More

    ಮಡಸೂರು ಪ್ರಕರಣ ಮುಂದಿಟ್ಟುಕೊಂಡು ಹರತಾಳು ಹಾಲಪ್ಪ ರಾಜಕಾರಣ: ಚೇತನ್‌ರಾಜ್ ಕಣ್ಣೂರು ವಾಗ್ದಾಳಿ

    ಸಾಗರ: ಮಡಸೂರು ಗ್ರಾಮದ ರೈತರನ್ನು ಮುಂದಿಟ್ಟುಕೊಂಡು ಮಾಜಿ ಸಚಿವ ಹರತಾಳು ಹಾಲಪ್ಪ ರಾಜಕಾರಣ ಮಾಡುತ್ತಿದ್ದಾರೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್‌ರಾಜ್ ಕಣ್ಣೂರು ಆರೋಪಿಸಿದರು.

    ಅಧಿಕಾರದಲ್ಲಿದ್ದಾಗ ರೈತರಿಗೆ ಕನಿಷ್ಠ ಸೌಲಭ್ಯ ನೀಡಲಿಲ್ಲ. ರೈತರ ಪರ ಕಾರ್ಯನಿರ್ವಹಿಸಿ ಇಡೀ ರಾಜ್ಯದಲ್ಲಿಯೇ ಮಾದರಿಯಾಗಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಶಾಸಕ ಗೋಪಾಲಕೃಷ್ಣ ಬೇಳೂರು ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ತೀವ್ರ ಖಂಡನೀಯ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
    ಹಿಂದೆ ಹಾಲಪ್ಪ ಶಾಸಕರಾಗಿದ್ದ ಸಂದರ್ಭದಲ್ಲಿ ಮಡಸೂರು ರೈತರು ಸಾಗುವಳಿ ಪತ್ರ ಕೊಡಿಸಿ ಎಂದು ಬಂದಿದ್ದರು. ಆಗ ಹಾಲಪ್ಪ ಬಂದ ರೈತರು ಗೋಪಾಲಕೃಷ್ಣ ಬೇಳೂರು ಕಡೆಯವರು ಎಂದು ಬೈದು ಕಳಿಸಿದ್ದಲ್ಲದೇ ಕೆಲವರ ವಿರುದ್ಧ ಎ್ಐಆರ್ ಸಹ ಹಾಕಿಸಿದ್ದರು. ವಿಧಾನಸಭೆ ಚುನಾವಣೆ ವೇಳೆ ನೀವು ನಮ್ಮನ್ನು ಬೆಂಬಲಿಸಿದರೆ ಸಾಗುವಳಿ ಪತ್ರ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು ಎಂದು ಗಂಭೀರ ಆರೋಪ ಮಾಡಿದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಮಡಸೂರು ಗ್ರಾಮದ 9 ಕುಟುಂಬಗಳಿಗೆ ಕಾಗೋಡು ತಿಮ್ಮಪ್ಪ ದರಖಾಸ್ತು ಅಡಿ ಭೂಮಿ ಮಂಜೂರು ಮಾಡಿದ್ದರು. ಈ ಪೈಕಿ ಏಳು ಜನರು ಸಾಗುವಳಿಪತ್ರ ಪಡೆದಿರಲಿಲ್ಲ. ಕಾಗೋಡು ತಿಮ್ಮಪ್ಪ, ಗೋಪಾಲಕೃಷ್ಣ ಬೇಳೂರು ರೈತರಿಗೆ ಭೂಮಿ ಕೊಡುವ ಕೆಲಸ ಮಾಡಿದ್ದಾರೆಯೆ ವಿನಾ ಕಿತ್ತುಕೊಳ್ಳುವ ಕೆಲಸ ಮಾಡಿಲ್ಲ ಎಂದರು.
    ಹಾಲಪ್ಪ ಶಾಸಕರಾಗಿದ್ದಾಗ ಒಬ್ಬ ರೈತನಿಗೂ ಭೂಹಕ್ಕು ಕೊಟ್ಟಿಲ್ಲ. ಹಾಲಪ್ಪ ಸಾಮಾಜಿಕ ನ್ಯಾಯವನ್ನು ಪರಿಗಣಿಸದೆ ಹಿರಳೇ ಗ್ರಾಮದ 15 ರೈತರ ಹಕ್ಕುಪತ್ರ ವಜಾ ಮಾಡಿದ್ದರು. ನಂತರ ಕಾಗೋಡು ತಿಮ್ಮಪ್ಪ ಮಧ್ಯಪ್ರವೇಶ ಮಾಡಿ ರೈತರ ಜಮೀನು ಉಳಿಸಿ ಕೊಟ್ಟಿದ್ದರು. ಪ್ರಕರಣದಲ್ಲಿ ತಹಸೀಲ್ದಾರ್ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು. ಜೈಲಿಗೆ ಹೋಗಿರುವ ರೈತರಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಇದರಲ್ಲಿ ರಾಜಕೀಯದ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
    ಸೋಮಶೇಖರ ಲ್ಯಾವಿಗೆರೆ, ಸುರೇಶಬಾಬು, ಮಕ್ಬೂಲ್ ಅಹ್ಮದ್, ಗಣಪತಿ ಮಂಡಗಳಲೆ, ಮಹಾಬಲ ಕೌತಿ, ಆನಂದ್ ಭೀಮನೇರಿ, ಮೈಕೆಲ್ ಡಿಸೋಜ, ಡಿ.ದಿನೇಶ್, ಹಾಲಾನಾಯ್ಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts