More

    ಶಾಂತವೇರಿ, ಕಾಗೋಡು ಸ್ಮಾರಕ ಘೋಷಣೆ

    ಶಿವಮೊಗ್ಗ: ಜಿಲ್ಲೆಯು ಸಮಾಜವಾದದ ತವರೂರಾಗಿದ್ದು ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ಸ್ಮರಣಾರ್ಥ ಸ್ಮಾರಕ ಮತ್ತು ಉಳುವವನೆ ಹೊಲದ ಒಡೆಯ ಹೋರಾಟದ ಸವಿನೆನಪಿಗೆ ಕಾಗೋಡು ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

    ನಗರದ ಡಿಎಆರ್(ನಗರ ಸಶಸ್ತ್ರ ಮೀಸಲು ಪಡೆ) ಪೊಲೀಸ್ ಪರೇಡ್ ಮೈದಾನದಲ್ಲಿ ಶುಕ್ರವಾರ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಜಿಲ್ಲೆಯಲ್ಲಿ ಫುಡ್‌ಪಾರ್ಕ್ ನಿರ್ಮಾಣಕ್ಕೆ 100 ಎಕರೆ ಜಾಗ ಮಂಜೂರಾಗಿದ್ದು ಮುಂದಿನ ಬಜೆಟ್‌ನಲ್ಲಿ ಅನುದಾನ ಕಾದಿರಿಸಲು ಮನವಿ ಮಾಡಿಕೊಳ್ಳಲಾಗಿದೆ ಎಂದರು.
    ಕೈಗಾರಿಕಾ ಬೆಳವಣಿಗೆ, ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಉನ್ನತಮಟ್ಟದ ಸಭೆಗಳನ್ನು ನಡೆಸಿದ್ದು ಶಿವಮೊಗ್ಗ ಫೋಕಸ್ ಹಾಗೂ ಕೈಗಾರಿಕಾ ಮೇಳ ನಡೆಸಲು ಸಿದ್ಧತೆ ನಡೆಸಲಾಗಿದೆ. ಜತೆಗೆ ಉದ್ಯೋಗ ಮೇಳ ಮತ್ತು ಜನಸ್ಪಂದನ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವ ಮೂಲಕ ಜನರ ಜೀವನಮಟ್ಟ ಸುಧಾರಣೆಗೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
    ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಸಮಾಜದ ಶ್ರೇಯೋಭಿವೃದ್ಧಿಯೇ ಸಂವಿಧಾನದ ಅಂತಿಮ ಆಶಯವೆಂದು ಅರಿತು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕಿದೆ. ಭಾರತವನ್ನು ವಿಶ್ವಮಾನ್ಯ ಹಾಗೂ ಬಲಾಢ್ಯ ಗಣರಾಜ್ಯವನ್ನಾಗಿ ರೂಪಿಸುವಲ್ಲಿ ತನು-ಮನ-ಧನಗಳಿಂದ ತ್ಯಾಗ ಮಾಡಿದ, ಬಲಿದಾನ ನೀಡಿದ ನಾಯಕರು, ಅಸಂಖ್ಯಾತ ಯೋಧರು ಹಾಗೂ ದೇಶಾಭಿಮಾನಿಗಳನ್ನು ಸ್ಮರಿಸುವುದು ಮತ್ತು ಅವರು ಆಶಯದಂತೆ ರಾಷ್ಟ್ರವನ್ನು ಅಭ್ಯುದಯದ ಪಥದಲ್ಲಿ ಮುನ್ನಡೆಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಹೇಳಿದರು.
    ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆ ತರಲು ಪ್ರಯತ್ನಿಸಲಾಗುತ್ತಿದೆ. ಸಿಎಸ್‌ಆರ್ ನಿಧಿ ಜತೆಗೆ ಇದೇ ವರ್ಷ 500 ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ. ಶರಾವತಿ ಮುಳುಗಡೆ ಸಂತ್ರಸ್ತರು, ಬಗರ್‌ಹುಕುಂ ಸಾಗುವಳಿದಾರರು ಮತ್ತು ಅರಣ್ಯ ವಾಸಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲೆಯಲ್ಲಿ ಮತ್ತು ಬೆಂಗಳೂರಲ್ಲಿ ಸಭೆ ನಡೆಸಲಾಗಿದೆ. ಶೀಘ್ರವೇ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು ಎಂದರು.
    ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್ ಲೋಖಂಡೆ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts