ಅರಕಲಗೂಡು: ಪಟ್ಟಣದ ಶಿಕ್ಷಕರ ಭವನದಲ್ಲಿ ಜ. 18ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.
ಹಾಸನದ ಜವಳಿ ಕಾರ್ಖಾನೆ ಹಿಮತ್‌ಸಿಂಗ್ ಲಿನೆನ್ಸ್ ಕಂಪನಿಯಲ್ಲಿ 18ರಿಂದ 35 ವರ್ಷದ ಮಹಿಳೆಯರಿಗೆ ಉದ್ಯೋಗ ಲಭಿಸಲಿದ್ದು ಕೌಶಲ್ಯದ ಆಧಾರದ ಮೇಲೆ ಮಾಸಿಕವಾಗಿ 8ರಿಂದ 17 ಸಾವಿರ ರೂವರೆಗೆ ವೇತನ ಸಿಗಲಿದೆ. 8ರಿಂದ 10ನೇ ತರಗತಿ ಹಾಗೂ ಪಿಯುಸಿ ಉತ್ತೀರ್ಣರಾದವರು ಅಗತ್ಯ ದಾಖಲಾತಿಗಳೊಂದಿಗೆ ಮೇಳದಲ್ಲಿ ಭಾಗವಹಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಉದ್ಯೋಗಕ್ಕೆ ಸೇರುವ ಮಹಿಳೆಯರಿಗೆ ಉಳಿದುಕೊಳ್ಳಲು ಊಟ, ವಸತಿ ಹಾಗೂ ಸಾರಿಗೆ, ಪಿಎಫ್, ಉಪಧನ, ಇಎಸ್‌ಐ, ವೈದ್ಯಕೀಯ ಸೌಲಭ್ಯ ಮತ್ತು ಹಾಜರಾತಿ ಬೋನಸ್ ಸಿಗಲಿದೆ. ಮನೆಯಿಂದ ಬಸ್‌ನಲ್ಲಿ ಬರಲಿಚ್ಚಿಸುವ ಮಹಿಳೆಯರಿಗೂ ಅವಕಾಶ ನೀಡಲಾಗುವುದು. ನಿರುದ್ಯೋಗಿ ಮಹಿಳೆಯರು ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ತಾಪಂ ಅಧ್ಯಕ್ಷೆ ಪದ್ಮಮ್ಮ ಮಹೇಶ್, ಪಪಂ ಅಧ್ಯಕ್ಷ ಹೂವಣ್ಣ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ವೀರಾಜ್, ಜಿಪಂ ಸದಸ್ಯ ರವಿ, ಕಂಪನಿಯ ಸುರೇಶ್, ವಾಸುದೇವ್ ಇದ್ದರು.