More

    ಭದ್ರತೆ ಒದಗಿಸಿದ ಪೊಲೀಸ್ ಇಲಾಖೆಗೆ 4.25 ಕೋಟಿ ರೂ. ಪಾವತಿಸಬೇಕಿದೆ ಎಎಸ್ಐ!

    ಹಾಸನ (ಹಳೇಬೀಡು): ಐತಿಹಾಸಿಕ ಹೊಯ್ಸಳೇಶ್ವರ ದೇಗುಲದ ಭದ್ರತೆಗಾಗಿ ನೀಯೋಜಿಸಿದ್ದ ಜಿಲ್ಲಾ ಸಶಸ್ತ್ರ ದಳದ ಸಿಬ್ಬಂದಿಗೆ ಭಾರತೀಯ ಪುರಾತತ್ವ ವಿಭಾಗ (ಎಎಸ್​ಐ) 4.25 ಕೋಟಿ ರೂ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

    ಹೊಯ್ಸಳೇಶ್ವರ ದೇಗುಲದ ರಕ್ಷಣಾ ವ್ಯವಸ್ಥೆಗಾಗಿ ಮೂರು ದಶಕದಿಂದಲೂ ಜಿಲ್ಲಾ ಸಶಸ್ತ್ರ(ಡಿಎಆರ್) ಪಡೆಯ ಸೇವೆಯನ್ನು ಭಾರತೀಯ ಪುರಾತತ್ವ ವಿಭಾಗವು ಪಡೆಯುತ್ತಾ ಬಂದಿದ್ದು, ಒಪ್ಪಂದಂತೆ ಭದ್ರತಾ ಶುಲ್ಕವನ್ನು ಪಾವತಿಸುತ್ತಿತ್ತು. ದಿನಕ್ಕೆ ಒಬ್ಬ ಹೆಡ್ ಕಾನ್ಸ್ಟೇಬಲ್ ಹಾಗೂ ನಾಲ್ಕು ಜನ ಪೇದೆಗಳು ಕಾರ್ಯ ನಿರ್ವಹಿಸುತ್ತಿದ್ದರು. ಆದರೆ 2010 ರಿಂದ ಪುರಾತತ್ವ ವಿಭಾಗವು ಪೊಲೀಸ್ ಇಲಾಖೆಗೆ ಹಣ ಪಾವತಿಸುವಲ್ಲಿ ವಿಫಲವಾಗಿದ್ದು, ಇಲ್ಲಿಯವರೆಗೆ 4.25 ಕೋಟಿ ಬಾಕಿ ಉಳಿಸಿಕೊಂಡಿದೆ. ಪ್ರಸ್ತುತ ಡಿಎಆರ್ ಸೇವೆಯೂ ಬೇಡವೆಂದು ತಿಳಿಸಿದ್ದು, ಕರ್ತವ್ಯ ನಿರ್ವಹಿಸಿದ್ದ ಸಿಬ್ಬಂದಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹತ್ತು ವರ್ಷದಿಂದ ಈ ಬಗ್ಗೆ ಪುರಾತತ್ವ ವಿಭಾಗದ ಅಧಿಕಾರಿಗಳಿಗೆ ಹಲವು ಪತ್ರಗಳನ್ನು ಬರೆದು ತಿಳಿಸಲಾಗಿದೆ ಎಂದು ಹೆಸರು ಹೇಳಲಿಚ್ಚಿಸಿದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಆಂತರಿಕ ಲೆಕ್ಕಾಚಾರದ ಪ್ರಕ್ರಿಯೆಯಲ್ಲಿ ಕೆಲವು ಸಮಸ್ಯೆಗಳಾಗಿರುವುದರಿಂದ ಪೊಲೀಸ್ ಇಲಾಖೆಗೆ ಹಣ ಪಾವತಿಸುವುದು ತಡವಾಗಿದೆ. ಯಾವ ದಿನಗಳಲ್ಲಿ ಎಷ್ಟು ಜನ ಸಿಬ್ಬಂದಿ ಹೊಯ್ಸಳೇಶ್ವರ ದೇಗುಲದಲ್ಲಿ ಭದ್ರತಾ ಕರ್ತವ್ಯ ನಿರ್ವಹಿಸಿದ್ದಾರೆ ಎನ್ನುವ ಬಗ್ಗೆ ಗೊಂದಲವಿದೆ. ದೇಗುಲಕ್ಕೆ ಧಕ್ಕೆ ತರುವುದಾಗಿ ಭಯೋತ್ಪಾದಕ ಅನಾಮಧೇಯ ಪತ್ರವೊಂದು ಎರಡು ವರ್ಷದ ಹಿಂದೆ ಬಂದಾಗ ವಿಶೇಷ ಭದ್ರತೆಯನ್ನೂ ಪಡೆದುಕೊಳ್ಳಲಾಗಿತ್ತು. ಇವೆಲ್ಲದರ ಲೆಕ್ಕಾಚಾರ ಆಗಬೇಕಿದೆ. ಬಳಿಕ ಹಣ ಪಾವತಿಯಾಗಲಿದೆ ಎಂದು ಹಿರಿಯ ಪುರಾತತ್ವ ಅಧಿಕಾರಿ ಪಿ.ಅರವಜಿ ತಿಳಿಸಿದ್ದಾರೆ.

    ಅನನ್ಯ ಶಿಲ್ಪಕಲಾ ವೈಭವದಿಂದ ಹೆಸರಾಗಿದ್ದ ಹೊಯ್ಸಳೇಶ್ವರ ದೇಗುಲವು ಅನ್ಯ ಕಾರಣದಿಂದ ವಿವಾದಕ್ಕೆ ಗುರಿಯಾಗುತ್ತಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

    ಹಣ ಪಾವತಿಗೆ ಸಂಬಂಧಿಸಿದಂತೆ ಕೆಲವು ತಕರಾರುಗಳಿರುವುದು ನಿಜ. ಇದರ ಬಗ್ಗೆ ಪುರಾತತ್ವ ವಿಭಾಗದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ಆಂತರಿಕ ಲೆಕ್ಕಾಚಾರಗಳು ಮುಗಿದ ಬಳಿಕ ಸಮಸ್ಯೆ ಇತ್ಯರ್ಥವಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts