More

    ಸಮೃದ್ಧ ಮಳೆ, ಬೆಳೆಗೆ ಜೋಕುಮಾರನ ಹಬ್ಬ: ಗಂಗಾಮತ ಮಹಿಳೆಯರಿಂದ ಹಳ್ಳಿಗಳಲ್ಲಿ ಸಂಚಾರ

    ಹರಪನಹಳ್ಳಿ: ಗಣೇಶ ಚೌತಿ ನಂತರ ಜೋಕುಮಾರ ಸ್ವಾಮಿ ಬಂದಿದ್ದು, ಸಮೃದ್ಧ ಮಳೆ, ಬೆಳೆಗಾಗಿ ಗಂಗಾಮತ ಸಮುದಾಯದ ಮಹಿಳೆಯರು ತಲೆಮೇಲೆ ಜೋಕುಮಾರನ ಹೊತ್ತು ಮನೆ ಮನೆ ತಿರುಗಿ ಹಬ್ಬ ಆಚರಿಸುತ್ತಿದ್ದಾರೆ.

    ಜೋಕುಮಾರ ಗಂಗಾಮತಸ್ಥರ ಆರಾಧ್ಯದೈವ. ಸ್ವಾಮಿಯ ಆರಾಧಿಸಿದರೆ ಮಳೆ, ಬೆಳೆ ಉತ್ತಮವಾಗಿ ಬರುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಕುಂಬಾರರಿಂದ ತಯಾರಿಸಲ್ಪಟ್ಟ ಜೋಕುಮಾರನ ಮಣ್ಣಿನ ಮೂರ್ತಿಗೆ ಗಂಗಾಮತ ಸಮುದಾಯದ ಮಹಿಳೆಯರು ಬೆಣ್ಣೆ, ಕಪ್ಪು, ಹೂವು ಹಾಗೂ ಬೇವಿನ ಎಲೆಗಳಿಂದ ಅಲಂಕರಿಸಿ ಬುಟ್ಟಿಯಲ್ಲಿಟ್ಟು ತಲೆ ಮೇಲೆ ಹೊತ್ತು ಹಳ್ಳಿಗಳಲ್ಲಿ ಏಳು ದಿನಗಳ ಕಾಲ ಕಾಲ್ನಡಿಗೆಯಲ್ಲೇ ಸಂಚರಿಸಿ ಹಬ್ಬ ಆಚರಣೆ ಮಾಡುತ್ತಾರೆ. ಭಕ್ತರು ನೀಡುವ ದವಸ ಧಾನ್ಯಕ್ಕೆ ಪ್ರತಿಯಾಗಿ ಜೋಕುಮಾರನ ಆರಾಧಕರು ಕರಿಮಸಿ ಬೆರೆತ ಬೇವಿನ ಸೊಪ್ಪು, ಜೋಳ ಇತ್ಯಾದಿ ಕೊಡುತ್ತಾರೆ. ಇದನ್ನು ಮಾರನೇ ದಿನ ಬೆಳಗಿನಜಾವ ಜೋಳದ ಪೈರಿಗೆ ಮಜ್ಜಿಗೆಯಲ್ಲಿ ಬೆರೆಸಿಕೊಂಡು ಚರಗ ಹೊಡೆಯುತ್ತಾರೆ. ಇದರಿಂದ ಬೆಳೆ ಸಮೃದ್ಧಿಯಾಗುತ್ತದೆ ಎಂಬ ಪ್ರತೀತಿ ಇದೆ. ಏಳು ದಿನ ಸಾಂಪ್ರದಾಯಿಕ ವಿಧಿ-ವಿಧಾನಗಳು ಮುಗಿದ ನಂತರ, ಪರಿಶಿಷ್ಟರ ಮನೆಯಲ್ಲಿ ಜೋಕುಮಾರನಿಗೆ ಚೂರಿ ಹಾಕುತ್ತಾರೆ.

    ನಂತರ ಬಟ್ಟೆ ತೊಳೆಯುವ ಅಗಸರ ಬಂಡೆಯ ಅಡಿಯಲ್ಲಿ ಆತನ ಶವ ಹೂತು ಬರುತ್ತಾರೆ. ಸಂಗ್ರಹವಾದ ದವಸ-ಧಾನ್ಯಗಳಲ್ಲಿ ಅಡುಗೆ ತಯಾರಿಸಿ ಸಾಮೂಹಿಕ ಭೋಜನ ಮಾಡುವುದರೊಂದಿಗೆ ಹಬ್ಬ ಕೊನೆಗೊಳ್ಳುತ್ತದೆ. ಇದು ಜಾನಪದ ಸಂಸ್ಕೃತಿ ಹಿನ್ನೆಲೆ ಹೊಂದಿದ್ದು, ರೋಗ, ರುಜಿನಗಳು ಬಾರದೆ ರೈತರ ಸಂಕಷ್ಟಗಳನ್ನೂ ದೂರ ಮಾಡುತ್ತವೆ ಎನ್ನುತ್ತಾರೆ ಗಂಗಾಮತ ಸಮುದಾಯದ ರತ್ನಮ್ಮ, ನಾಗರತ್ನಮ್ಮ, ನಂದಿನಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts