More

    ಮಳೆಗಾಲಕ್ಕೂ ಮುನ್ನವೇ ಹರೇಕಳ ಕೃಷಿಭೂಮಿ ಮುಳುಗಡೆ

    ಅನ್ಸಾರ್ ಇನೋಳಿ ಉಳ್ಳಾಲ

    ಮಳೆಗಾಲ ಆರಂಭಕ್ಕೆ ಇನ್ನೂ ತಿಂಗಳು ಬಾಕಿಯಿದೆ. ಆದರೆ ಈಗಾಗಲೇ ಹರೇಕಳದಲ್ಲಿ ಕೃಷಿಭೂಮಿ ಮುಳುಗಿದರೆ, ಉಳಿಯದಲ್ಲಿ ಸೇತುವೆ ತೆರವುಗೊಳಿಸಲಾಗಿದೆ. ಇದೆಲ್ಲವೂ ನಿರ್ಮಾಣ ಹಂತದಲ್ಲಿರುವ ಹರೇಕಳ ಬ್ರಿಡ್ಜ್ ಕಂ ಬ್ಯಾರೇಜ್ ಪ್ರಭಾವ.

    ಕಳೆದೊಂದು ವರ್ಷದಿಂದ ಸೇತುವೆ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಗುತ್ತಿಗೆ ಸಂಸ್ಥೆಯ ಲೆಕ್ಕಾಚಾರ ಪ್ರಕಾರ ಇದೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಆದರೆ ಅದಕ್ಕಿಂತ ಮೊದಲೇ ಸ್ಥಳೀಯ ಕೃಷಿಕರಿಗೆ ತಮ್ಮ ಜಮೀನಿನ ಚಿಂತೆ ಆರಂಭಗೊಂಡಿದೆ. ಕಾಮಗಾರಿ ಹಿನ್ನೆಲೆಯಲ್ಲಿ ನೀರು ನಿಲ್ಲಿಸಿದ ಪರಿಣಾಮವಾಗಿ ಈಗಲೇ ಅಜಿರುಳಿಯ ನದಿ ತಟದಲ್ಲಿರುವ ಸುಮಾರು ಹತ್ತು ಎಕರೆಯಷ್ಟು ಕೃಷಿ ಭೂಮಿಗೆ ನೀರು ನುಗ್ಗಿ ಅದರಲ್ಲಿ ಬೆಳೆದಿದ್ದ ತರಕಾರಿಯೂ ನಾಶವಾಗಿದೆ. ಕೆಲವು ಕಡೆ ಬೆಳೆಯಲಾಗಿದ್ದ ಇತಿಹಾಸ ಪ್ರಸಿದ್ಧ ಹರೇಕಳ ಮೆಣಸೂ ನಾಶವಾಗಿದೆ. ಕೃಷಿಯಿದ್ದ ಜಮೀನಿನಲ್ಲಿ ನೀರು ನಿಂತು ಕೊಳೆತ ವಾಸನೆ ಬರುತ್ತಿದೆ.

    ಈಗಲೇ ಪರಿಸ್ಥಿತಿ ಹೀಗಾದರೆ ಮುಂದಕ್ಕೆ ಇನೋಳಿವರೆಗೂ ಸರಿ ಸುಮಾರು 50 ಎಕರೆಗೂ ಅಧಿಕ ಕೃಷಿಭೂಮಿ ಮುಳುಗಡೆಯಾಗುವ ಆತಂಕ ಎದುರಾಗಿದೆ.
    ಸೇತುವೆ ನಿರ್ಮಾಣ ಸಂದರ್ಭದಲ್ಲೇ ಅಧಿಕಾರಿಗಳು ನದಿತಟದಲ್ಲಿರುವ ಜಮೀನು ಮುಳುಗಡೆಯಾಗುವ ಬಗ್ಗೆ ಲೆಕ್ಕಾಚಾರ ಹಾಕಿ, ಅದಕ್ಕೆ ತಕ್ಕಂತೆ ಕೆಲವು ಕಡೆ ಹಳದಿ, ಕೆಲವು ಕಡೆ ಕೆಂಪು ಕಲ್ಲುಗಳಿನ್ನಿಟ್ಟಿದ್ದಾರೆ ಎನ್ನುತ್ತಾರೆ ಬಲ್ಲವರು. ಆದರೆ ಈ ಬಗ್ಗೆ ಕೃಷಿಕರಿಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ಇದೀಗ ಚಿಂತೆಗೀಡಾಗಿದ್ದಾರೆ.

    ನೀರು ನಿಲ್ಲಿಸಿದ್ದರಿಂದ ಅಜಿರುಳಿಯಾದಲ್ಲಿರುವ ಮೈಕಲ್ ಮೊಂತೆರೊ, ಐವನ್ ಮೊಂತೆರೋ, ಜೋಕಿಂ ಮೋಂತೆರೊ, ಪಾವುಲ್ ಮೊಂತೆರೊ, ಕಿಶೋರ್ ಸಪಲಿಗ, ಸುನಿಲ್ ಮೊಂತೆರೊ, ನರಸಿಂಹ ಪೂಂಜ, ಅರುಂಧತಿ ಪೂಂಜ, ಲೀಲಾವತಿ ಪೂಜಾರಿ, ಶಂಕರ ಸಪಲ್ಯ ಸಹಿತ ಕೆಲವು ಜಮೀನಿಗೆ ನೀರು ನುಗ್ಗಿ ಕೃಷಿಯೂ ನದಿಪಾಲಾಗಿದೆ.

    ಹಲವು ಕಾಲುದಾರಿಗಳೂ ನಿರ್ನಾಮ!: ಸ್ಥಳೀಯರ ಅಭಿಪ್ರಾಯ ಪ್ರಕಾರ ಸೇತುವೆ ಕಾಮಗಾರಿ ಪೂರ್ಣಗೊಂಡರೆ ಹರೇಕಳದಿಂದ ಇನೋಳಿವರೆಗೂ ನೀರು ನಿಂತು ಕೃಷಿಭೂಮಿ ಮುಳುಗಡೆಯಾಗಲಿದೆ. ಇದೇ ವೇಳೆ ಹರೇಕಳದಿಂದ ಪಾವೂರು ಗ್ರಾಮದ ಹಲವು ಊರುಗಳನ್ನು ಸಂಪರ್ಕಿಸುವ ಕಾಲು ದಾರಿಗಳೂ ನಿರ್ನಾಮ ಆಗಲಿದೆ ಎನ್ನುವ ಆತಂಕ ಎದುರಾಗಿದೆ.

    ಉಳಿಯ ಸೇತುವೆ ತೆರವು: ದ್ವೀಪ ಪ್ರದೇಶ ಎನಿಸಿರುವ ಪಾವೂರು ಉಳಿಯಕ್ಕೆ ಸೇತುವೆ ಬೇಕೆನ್ನುವ ಕನಸು ಹಲವು ವರ್ಷಗಳಿಂದ ಈಡೇರದ ಕಾರಣ ಸ್ಥಳೀಯರೇ ಹಣ ಸಂಗ್ರಹಿಸಿ ತಾತ್ಕಾಲಿಕ ಸೇತುವೆ ನಿರ್ಮಿಸುತ್ತಾ ಬಂದಿದ್ದರು. ಮಳೆಗಾಲ ಮುಗಿಯುತ್ತಲೇ ಸೇತುವೆ ನಿರ್ಮಿಸಿ, ಮತ್ತೆ ಮಳೆಗಾಲ ಆರಂಭಗೊಳ್ಳುವಾಗ ತೆರವುಗೊಳಿಸುತ್ತಿದ್ದರು. ಈ ಬಾರಿಯೂ 20 ಲಕ್ಷ ರೂ. ಖರ್ಚು ಮಾಡಿ ಕಬ್ಬಿಣದ ಪೈಪ್ ಬಳಸಿ ಸೇತುವೆ ನಿರ್ಮಿಸಿದ್ದರು. ಆದರೆ ಹರೇಕಳ ಸೇತುವೆ ಕಾಮಗಾರಿಗಾಗಿ ನೀರು ನಿಲ್ಲಿಸಿದರಿಂದ ಉಳಿಯ ಸೇತುವೆ ಮುಳುಗಿದೆ. ಈ ಬಗ್ಗೆ ವಿಜಯವಾಣಿ ಏಪ್ರಿಲ್ 28ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಜಿಲ್ಲಾಡಳಿತವನ್ನು ಎಚ್ಚರಿಸುವ ಪ್ರಯತ್ನ ಮಾಡಿತ್ತು.

    40 ವರ್ಷಗಳಿಂದ ಭತ್ತ, ಮೆಣಸು, ತರಕಾರಿ, ಅಡಕೆ, ತೆಂಗು ಮಡುತ್ತಾ ಬಂದಿದ್ದೇನೆ. ಈವರೆಗೆ ನೀರು ಬಂದಿರಲಿಲ್ಲ. ಈಗ ನೀರು ಬಂದು ಎಲ್ಲವೂ ಹಾಳಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

    ಜೋಕಿಂ ಮೋಂತೆರೊ, ಸ್ಥಳೀಯ ಕೃಷಿಕರು

    ಕಳೆದ 12 ವರ್ಷಗಳಿಂದ ಕೃಷಿಯೊಂದಿಗೆ ಭಾರಿ ಬೇಡಿಕೆಯ ಹರೇಕಳ ಮೆಣಸು ಬೆಳೆಸುತ್ತಿದ್ದೇನೆ. ಡ್ಯಾಂ ನಿರ್ಮಾಣಕ್ಕೆ ಮೊದಲೇ ನೀರು ನಿಂತು ಕೃಷಿ ನಷ್ಟವಾಗಿದ್ದು, ಈಗಲೇ ಹೀಗಾದರೆ ಮುಂದಕ್ಕೆ ಸಂಪೂರ್ಣ ಕೃಷಿ ಜತೆ ಹರೇಕಳ ಮೆಣಸೂ ನಾಶವಾಗಲಿದೆ.

    ಕಿಶೋರ್ ಸಪಲಿಗ, ಕೃಷಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts