More

    ರೈತ ಸಂಘದಿಂದ ಪ್ರತಿಭಟನೆ

    ಹಾಸನ: ಬೇಲೂರಿನಿಂದ ಬಿಳಿಕೆರೆವರೆಗೆ ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿ 373 ಕಾಮಗಾರಿಗೆ ಭೂಮಿ ನೀಡಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

    ಹಾಸನದಿಂದ ಹೊಳೆನರಸೀಪುರಕ್ಕೆ ಹಾದು ಹೋಗುವ ಹೆದ್ದಾರಿಗೆ ರೈತರ ಜಮೀನನ್ನು ಯಾವುದೇ ಮುನ್ಸೂಚನೆ ನೀಡದೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಚ್ಚಳಿಕೆಗೆ ಬಲವಂತದ ಸಹಿ ಮಾಡಿಸಿಕೊಳ್ಳುತ್ತಿದ್ದಾರೆ. ಸಾವಿರಾರು ಎಕರೆ ಜಮೀನು ರಸ್ತೆ ಪಾಲಾಗುತ್ತಿದ್ದು ಸೂಕ್ತ ಪರಿಹಾರ ನೀಡದಿದ್ದರೆ ಕಾಮಗಾರಿಗೆ ಅಡ್ಡಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಈ ಸಂಬಂಧ ಜಿಲ್ಲಾಡಳಿತ, ಲೋಕಸಭೆ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವ್ಯವಸಾಯವನ್ನೇ ನಂಬಿ ಬದುಕುತ್ತಿರುವ ನೂರಾರು ಕುಟುಂಬಗಳು ಸರ್ಕಾರದ ನಿರ್ಲಕ್ಷೃ ಧೋರಣೆಯಿಂದ ಸಂಕಷ್ಟಕ್ಕೆ ಸಿಲುಕಿವೆ ಎಂದು ಅಳಲು ತೋಡಿಕೊಂಡರು.

    ತಿದ್ದುಪಡಿಗೆ ವಿರೋಧ: ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಈವರೆಗೆ ಕೃಷಿಕನಲ್ಲದ ಯಾವುದೇ ವ್ಯಕ್ತಿ ಜಮೀನು ಖರೀದಿಸಲು ಅವಕಾಶ ಇರಲಿಲ್ಲ. ಇದರಿಂದ ರೈತರು ಯಾವುದೇ ಭಯವಿಲ್ಲದೆ ಬದುಕಿದ್ದರು. ಆದರೆ ಭೂಮಿ ಖರೀದಿಗೆ ಸರ್ವರಿಗೂ ಅವಕಾಶ ನೀಡಿದರೆ ಲ್ಯಾಂಡ್ ಮಾಫಿಯಾ ಹೆಚ್ಚುತ್ತದೆ. ಯಾವ ರಾಜ್ಯದಲ್ಲೂ ಅಸ್ತಿತ್ವದಲ್ಲಿರದ ಕಾನೂನನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಯಾರೂ ಬೇಕಾದರೂ ಭೂಮಿ ಖರೀದಿಸಬಹುದು ಎಂದಾದರೆ ದುಡ್ಡಿದ್ದವರು ಮಾತ್ರ ಜಮೀನು ಹೊಂದಬೇಕಾಗುತ್ತದೆ. ಅವೈಜ್ಞಾನಿಕ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.

    ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು. ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ, ಮೆಹಬೂಬ್ ಪಾಷ, ಲತಾ, ತಿಮ್ಮಣ್ಣ, ಶಿವರಾಮೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts