More

    ಪ್ರೀತಿ, ಸಹಬಾಳ್ವೆ, ಶಾಂತಿ ಸಾರುವ ಶುಭ ಶುಕ್ರವಾರ

    Anthony Swamyಪಿ.ಸಿ.ಅಂತೋಣಿ ಸ್ವಾಮಿ
    ಇಂದಿಗೆ ಎರಡು ಸಾವಿರಕ್ಕಿಂತ ಹೆಚ್ಚಿನ ವರ್ಷಗಳ ಪೂರ್ವದಲ್ಲಿ ಇಸ್ರೇಲಿನ ಯಹೂದಿ ಜನಾಂಗದ ಉನ್ನತ ಕುಲದಲ್ಲಿ ಯೇಸು ಕ್ರಿಸ್ತ ಜನಿಸಿದ. ತೀರಾ ಹೀನಸ್ಥಿತಿಯ ದನಗಳ ಗೋದಲಿಯಲ್ಲಿ ಹುಟ್ಟಿದ ಆತ ಇತರ ಮಕ್ಕಳಿಗಿಂತ ಭಿನ್ನವಾಗಿದ್ದ. ತನ್ನ ಹನ್ನೆರಡನೇ ವಯಸ್ಸಿನಲ್ಲಿ ತಂದೆ-ತಾಯಿ ಮತ್ತು ಮನೆಯ ಯೋಚನೆ ಇಲ್ಲದೆ ಜೆರೂಸಲೇಮ್ ಮಹಾ ದೇವಾಲಯದಲ್ಲಿ ಧರ್ಮಶಾಸ್ತ್ರಜ್ಞರು ಮತ್ತು ಪಂಡಿತರೊಂದಿಗೆ ಧಾರ್ವಿುಕ ಚರ್ಚೆಗಳಲ್ಲಿ ಗಂಭೀರವಾಗಿ ತೊಡಗುತ್ತಿದ್ದ.

    ತನ್ನ ಮೂವತ್ತನೇ ವಯಸ್ಸಿನಲ್ಲಿ ಸಾರ್ವಜನಿಕ ಜೀವನಕ್ಕೆ ಧುಮುಕಿದ ಯೇಸು ಕ್ರಿಸ್ತ ಇಸ್ರೇಲಿನ ಯಹೂದಿಗಳ ಜನಜೀವನವನ್ನು ಸುಧಾರಿಸಲಾರಂಭಿಸಿದ. ದೈವಾಂಶಸಂಭೂತನಾಗಿ, ಬಡವರ, ಕುಷ್ಠರೋಗಿಗಳ, ಅದೃಷ್ಟಹೀನರ, ಕೆಳಸ್ತರದವರ ಹಾಗೂ ಮಹಿಳೆಯರ ಬಗ್ಗೆ ಅಪಾರ ಅನುಕಂಪ ಮತ್ತು ಪ್ರೀತಿ ತೋರುತ್ತಿದ್ದ. ತನ್ನ ಕಾಲದ ಪೌರೋಹಿತಶಾಹಿಯ ಕಂದಾಚಾರ, ಡಂಭಾಚಾರ ಮತ್ತು ಮೂಢನಂಬಿಕೆಗಳನ್ನು ತೀವ್ರವಾಗಿ ಟೀಕಿಸಿದ. ಆತ ಸದಾ ದೀನ, ದುರ್ಬಲ, ಕುಷ್ಠರೋಗಿಗಳ ಜೊತೆಗೇ ಇರುವುದನ್ನು ಮೇಲ್ವರ್ಗದವರು ವಿರೋಧಿಸಿದಾಗ, ‘ವೈದ್ಯನ ಅಗತ್ಯವಿರುವುದು ರೋಗಿಗಳಿಗೆ ಮಾತ್ರ’ ಎಂದವರ ಬಾಯಿ ಮುಚ್ಚಿಸಿದ. ಸಬ್ಬತ್ (ಭಾನುವಾರ)ನಂದು ತಾನು ರೋಗಿಗಳನ್ನು ಗುಣಪಡಿಸುವುದನ್ನು ವಿರೋಧಿಸಿದ ಫರಿಸಾಯರನ್ನು ‘ಮೂಢನಂಬಿಕೆಗಳ ದಾಸರು’ ಎಂದು ಜರೆದ. ವ್ಯಭಿಚಾರದಲ್ಲಿ ತೊಡಗಿದ್ದಳು ಎನ್ನಲಾದ ಅಸಹಾಯಕ ಸ್ತ್ರೀಯನ್ನು ಅಂದಿನ ಕಾನೂನಿನಂತೆ ಕಲ್ಲು ಹೊಡೆಯಬೇಕೆಂದಾಗ, ಯೇಸು ‘ನಿಮ್ಮಲ್ಲಿ ಯಾರೂ ಯಾವ ಪಾಪವನ್ನೂ ಮಾಡಿಲ್ಲವೋ ಅಂಥವರು ಮೊದಲ ಕಲ್ಲನ್ನು ಎಸೆಯಿರಿ’ ಎಂದಾಗ, ನೆರೆದಿದ್ದ ಗಂಡಸರೆಲ್ಲ ಸದ್ದಿಲ್ಲದೆ ಅದೃಶ್ಯರಾದರು.

    ಸದಾ ಪರಲೋಕದ ತನ್ನ ತಂದೆಯನ್ನು ಸ್ಮರಿಸುತ್ತ ಅಂಧರಿಗೆ ದೃಷ್ಟಿಯನ್ನು, ಕಿವುಡು-ಮೂಕರಿಗೆ ಮಾತು, ಶ್ರವಣಶಕ್ತಿಯನ್ನು, ರೋಗಿಗಳಿಗೆ ಆರೋಗ್ಯಭಾಗ್ಯ ಇತ್ಯಾದಿ ಪವಾಡಗಳನ್ನು ಜರುಗಿಸಿ, ತನ್ನ ಜನರ ನಡುವೆ ದೇವತಾಮನುಷ್ಯ ಎನಿಸಿ ಕೊಂಡ. ಅಂದಿನ ಅನಕ್ಷರಸ್ಥ ಜನರಿಗೆ ಮನದಟ್ಟಾಗುವಂತೆ ಒಳ್ಳೆಯ ಸಮಾರಿತ (ಗುಡ್ ಸಮಾರಿಟಾನ್), ದಿ ಪ್ರಾಡಿಗಲ್ ಸನ್, ಬೀಜ ಬಿತ್ತಿದ ಒಕ್ಕಲಿಗ (ದಿ ಸೋಯರ್ ಅಂಡ್ ಸೀಡ್ಸ್), ದಶಕನ್ಯೆಯರು (ಟೆನ್​ವರ್ಜಿನ್ಸ್) ಮುಂತಾದ ಸ್ವಾರಸ್ಯಕರ ಕಥೆಗಳನ್ನು ಹೇಳುತ್ತ ಜನರಲ್ಲಿ ಪರಸ್ಪರ ಪ್ರೀತಿ, ದೈವವಿಶ್ವಾಸ ಹಾಗೂ ದೈವವಾಕ್ಯದ ಬಗ್ಗೆ ನಿಷ್ಠೆ ಮುಂತಾದುವನ್ನು ಆಳವಾಗಿ ಬೇರೂರಿಸಿ, ಯಹೂದಿಗಳು ಮತ್ತು ಶಿಷ್ಯರಿಗೆ ಆಪ್ತನಾದ.

    ಪ್ರತಿ ವರ್ಷದ ಮಾರ್ಚ್/ಏಪ್ರಿಲ್ ಮಾಸಗಳಲ್ಲಿ ಯಹೂದಿಗಳೆಲ್ಲ ಜೆರೂಸಲೇಮಿನ ಮಹಾದೇವಾಲಯದಲ್ಲಿ ಸೇರಿ ತಮ್ಮ ಪೂರ್ವಜರು ಈಜಿಪ್ಟ್​​ ದೊರೆ ಫೇರೋನ ದಾಸ್ಯತ್ವದಿಂದ ಬಿಡುಗಡೆಗೊಂಡ ಸಂದರ್ಭದ ಸ್ಮರಣೆಗಾಗಿ ಈಸ್ಟರ್ ಹಬ್ಬ ಆಚರಿಸುವುದು ವಾಡಿಕೆ. ಆ ಆಚರಣೆಯಲ್ಲಿ ಪಾಲ್ಗೊಳ್ಳಲು ಯೇಸು ಕ್ರಿಸ್ತ ಹಿಂದಿನ ದಿನವಾದ ಗುರುವಾರದಂದು ಆಲಿವ್ ರೆಂಬೆಗಳನ್ನು ಹಿಡಿದ ಜನರ ನಡುವೆ ರಾಜಗಾಂಭೀರ್ಯದಿಂದ ಮೆರವಣಿಗೆಯಲ್ಲಿ ಜೆರೂಸಲೇಮ್ ಪ್ರವೇಶಿಸಿದ. ಅಂದು ರಾತ್ರಿ ದ್ರೋಹಿ ಜೂದಾಸನೂ ಸೇರಿ ತನ್ನ ಶಿಷ್ಯರೆಲ್ಲರ ಕಾಲುಗಳನ್ನು ತೊಳೆದು ವಿನಯ, ವಿಧೇಯತೆ ಮತ್ತು ನಮ್ರತೆಗಳನ್ನು ಮೆರೆದು, ಯೇಸು ಜಗತ್ತಿನ ವಿಶಿಷ್ಟ ಗುರು ಎನಿಸಿಕೊಂಡ. ತರುವಾಯ ಅವರೆಲ್ಲರೊಡನೆ ತನ್ನ ಇಹಲೋಕದ ಕೊನೆಯ ಭೋಜನವನ್ನು ಸೇವಿಸಿದ.

    ಕ್ರಿಸ್ತನ ಈ ಎಲ್ಲ ಸುಧಾರಣಾ ಕಾರ್ಯಗಳು, ಯಹೂದಿಗಳ ಮೇಲೆ ಭಾರಿ ಪ್ರಭಾವ ಹೊಂದಿದ್ದ ಪ್ರಧಾನ ಯಾಜಕರಾದ ಅನ್ನಾಸ್ ಮತ್ತು ಕಾಯಿಫಾಸ್​ರಿಗೆ ನುಂಗಲಾರದ ತುತ್ತಾಗಿ, ಕ್ರಿಸ್ತನ ಮಾತು ಮತ್ತು ಬೋಧನೆಗಳು ಅವರ ಅಸ್ತಿತ್ವವನ್ನೇ ಪ್ರಶ್ನಿಸುವಂತಾಗಿದ್ದವು. ಇದ್ದದ್ದನ್ನು ಇದ್ದ ಹಾಗೆ ಹೇಳಿ ಜನರನ್ನು ಜಾಗೃತಗೊಳಿಸಿದ್ದಕ್ಕಾಗಿ ಯೇಸು ಭಾರಿ ಬೆಲೆ ತೆರಬೇಕಾಯಿತು. ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಯೇಸುವನ್ನು ಮುಗಿಸುವ ಷಡ್ಯಂತ್ರ ಯೋಜಿಸಿ, ಒಂದುವರ್ಗದ ಯಹೂದಿಗಳನ್ನೇ ಕ್ರಿಸ್ತನ ವಿರುದ್ಧ ಪ್ರಚೋದಿಸಿದರು. ಆತನ ಶಿಷ್ಯ ಜೂದಾಸನಿಗೆ ಕ್ರಿಸ್ತನನ್ನು ತೋರಿಸಿಕೊಡುವಂತೆ ಹಣದ ಆಮಿಷವೊಡ್ಡಿ, ಹಿಂದಿನ ಗುರುವಾರದ ರಾತ್ರಿಯೇ ಸೈನಿಕರ ಮೂಲಕ ಯೇಸು ಕ್ರಿಸ್ತನನ್ನು ಬಂಧಿಸಿ, ಮರಣದಂಡನೆ ವಿಧಿಸುವ ಅಧಿಕಾರ ಹೊತ್ತ ಪಿಲಾತನ ಸಮ್ಮುಖದಲ್ಲಿ ಅಪರಾಧಿಯಂತೆ ನಿಲ್ಲಿಸಿ, ಹುರುಳಿಲ್ಲದ ಸುಳ್ಳು ಆಪಾದನೆಗಳನ್ನು ಹೇರಿದರು. ಗಲಿಲೇಯ ಪ್ರಾಂತ್ಯದ ಅರಸ ಹೆರೋದ್ ಮತ್ತು ಪ್ಯಾಲೆಸ್ತೀನ್ ಪ್ರಾಂತ್ಯದ ರಾಜ್ಯಪಾಲ ಪಿಲಾತ ಇಬ್ಬರೂ ಅಂತ್ಯದಲ್ಲಿ ಯೇಸು ಕ್ರಿಸ್ತ ನಿದೋಷಿ ಎಂದು ತೀರ್ಪಿತ್ತರು. ಆದರೆ, ಇದನ್ನು ಜೀರ್ಣಿಸಿಕೊಳ್ಳದಾದ ಪ್ರಧಾನ ಯಾಜಕರು, ‘ಕ್ರಿಸ್ತನನ್ನು ಶಿಲುಬೆಗೇರಿಸಿ, ಶಿಲುಬೆಗೇರಿಸಿ’ ಎಂದು ಜನ ಬೊಬ್ಬಿರಿದು ಕೂಗುವಂತೆ ಮಾಡಿ, ಇದಕ್ಕೆ ಪಿಲಾತ ಸ್ಪಂದಿಸದಿದ್ದರೆ, ಆತನ ವಿರುದ್ಧ ರೋಮ್ ನ ಸೀಸರನಿಗೆ ದೂರು ನೀಡಬೇಕಾಗುವುದು ಎಂದಾಗ ಅನೇಕ ದುಷ್ಕೃತ್ಯಗಳನ್ನು ಎಸಗಿದ್ದ ಪಿಲಾತ ನಿಜಕ್ಕೂ ಹೆದರಿದ. ತನ್ನ ಮನಸ್ಸಾಕ್ಷಿಗೆ ವಿರುದ್ಧವಾಗಿ ನಿರಪರಾಧಿ ಯೇಸುವಿಗೆ ಶಿಲುಬೆಗೇರಿಸುವ ಶಿಕ್ಷೆ ವಿಧಿಸಿ, ಆ ಮಹಾಪಾಪ ತನ್ನನ್ನು ತಟ್ಟದಿರಲೆಂದು ಎಲ್ಲರೆದುರು ನೀರು ತರಿಸಿ ಕೈಗಳನ್ನು ತೊಳೆದುಕೊಂಡ.

    ಬಂಧನದ ನಂತರ ಕೈದಿಯಂತೆ ಸೈನಿಕರ ಕೊರಡೆ ಏಟುಗಳಿಂದ ದೇಹವೆಲ್ಲ ಜರ್ಜರಿತವಾಗಿದ್ದ ಕ್ರಿಸ್ತ ಅತಿಯಾಗಿ ನಿತ್ರಾಣಗೊಂಡಿದ್ದರೂ ಭಾರವಾದ ಶಿಲುಬೆಯನ್ನು ಹೊತ್ತು ಕಪಾಲ ಬೆಟ್ಟವನ್ನು ಹತ್ತತೊಡಗಿದ. ಆತನ ಆ ಕೊನೆ ಪಯಣವನ್ನು ‘ಶಿಲುಬೆ ಹಾದಿ’ ಎಂದು ಕ್ರಿಸ್ತ ಜಗತ್ತು ಕರೆಯುತ್ತ ಪ್ರತಿ ಶುಕ್ರವಾರದಂದು ಆತನ ಚಿತ್ರಗಳ ಎದುರು ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸುತ್ತ ತನ್ನ ಶೋಕವನ್ನು ವ್ಯಕ್ತಪಡಿಸುತ್ತದೆ.

    ಹೀಗೆ, ಕಪಾಲ ಬೆಟ್ಟದ ಶಿಲುಬೆ ಮೇಲೆ ಇಬ್ಬರು ಕಳ್ಳರ ನಡುವೆ ಯಾತನೆಪಡುತ್ತ ತೂಗಾಡುವಾಗಲೂ, ಕ್ರಿಸ್ತ ತನ್ನ ಬಲಪಾರ್ಶ್ವದ ಒಳ್ಳೆಯ ಸ್ವಭಾವದ ಕಳ್ಳನಿಗೆ ತನ್ನೊಡನೆ ನೆಲೆಸುವ ಮೋಕ್ಷಭಾಗ್ಯವನ್ನು ಕರುಣಿಸಿದ; ಕೆಳಗೆ ನಿಂತಿದ್ದ ತನ್ನ ಮಾತೆಗೆ ‘ಇಗೋ ನಿನ್ನ ಪುತ್ರ’ ಎಂದು ತನ್ನ ಶಿಷ್ಯನನ್ನು ಅವರ ಪುತ್ರನಾಗಿಸಿದ. ಕೆಳಗೆ ನಿಂತು ತನ್ನನ್ನು ಪರಿಹಾಸ್ಯಗೈಯುತ್ತಿದ್ದ ಸೈನಿಕರು ಮತ್ತು ಮೇಲ್ವಿಚಾರಕರನ್ನು ಕುರಿತು, ‘ಮನ್ನಿಸಿವರನು ತಂದೆ, ಏನಗೈಯುತ್ತಿರುವೆ ಎಂಬುದನ್ನು ಅರಿಯರಿವರು’ ಎಂದು ಮರಣದಲ್ಲೂ ಮಾನವೀಯತೆ ಮೆರೆದ. ಅಂತ್ಯದಲ್ಲಿ, ‘ನನ್ನ ದೇವನೇ? ಏಕೆ ನನ್ನ ಕೈಬಿಟ್ಟಿದ್ದೀರಿ’ ಎಂದು ಪ್ರಲಾಪಿಸಿ ಕೊನೆಯುಸಿರೆಳೆದ.

    ಈ ಸನ್ನಿವೇಶವನ್ನು ಕವಿ ಮಂಜೇಶ್ವರ ಗೋವಿಂದ ಪೈಯವರು ‘ಮರಣವೃಕ್ಷದೊಳಮೃತ ಫಲ’ ಎಂದು ಕರೆದು ಅದ್ಭುತ ರೂಪಕವನ್ನಾಗಿಸಿದ್ದಾರೆ. ಈ ರೀತಿಯಲ್ಲಿ, ಯೇಸು ಕ್ರಿಸ್ತ ಜಗತ್ತಿನ ಜನರ ನಡುವೆ ಪ್ರೀತಿ, ಸಹಾನುಭೂತಿ, ಸಹಬಾಳ್ವೆ ಮತ್ತು ಶಾಂತಿ ಎಂಬ ಪದಗಳಿಗೆ ಹೊಸ ಭಾಷ್ಯ ಬರೆದು, ಶಾಂತಿದೂತನೆಂದು ಇತಿಹಾಸದಲ್ಲಿ ಅಮರನಾದ. ಜಗತ್ತಿನ ಕ್ರೖೆಸ್ತರೆಲ್ಲರೂ ಪ್ರತಿ ವರ್ಷ, ವಿಭೂತಿ ಬುಧವಾರದಿಂದ ಆರಂಭಿಸಿ ಶುಭ ಶುಕ್ರವಾರ ಮತ್ತು ಈಸ್ಟರ್ ಹಬ್ಬದವರೆಗಿನ ನಲವತ್ತು ದಿನ ತಮ್ಮ ಆರಾಧ್ಯದೈವ ಕ್ರಿಸ್ತನ ಯಾತನೆ ಮತ್ತು ಮರಣದ ನೆನಪಲ್ಲಿ ಮಾಂಸಾಹಾರ ಮತ್ತು ವಿಷಯಾಸಕ್ತಿಯನ್ನು ವರ್ಜಿಸಿ, ದಾನ, ಧರ್ಮ, ಪ್ರಾರ್ಥನೆ ಮತ್ತು ಉಪವಾಸ ಕೈಗೊಳ್ಳುತ್ತ ತಮ್ಮನ್ನು ಶುದ್ಧೀಕರಿಸಿಕೊಳ್ಳುತ್ತಾರೆ.

    ಸದಯಂ, ಹೃದಯಂ ಯಸ್ಯಭಾಷಿತಂ ಸತ್ಯ ಭೂಷಿತಂ |
    ಕಾಯಃ ಪರಹಿತೇ ಯಸ್ಯಕಲಿಸ್ತಸ್ಯ ಕರೋತಿ ಕಿಂ ||

    (ಯಾರ ಮನಸ್ಸು ಕರುಣೆಯಿಂದ ಕೂಡಿದೆಯೋ, ಮಾತು ಸತ್ಯದಿಂದ ಸಿಂಗಾರಗೊಂಡಿದಿಯೋ, ಯಾರ ಶರೀರವು ಇನ್ನೊಬ್ಬರ ಉಪಕಾರಕ್ಕಾಗಿ ಇದೆಯೋ, ಅಂತಹವರನ್ನು ಕಲಿ ಪುರುಷ ಸಹ ಏನು ತಾನೇ ಮಾಡಿಯಾನು?)

    ಬೆಂಗಳೂರು ಜಲಕ್ಷಾಮ; ಕನ್ನಡದಲ್ಲಿಯೇ ಟ್ವೀಟ್​ ಮಾಡಿ ಪರಿಹಾರ ತಿಳಿಸಿದ ಮೆಗಾಸ್ಟಾರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts