More

    ಚುನಾವಣಾ ಅಖಾಡದಿಂದ ಹೊರಗುಳಿದ ರಾಜ್ಯದ 2ನೇ ಅತಿದೊಡ್ಡ ಪಂಚಾಯಿತಿ

    ಹಾಸನ: ರಾಜ್ಯದ ಎರಡನೇ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ನಗರ ಸಮೀಪದ ಸತ್ಯಮಂಗಲ ಗ್ರಾಪಂ ಈ ಬಾರಿ ಚುನಾವಣೆಯಿಂದ ದೂರ ಉಳಿದಿದ್ದು ಸ್ಪರ್ಧೆ ಬಯಸಿ ತಯಾರಿಯಲ್ಲಿ ತೊಡಗಿದ್ದವರಿಗೆ ನಿರಾಸೆಯಾಗಿದೆ.

    18 ಸಾವಿರ ಮತದಾರರು ಹಾಗೂ 45 ಸದಸ್ಯರನ್ನು ಹೊಂದಿರುವ ಜಿಲ್ಲೆಯ ಏಕೈಕ ಗ್ರಾಪಂ ಇದಾಗಿದೆ. ನಗರ ಸುತ್ತಲಿನ 10 ಗ್ರಾಪಂಗಳನ್ನು ನಗರಸಭೆಗೆ ಸೇರ್ಪಡೆಗೊಳಿಸಿದ್ದು ಸತ್ಯಮಂಗಲವೂ ಸೇರಿದೆ. ಪ್ರತಿ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಮಹತ್ವದ ಊರಾಗಿದ್ದ ಸತ್ಯಮಂಗಲ ಸದ್ಯಕ್ಕೆ ಚುನಾವಣಾ ಬಿರುಗಾಳಿಯಿಂದ ದೂರ ಉಳಿದಿದೆ.

    ಕರೊನಾ ಲಾಕ್‌ಡೌನ್‌ನಿಂದ ಉದ್ಯೋಗ ಅರಸಿ ವಲಸೆ ಹೋಗಿದ್ದ ಯುವಕರ ಪಡೆ ವಾಪಸ್ಸಾಗಿದ್ದು ನಾಲ್ಕೈದು ತಿಂಗಳಿಂದ ಚುನಾವಣಾ ತಯಾರಿಯಲ್ಲಿದ್ದರು. ಕಳೆದ ಚುನಾವಣೆಯಲ್ಲಿ ಪರಾಭವಗೊಂಡು ಈಗ ಅದೃಷ್ಟ ಪರೀಕ್ಷೆಗೆ ತಯಾರಿ ನಡೆಸಿದ್ದ ಬಹುತೇಕರಿಗೆ ’ನಗರಸಭೆ ಸೇರ್ಪಡೆ’ ಕಹಿ ಅನುಭವ ನೀಡಿದೆ.

    ಸತ್ಯಮಂಗಲ ಗ್ರಾಮ ಪಂಚಾಯಿತಿ ಹಾಗೂ ವ್ಯಾಪ್ತಿಯ ಹಳ್ಳಿಗಳನ್ನು ನಗರಸಭೆಗೆ ಸೇರ್ಪಡಿಸಿರುವುದು ಕೆಲಸರಲ್ಲಿ ಸಂತಸ ಉಂಟುಮಾಡಿದ್ದರೆ ಮತ್ತೆ ಕೆಲವರು ಅಪಸ್ವರ ಎತ್ತಿದ್ದಾರೆ. ತೆರಿಗೆ ವಿಚಾರವಾಗಿ ಬಂದರೆ ಸತ್ಯಮಂಗಲ ಇನ್ನು ದುಬಾರಿಯಾಗಲಿದೆ. ಗ್ರಾಪಂ ಹಾಗೂ ನಗರಸಭೆ ತೆರಿಗೆ ದರದಲ್ಲಿ ವ್ಯತ್ಯಾಸವಿದ್ದು 20 ರಿಂದ 30 ನಿವೇಶನ ಹೊಂದಿರುವ ಶ್ರೀಮಂತರು ಗ್ರಾಮ ಪಂಚಾಯಿತಿಯಾಗಿಯೇ ಸತ್ಯಮಂಗಲ ಮುಂದುವರಿಯಲಿ ಎಂದು ಹೇಳುತ್ತಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಚದರ ಮೀಟರ್‌ಗೆ ಪ್ರಸ್ತುತ ದರಕ್ಕೆ ಶೇ. 0.05 ನಷ್ಟು ತೆರಿಗೆ ವಿಧಿಸುತ್ತದೆ. ನಗರಕ್ಕೆ ತೀರಾ ಹತ್ತಿರದಲ್ಲಿದ್ದರೂ ಗ್ರಾಪಂ ಅಧೀನಕ್ಕೆ ಒಳಪಟ್ಟಿರುವುದರಿಂದ ತೆರಿಗೆ ತುಂಬಾ ಕಡಿಮೆ ಇದೆ. ಆದರೆ ನಗರಸಭೆಗೆ ಸೇರ್ಪಡೆಯಾದರೆ ಅದು ದುಪ್ಪಟ್ಟಾಗಲಿದೆ. ಜತೆಗೆ ತೆರಿಗೆ ಪಾವತಿಸದಿದ್ದರೆ ಗ್ರಾಪಂನಿಂದ ಯಾವುದೇ ಕ್ರಮ ಆಗುವುದಿಲ್ಲ. ಆದರೆ ನಗರಸಭೆಯು ತೆರಿಗೆ ಕಟ್ಟದಿದ್ದರೆ ಮುಂದಿನ ವರ್ಷಕ್ಕೆ ಬಡ್ಡಿ ವಸೂಲಿ ಮಾಡುತ್ತದೆ. ಜತೆಗೆ ನೀರು, ವಿದ್ಯುತ್ ಸೌಕರ್ಯ ಸ್ಥಗಿತಗೊಳಿಸುವ ಅಧಿಕಾರ ಹೊಂದಿದೆ. ಹೀಗಾಗಿ ಶ್ರೀಮಂತ ನಿವೇಶನದಾರರು ಸತ್ಯಮಂಗಲವನ್ನು ಗ್ರಾಮ ಪಂಚಾಯಿತಿ ಆಗಿಯೇ ಕಾಣಲು ಬಯಸುತ್ತಿದ್ದಾರೆ.

    ಗ್ರಾಮ ಪಂಚಾಯಿತಿಗೆ ನರೇಗಾ, ಪಿಎಂಜಿಎಸ್‌ವೈ, ತೊಟ್ಟಿ ನಿರ್ಮಾಣ, ಸ್ವಚ್ಛತಾ ಅಭಿಯಾನ ಸೇರಿದಂತೆ ಅನೇಕ ಯೋಜನೆಯಡಿ ಹೇರಳ ಅನುದಾನ ದೊರೆಯುತ್ತದೆ. ನಗರಸಭೆ ತನ್ನ 35 ವಾರ್ಡ್‌ಗಳಿಗೆ ಮೂಲಸೌಕರ್ಯ ಕಲ್ಪಿಸಲು ಶಕ್ತವಾಗಿಲ್ಲ. ಇನ್ನು ಹೆಚ್ಚುವರಿ ಗ್ರಾಮಗಳ ಸೇರ್ಪಡೆ ಏಕೆ ಎಂಬ ಪ್ರಶ್ನೆಯನ್ನು ಕೆಲವರು ಮುಂದಿಡುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts