More

    ಹರೀಶ್ ಬಂಗೇರ ಇಂದು ತಾಯ್ನಡಿಗೆ, ಸೌದಿ ಜೈಲಿನಲ್ಲಿ ಬಂಧಿಯಾಗಿದ್ದ ಕನ್ನಡಿಗ

    ಕುಂದಾಪುರ: ಸೌದಿ ದೊರೆ ಹಾಗೂ ಮೆಕ್ಕಾದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಸೌದಿ ಪೊಲೀಸರಿಂದ ಬಂಧಿಯಾದ ಕುಂದಾಪುರ ಕೋಟೇಶ್ವರದ ಹರೀಶ್ ಬಂಗೇರ (35) ಬಿಡುಗಡೆಯಾಗಿದ್ದು, ಬುಧವಾರ ತಾಯ್ನಡಿಗೆ ಆಗಮಿಸುತ್ತಿದ್ದಾರೆ.

    ಮಂಗಳವಾರ ಸಾಯಂಕಾಲ ಸೌದಿ ಅರೇಬಿಯಾದಿಂದ ವಿಮಾನದಲ್ಲಿ ಹೊರಟಿರುವ ಅವರು, ಬುಧವಾರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಪತಿಯನ್ನು ಸ್ವಾಗತಿಸಲು ಪತ್ನಿ ಸುಮನಾ ಸಂಬಂಧಿಕರ ಜತೆ ಮಂಗಳವಾರ ಬೆಂಗಳೂರಿಗೆ ತೆರಳಿದ್ದಾರೆ. ಕೋವಿಡ್ ಟೆಸ್ಟ್ ಸಹಿತ ಇತರ ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ಅಲ್ಲಿಂದ ಉಡುಪಿಗೆ ಬರಲಿದ್ದಾರೆ.

    ಆಗಿರುವುದೇನು?: ಮದುವೆಯಾಗಿ ನಾಲ್ಕು ವರ್ಷದ ಹೆಣ್ಣು ಮಗುವಿನ ತಂದೆಯಾಗಿರುವ ಹರೀಶ್ ಚಿಕ್ಕದೊಂದು ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಎಸಿ ಮೆಕಾನಿಕ್ ಆಗಿರುವ ಹರೀಶ್ ಮೂರು ವರ್ಷ ಹಿಂದೆ ಸೌದಿಯ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. 2019ರಲ್ಲಿ ಮಂಗಳೂರು ಗೋಲಿಬಾರ್ ಘಟನೆ ಬಗ್ಗೆ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟೊಂದನ್ನು ಶೇರ್ ಮಾಡಿದ್ದರು. ಇದಕ್ಕೆ ಅಲ್ಲಿನ ಯುವಕರಿಂದ ಆಕ್ಷೇಪ ವ್ಯಕ್ತವಾಗಿ, ಹರೀಶ್ ಕ್ಷಮೆ ಯಾಚಿಸುವ ವಿಡಿಯೋ ಹಾಕಿದ್ದರು. ಅಲ್ಲದೆ, ಫೇಸ್‌ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು.
    ಆದರೆ, ಮತ್ತೆ ಹರೀಶ್ ಬಂಗೇರ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದು ಮೆಕ್ಕಾ ಮತ್ತು ಸೌದಿ ದೊರೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಲಾಗಿತ್ತು. ಬಳಿಕ ಕಂಪನಿಯೂ ಅವರನ್ನು ಕೆಲಸದಿಂದ ವಜಾಗೊಳಿಸಿದ್ದು, ಅಲ್ಲಿನ ಪೊಲೀಸರು ಬಂಧಿಸಿದ್ದರು. ವಿವಾದ ಪೋಸ್ಟ್ ಮಾಡಿರುವುದು ನಕಲಿ ಖಾತೆಯಿಂದ ಎಂದು ಪತ್ನಿ ಸುಮನಾ ಉಡುಪಿ ಠಾಣೆಗೆ ದೂರು ನೀಡಿದ್ದರು.

    ಮಾನವ ಹಕ್ಕು ಪ್ರತಿಷ್ಠಾನ ಶ್ರಮ: ಮಾನವ ಹಕ್ಕು ಪ್ರತಿಷ್ಠಾನ ಅಧ್ಯಕ್ಷ ರವೀಂದ್ರನಾಥ ಶ್ಯಾನುಭಾಗ್ ಅವರನ್ನು ಭೇಟಿಯಾಗಿದ್ದ ಸುಮನಾ, ನಕಲಿ ಖಾತೆ ಬಗ್ಗೆ ವಿವರಣೆ ನೀಡಿ ಪತಿಯ ಬಿಡುಗಡೆಗೆ ಸಹಕಾರ ಕೋರಿದ್ದರು. ಪೂರಕ ಮಾಹಿತಿ-ದಾಖಲೆಗಳನ್ನು ಸಂಗ್ರಹಿಸಿದ ಶ್ಯಾನುಭಾಗ್, ಅದನ್ನು ಸೌದಿ ಭಾಷೆಗೆ ಭಾಷಾಂತರಿಸಿ ಭಾರತೀಯ ರಾಯಭಾರಿ ಕಚೇರಿಗೆ ತಲುಪಿಸಿದ್ದರು. ಅಲ್ಲಿಂದ ಸೌದಿ ಪೊಲೀಸರಿಗೆ ದಾಖಲೆ ಸಲ್ಲಿಕೆಯಾಗಿತ್ತು. ತನಿಖೆ ನಡೆದು, ನಕಲಿ ಫೇಸ್‌ಬುಕ್ ಖಾತೆ ತೆರೆದವರ ಪತ್ತೆಯಾಗಿದೆ. ಹರೀಶ್ ಬಂಗೇರ ಬಿಡುಗಡೆಗೆ ಜನಪ್ರತಿನಿಧಿಗಳು, ಹಲವು ಸಂಘಟನೆಗಳು ಸೌದಿಯಲ್ಲಿ ಶ್ರಮಿಸಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts