More

    ಹರಿಹರದಲ್ಲಿ ಷರತ್ತುಬದ್ಧ ವ್ಯಾಪಾರ, ವಹಿವಾಟಿಗೆ ಅನುಮತಿ

    ಹರಿಹರ: ನಗರದಲ್ಲಿ ಮೇ 14ರಿಂದ ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಎಲ್ಲ ಮಾದರಿಯ ಅಂಗಡಿ, ಮುಂಗಟ್ಟುಗಳಲ್ಲಿ ವ್ಯಾಪಾರ- ವಹಿವಾಟು ನಡೆಸಲು ತಾಲೂಕು ಆಡಳಿತ ಷರತ್ತುಬದ್ಧ ಅನುಮತಿ ನೀಡಿದೆ.

    ಚೇಂಬರ್ ಆಫ್ ಕಾಮರ್ಸ್ ಮನವಿ ಮೇರೆಗೆ ಬುಧವಾರ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ್ ರಾಮಚಂದ್ರಪ್ಪ, ಕೇಂದ್ರ, ರಾಜ್ಯ ಸರ್ಕಾರ ಆದೇಶದಂತೆ ಅನುಮತಿ ನೀಡಿದ್ದು, ಸೂಚನೆ ಪಾಲಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ವರ್ತಕರ ಮನವಿ ಮರೆಗೆ ಈವರೆಗೂ ಮಧ್ಯಾಹ್ನ 2ರ ವರೆಗೆ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ, ಮೇ 17ರಂದು ಈ ಲಾಕ್‌ಡೌನ್ ಅವಧಿ ಮುಕ್ತಯವಾಗಲಿದ್ದು, ಅಲ್ಲಿಯ ವರೆಗೂ ಇದೇ ವ್ಯವಸ್ಥೆ ಮುಂದುವರೆಯಲಿದೆ. ನಂತರ ಬರುವ ಮಾರ್ಗಸೂಚಿಯಲ್ಲಿ ಇನಷ್ಟು ವಿನಾಯಿತಿ ಸಿಗಬಹುದು. ಅಲ್ಲಿಯವರೆಗೂ ಕಾಯೋಣ ಎಂದರು.

    ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಶಂಕರ್ ಖಟಾವಕರ್ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರಧಾನಿ ನೀಡುವ ಆದೇಶ ಪಾಲಿಸುತ್ತೇವೆ. ಆದರೆ, ಈಗ ಜಿಲ್ಲಾಧಿಕಾರಿ ನಿರ್ದೇಶನದಂತೆ ಅವಕಾಶ ಕೊಡಿ. ಕರೊನಾ ಹಾಟ್‌ಸ್ಪಾಟ್ ಆಗಿರುವ ದಾವಣಗೆರೆಯಲ್ಲೇ ಅವಕಾಶ ನೀಡಲಾಗಿದೆ. ಆದರೆ, ಯಾವುದೇ ಸೋಂಕಿಲ್ಲದ ನಗರದಲ್ಲಿ ನಿಯಂತ್ರಣ ಹೇರುವುದು ಅನಗತ್ಯ ಎಂದು ಆಗ್ರಹಿಸಿದರು. ಆಗ ಬಂಗಾರ ಹಾಗೂ ಬಟ್ಟೆ ಅಂಗಡಿ ಹೊರತುಪಡಿಸಿ ಉಳಿದ ವಹಿವಾಟಿಗೆ ಅನುಮತಿ ನೀಡುವುದಾಗಿ ತಹಸೀಲ್ದಾರ್ ಹೇಳಿದರು.

    ಆದರೆ ವರ್ತಕರು, ದಾವಣಗೆರೆಯಲ್ಲೇ ಎಲ್ಲ ಬಗೆಯ ವ್ಯಾಪಾರ, ವಹಿವಾಟಿಗೆ ಮುಕ್ತ ಅವಕಾಶವಿದ್ದು, ಇಲ್ಲಿ ನಿರ್ಬಂಧ ಹೇರುವುದು ಸರಿಯಲ್ಲ. ಬಂಗಾರ, ಬಟ್ಟೆ ಅಂಗಡಿಗಳಿಗೂ ಅನುಮತಿ ನೀಡಿ, ಜನರಿಗೆ ಅನುಕೂಲವಾಗುತ್ತದೆ ಎಂದು ಶಾಸಕರಿಗೆ ಒತ್ತಾಯಿಸಿದರು. ಕೊನೆಗೆ ಶಾಸಕ ಎಸ್.ರಾಮಪ್ಪ ಅವರ ಮಾತಿಗೆ ಮಣಿದ ಅಧಿಕಾರಿಗಳು, ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ನಿರ್ಣಯಿಸುವುದಾಗಿ ತಿಳಿಸಿದರು.

    ಸಿಪಿಐ ಶಿವಪ್ರಸಾದ್ ಮಾತನಾಡಿ, ಅಂಗಡಿಗಳಲ್ಲಿ ಪರಸ್ಪರ ಅಂತರ ಕಾಪಾಡಬೇಕು. ಮಾಸ್ಕ್, ಗ್ಲೌಜ್ ಧರಿಸುವುದು ಕಡ್ಡಾಯವಾಗಿದೆ. ಈ ನಿಯಮ ಉಲ್ಲಂಘಿಸಿದ ಅಂಗಡಿಗಳಿಗೆ ನೋಟಿಸ್ ನೀಡಲಾಗುವುದು. ಆಗಲೂ ಜಾಗ್ರತರಾಗದಿದ್ದರೆ ಅಂಗಡಿ ಸೀಜ್ ಮಾಡಲಾಗುವುದು ಎಂದರು.

    ಪೌರಾಯುಕ್ತೆ ಎಸ್.ಲಕ್ಷಿ ್ಮೀ, ಟಿಎಚ್‌ಒ ಡಾ. ಚಂದ್ರಮೋಹನ್, ವರ್ತಕರಾದ ಎಚ್.ಬಸವರಾಜಪ್ಪ, ಟಿ.ಜೆ.ಮುರಿಗೇಶಪ್ಪ, ರೇವಣಸಿದ್ದಪ್ಪ, ಮಾಲತೇಶ್ ಭಂಡಾರಿ, ಪ್ರಭಾಕರ್, ಪ್ರಶಾಂತ್ ರಾಯ್ಕರ್, ಚಂದ್ರಕಾಂತ್, ಬಿ.ಎಂ.ನಾಗರಾಜ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts