More

    ತಲೆನೋವು ಕಾಣಿಸಿಕೊಂಡ 16 ವಿದ್ಯಾರ್ಥಿಗಳಿಗೆ ಚಿಕಿತ್ಸೆ

    ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಸಮೀಪದ ಗೊರಸಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಕರೊನಾ ಬಗ್ಗೆ ಮಾಹಿತಿ ತಿಳಿಸುವ ವೇಳೆ 16 ವಿದ್ಯಾರ್ಥಿಗಳಿಗೆ ತಲೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು.


    ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ 146 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬೆಳಗ್ಗೆ ಶಾಲೆಯ ಆವರಣದಲ್ಲಿ ಪ್ರಾರ್ಥನೆ ನಡೆಸಲಾಯಿತು. ಈ ವೇಳೆ ಸರ್ಕಾರದ ಸೂಚನೆಯಂತೆ ವಿದ್ಯಾರ್ಥಿಗಳಿಗೆ ಶಿಕ್ಷಕ ಪ್ರೇಮ್‌ಕುಮಾರ್ ಕರೊನಾದ ಲಕ್ಷಣಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು.

    ಈ ವೇಳೆ ತಲೆನೋವಿನಿಂದ ಮೂವರು ವಿದ್ಯಾರ್ಥಿಗಳು ಕುಸಿದುಬಿದ್ದರು. ಇದರಿಂದ ಭಯಭೀತರಾದ ಆಕಾಶ್, ಯಶೋದಾ, ಮಹೇಶ್ವರಿ, ಪ್ರೇಮ್‌ಕುಮಾರ್, ಮಮತಾ, ನಂದಿನಿ, ಶಿವಮ್ಮ, ಬೇಬಿ, ರಕ್ಷಿತಾ ಸೇರಿದಂತೆ 16 ವಿದ್ಯಾರ್ಥಿಗಳಿಗೂ ತಲೆನೋವು ಕಾಣಿಸಿಕೊಂಡು ಅಸ್ವಸ್ಥರಾದರು.


    ಬಳಿಕ ಶಿಕ್ಷಕರು ಖಾಸಗಿ ವಾಹನದಲ್ಲಿ ಮಕ್ಕಳನ್ನು ಮ.ಬೆಟ್ಟದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ಕೊಡಿಸಿದರು. ಅವರು ಚೇತರಿಸಿಕೊಂಡ ಬಳಿಕ ಶಾಲೆಗೆ ಕರೆದೊಯ್ಯಲಾಯಿತು.


    ‘ಕೆಲ ವಿದ್ಯಾರ್ಥಿಗಳು ಕಳೆದ 2 ದಿನಗಳಿಂದ ಜ್ವರ ಹಾಗೂ ತಲೆನೋವಿನಿಂದ ಬಳಲುತ್ತಿದ್ದು, ಮನೆಯಲ್ಲಿ ತಿಂಡಿ ತಿಂದಿರಲಿಲ್ಲ. ಪರಿಣಾಮ ತಲೆನೋವು ಕಾಣಿಸಿಕೊಂಡು ಅಸ್ವಸ್ಥರಾದರು. ಇದರಿಂದ ಭಯಗೊಂಡ ಇನ್ನಿತರ ವಿದ್ಯಾರ್ಥಿಗಳಿಗೂ ತಲೆನೋವು ಕಾಣಿಸಿಕೊಂಡಿದೆಯಷ್ಟೇ. ಆದರೆ ಶಾಲೆಯಲ್ಲಿ ಯಾವುದೇ ಆಹಾರ ಅಥವಾ ಹಾಲು ನೀಡಿಲ್ಲ ಎಂದು ಶಿಕ್ಷಕರು ವಿಜಯವಾಣಿಗೆ ತಿಳಿಸಿದರು.


    ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿಗಳನ್ನು ಪರೀಕ್ಷಿಸಿದ ವೇಳೆ ಕೆಲವರಿಗೆ ಜ್ವರ ಹಾಗೂ ತಲೆನೋವು ಇರುವುದು ಕಂಡು ಬಂದಿದ್ದು, ಅಗತ್ಯ ಚಿಕಿತ್ಸೆ ನೀಡಲಾಗಿದೆ. ಅಲ್ಲದೆ ಮಲೇರಿಯಾದ ರೋಗ ಲಕ್ಷಣದ ಹಿನ್ನೆಲೆ ವಿದ್ಯಾರ್ಥಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದು, ಪರೀಕ್ಷೆ ನಡೆಸಲಾಗುತ್ತದೆ. ಸಾಮಾನ್ಯವಾಗಿ ಬೇಸಿಗೆ ವೇಳೆ ಕುಡಿಯುವ ನೀರಿನಿಂದಲೂ ಈ ರೀತಿಯ ಸಮಸ್ಯೆ ಉಲ್ಬಣಿಸಬಹುದು. ಹೀಗಾಗಿ ಬಿಸಿನೀರು ಕುಡಿಯುವಂತೆ ಸೂಚಿಸಲಾಗಿದೆ. ಡಾ.ಮುಕುಂದ, ವೈದ್ಯಾಧಿಕಾರಿ, ಮ.ಬೆಟ್ಟ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts