More

    ಸರ್ಕಾರಿ ಜಾಗದಲ್ಲಿ ಗಣಿಗಾರಿಕೆ ನಡೆಸಿದರೆ ಕ್ರಮ

    ಹಾಸನ: ಸರ್ಕಾರಿ ಜಾಗ ಅಥವಾ ಗೋಮಾಳಗಳಲ್ಲಿ ಗಣಿಗಾರಿಕೆ ನಡೆಸಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ಎಚ್ಚರಿಕೆ ನೀಡಿದರು.


    ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಮತ್ತು ಕ್ರಷರ್ ಪರವಾನಗಿ, ನಿಯಂತ್ರಣ ಪ್ರಾಧಿಕಾರ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


    ಸರ್ಕಾರಿ ಕಾಮಗಾರಿಗೆ ಹೊರತುಪಡಿಸಿ ಬೇರೆ ಯಾವುದೇ ಖಾಸಗಿ ಗಣಿಗಾರಿಕೆ ಉದ್ದೇಶಕ್ಕಾಗಿ ಸರ್ಕಾರಿ ಜಾಗ ನೀಡುವಂತಿಲ್ಲ. ಈಗಾಗಲೇ ಫಾರಂ ಬಿ-1 ನೀಡಿರುವ ಕ್ರಷರ್ ಅಥವಾ ಕಲ್ಲು ಗಣಿಗಾರಿಕೆ ನಡೆಯುವ ಸ್ಥಳಗಳು ಪಟ್ಟಾ ಜಮೀನು ಆಗಿದ್ದರೆ ಮಾತ್ರ ಕೆಲಸ ನಡೆಸಬೇಕು. ಸರ್ಕಾರಿ ಭೂಮಿಯಾಗಿದ್ದರೆ ಅನುಮತಿ ರದ್ದುಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.


    ಗಣಿಗಾರಿಕೆಗಳು ಶಾಲೆ, ಜನ ವಸತಿ ಸ್ಥಳ ಹಾಗೂ ರಸ್ತೆಯಿಂದ 200 ಮೀ. ದೂರವಿರಬೇಕು. ಅತಿ ಹೆಚ್ಚಿನ ಶಬ್ದ ಮತ್ತು ಸ್ಥಳ ಬಿರುಕು ಬಿಡದಂತಿರಬೇಕು. ಸಂಬಂಧಿತ ಅಧಿಕಾರಿಗಳು ಅದನ್ನು ನಿರಂತರವಾಗಿ ಪರಿಶೀಲಿಸುವಂತೆ ಹೇಳಿದರು.


    ಹೊಸದಾಗಿ ಕ್ರಷರ್, ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ಕೋರಿ ಬರುವ ಅರ್ಜಿದಾರರು ಕಡ್ಡಾಯವಾಗಿ ಕ್ರಷರ್ ಪಕ್ಕದಲ್ಲೇ ಕಲ್ಲುಗಣಿ ನಿಕ್ಷೇಪಗಳನ್ನು ಹೊಂದಿರಬೇಕು. ಜಿಲ್ಲೆಯಲ್ಲಿ ಅಕ್ರಮವಾಗಿ ಯಾವುದೇ ಗಣಿಗಾರಿಕೆ ನಡೆಯದಂತೆ ನಿಗಾವಹಿಸಬೇಕೆಂದು ನಿರ್ದೇಶನ ನೀಡಿದರು.


    ನಿಯಮಬಾಹಿರವಾಗಿ ರಿಗ್ ಬ್ಲಾಸ್ಟಿಂಗ್ ನಡೆಯುತ್ತಿರುವುದರ ಕುರಿತು ಸಾರ್ವಜನಿಕರಿಂದ ದೂರುಗಳಿದ್ದು, ಅದನ್ನು ತಡೆಯಲು ಡಿವೈಎಸ್‌ಪಿ, ಸ್ಥಳೀಯ ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಭೂವಿಜ್ಞಾನಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವುದರ ಜತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.
    ಕ್ರಷರ್, ಕಲ್ಲು ಗಣಿಗಾರಿಕೆ ನಡೆಸುವವರನ್ನು ಸಭೆ ಕರೆದು ತಿಳಿವಳಿಕೆ ನೀಡಬೇಕು. ನಂತರದಲ್ಲಿಯೂ ನಿಯಮಬಾಹಿರವಾಗಿ ಕಾರ್ಯನಿರ್ವಹಿಸಿದವರಿಗೆ ಚಾಲನಾ ಪರವಾನಗಿ ಪತ್ರ ರದ್ದುಪಡಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದರು.


    ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ, ಡಿಎಫ್‌ಒ ಎಂ. ಶಿವರಾಂ ಬಾಬು, ಉಪ ವಿಭಾಗಾಧಿಕಾರಿಗಳಾದ ಡಾ.ನವೀನ್‌ಭಟ್ ಹಾಗೂ ಗಿರೀಶ್ ನಂದನ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮಂಜು, ಹಿರಿಯ ಭೂ ವಿಜ್ಞಾನಿ ನಾಗರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts