಗ್ ಅನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ರವೀಂದ್ರ ಜಡೇಜಾ ಅಜೇಯ 66 ರನ್ ಸಿಡಿಸಿದ್ದಲ್ಲದೆ, ಹಾರ್ದಿಕ್ ಪಾಂಡ್ಯ ಜತೆಗೆ ಅಮೋಘ ಜತೆಯಾಟದಲ್ಲಿ ಪಾಲ್ಗೊಳ್ಳುವ ಮೂಲಕ ಭಾರತ ತಂಡದ ಬೃಹತ್ ಮೊತ್ತಕ್ಕೆ ಮತ್ತು ಆ ಮೂಲಕ ಗೆಲುವಿಗೆ ನೆರವಾಗಿದ್ದರು. ಜಡೇಜಾರ ಈ ಇನಿಂಗ್ಸ್ ವೇಳೆ ಸಂಜಯ್ ಮಂಜ್ರೇಕರ್ ಸೋನಿ ಸಿಕ್ಸ್ ಚಾನಲ್‌ನ ಕಾಮೆಂಟರಿ ಬಾಕ್ಸ್‌ನಲ್ಲೂ ಇದ್ದರು. ‘ಜಡೇಜಾರ ಇಂದಿನ ಬ್ಯಾಟಿಂಗ್ ನಿರ್ವಹಣೆಗೆ ನಾನು ಖಂಡಿತವಾಗಿಯೂ ಹ್ಯಾಟ್ಸ್-ಆಫ್ ಹೇಳುತ್ತೇನೆ. ಇದೊಂದು ಅಮೋಘ ಆಟ’ ಎಂದು ಮಂಜ್ರೇಕರ್ ಗುಣಗಾನ ಮಾಡಿದ್ದರು.
‘ಪಂದ್ಯದಲ್ಲಿ ಜಡೇಜಾ ಕೊನೇ 3-4 ಓವರ್‌ಗಳಲ್ಲಿ ನಿಜಕ್ಕೂ ಸ್ಮಾರ್ಟ್ ಆಟವಾಡಿದರು. ಚೆಂಡನ್ನು ಅತ್ಯುತ್ತಮವಾಗಿ ಬಡಿದಟ್ಟಿದರು. ಆಫ್-ಸೈಡ್ ಮತ್ತು ಲೆಗ್ ಸೈಡ್ ಎರಡೂ ಬದಿಯಲ್ಲೂ ಅವರು ರನ್ ಗಳಿಸಿದ ರೀತಿ ನನಗೆ ಬಹಳ ಇಷ್ಟವಾಯಿತು. ಅವರ ಈ ಆಟದಿಂದ ಹಾರ್ದಿಕ್ ಪಾಂಡ್ಯ ಮೇಲಿನ ಒತ್ತಡವೂ ಕಡಿಮೆಯಾಯಿತು. ಇದು ಏಕದಿನ ಕ್ರಿಕೆಟ್‌ನಲ್ಲಿ ದೀರ್ಘಕಾಲದಿಂದ ನೋಡಿದ ಅತ್ಯುತ್ತಮ ಇನಿಂಗ್ಸ್‌ಗಳಲ್ಲೊಂದಾಗಿತ್ತು. ಪಾಂಡ್ಯ ಜತೆಗೂಡಿ ಜಡೇಜಾ ಆಡಿದ ಈ ಆಟದಿಂದಲೇ ಭಾರತ ತಂಡ ಸವಾಲಿನ ಮೊತ್ತ ಪೇರಿಸುವಲ್ಲಿ ಸಫಲವಾಯಿತು’ ಎಂದು ಸಂಜಯ್ ಮಂಜ್ರೇಕರ್ ಸೋನಿ ಸಿಕ್ಸ್ ಚಾನಲ್‌ನಲ್ಲಿ ಪಂದ್ಯದ ನೇರಪ್ರಸಾರದ ವೇಳೆ ಜಡೇಜಾರನ್ನು ಪ್ರಶಂಸಿಸಿದ್ದಾರೆ.
ಈ ನಡುವೆ ಜಡೇಜಾರ ಆಲ್ರೌಂಡರ್ ಸಾಮರ್ಥ್ಯದ ಬಗ್ಗೆ ಮಂಜ್ರೇಕರ್ ಇನ್ನೂ ಅನುಮಾನಗಳನ್ನು ಹೊಂದಿದ್ದಾರೆ. ‘ಜಡೇಜಾ ಬೌಲಿಂಗ್‌ನಲ್ಲಿ ಇನ್ನಷ್ಟು ವಿಕೆಟ್‌ಗಳನ್ನು ಕಬಳಿಸಬೇಕೆಂದು ನಾನು ಬಯಸುತ್ತೇನೆ. ಕಳೆದ ವರ್ಷ ನಾನು ಈ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದೆ. ಅವರ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆದರೆ ಬೌಲಿಂಗ್‌ನಲ್ಲಿ ಇನ್ನೂ ಸ್ವಲ್ಪಮಟ್ಟಿಗೆ ಸುಧಾರಣೆ ಆಗಬೇಕಾಗಿದೆ’ ಎಂದು ಮಂಜ್ರೇಕರ್ ಹೇಳಿದ್ದಾರೆ.
ಆಸೀಸ್‌ನಲ್ಲಿ ಗೆಲುವಿನ ಖಾತೆ ತೆರೆದ ಭಾರತ, ಏಕದಿನ ಸರಣಿಯಲ್ಲಿ ತಪ್ಪಿದ ವೈಟ್‌ವಾಷ್