More

    ಹಂಪಿ ಸ್ಮಾರಕಗಳಿಗೆ ಧಕ್ಕೆ ಭೀತಿ, ಡಬಲ್ ಡೆಕ್ಕರ್ ಬಸ್ ಆರಂಭಕ್ಕೆ ಅಪಸ್ವರ

    ಹೊಸಪೇಟೆ: ಪ್ರವಾಸಿಗರನ್ನು ಸೆಳೆಯಲು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ವಿಶ್ವ ಪ್ರಸಿದ್ಧ ಹಂಪಿಯಲ್ಲಿ ಡಬಲ್ ಡೆಕ್ಟರ್ ಬಸ್ ಓಡಿಸಲು ಚಿಂತನೆ ನಡೆಸಿದ್ದು, ಸರ್ವೇಯೂ ಕೈಗೊಂಡಿದೆ. ಆದರೆ, ಸಮೀಕ್ಷೆ ವರದಿ ಅಧಿಕಾರಿಗಳ ಕೈ ಸೇರುವ ಮೊದಲೇ ಸ್ಮಾರಕ ಪ್ರಿಯರು, ಗೈಡ್ಸ್‌ಗಳಿಂದ ಅಪಸ್ವರ ಕೇಳಿಬಂದಿದೆ.

    ಈಗಾಗಲೇ ಇರುವ ಕೆಎಸ್‌ಟಿಡಿಸಿ ಬಸ್ ಹಂಪಿಯ ಎಲ್ಲೆಡೆ ಸಂಚರಿಸಲು ಸೂಕ್ತವಾಗಿದ್ದರೂ ಪ್ರವಾಸಿಗರ ಕೊರತೆ ಎದುರಿಸುತ್ತಿದೆ. ಆರು ತಿಂಗಳಿಂದ ಹಂಪಿಯತ್ತ ಪ್ರವಾಸಿಗರು ಸುಳಿಯುತ್ತಿಲ್ಲ. ಹೀಗಿರುವಾಗ ಡಬಲ್ ಡೆಕ್ಕರ್ ಬಸ್ ಅಗತ್ಯವೆ ಎಂಬ ಪ್ರಶ್ನೆ ಎದುರಾಗಿದೆ. ಶ್ರೀಕೃಷ್ಣ ದೇವಸ್ಥಾನ ಹಾಗೂ ವಿಜಯವಿಠಲ ದೇವಸ್ಥಾನ ಮಾರ್ಗದಲ್ಲಿ ರಸ್ತೆಗೆ ಅಡ್ಡಲಾಗಿ ಐತಿಹಾಸಿಕ ಗೋಪುರಗಳಿದ್ದು, ಭಾರಿ ವಾಹನಗಳು ಸಂಚರಿಸಲ್ಲ. ಈ ಹಿಂದೆ ಭಾರಿ ವಾಹನಗಳು ಓಡಾಡಿದ್ದರಿಂದ ಸ್ಮಾರಕಗಳು ಭಗ್ನಗೊಂಡಿದ್ದವು. ಇದೇ ಕಾರಣಕ್ಕಾಗಿ ಭಾರತೀಯ ಪುರಾತತ್ವ ಇಲಾಖೆ ಹಂಪಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದೆ. ಇದರ ನಡುವೆಯೆ ಡಬಲ್ ಡೆಕ್ಕರ್ ಬಸ್ ಹಂಪಿ ರಸ್ತೆಗಿಳಿಸುವುದು ಎಷ್ಟು ಸರಿ?. ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆ, ಪ್ರವಾಸೋದ್ಯಮ, ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ನಡುವೆ ಸಂವಹನ ಕೊರತೆಯಿಂದ ಪ್ರವಾಸಿಗರಿಗೆ ಮೂಲ ಸೌಲಭ್ಯ ದೊರೆಯುತ್ತಿಲ್ಲ. ಅಗತ್ಯ ಸೌಕರ್ಯ ಕಲ್ಪಿಸುವ ಬದಲಿಗೆ ಜನರ ಹಣ ಅನಗತ್ಯ ಯೋಜನೆಗಳಿಗೆ ಖರ್ಚು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

    ಹಂಪಿಯಲ್ಲೂ ಡಬಲ್ ಡೆಕ್ಕರ್ ಬಸ್ ಓಡಿಸುವ ಚಿಂತನೆ ನಡೆಸಿದ್ದೇವೆ. ಈವರೆಗೆ ಯಾವುದೂ ಅಂತಿಮವಾಗಿಲ್ಲ. ಬಸ್ ಸಂಚಾರದ ಮಾರ್ಗ, ಸ್ಮಾರಕ ಮತ್ತು ಪ್ರಯಾಣಿಕರ ಸುರಕ್ಷಿತೆ ಕುರಿತು ಸರ್ವೇ ನಡೆಸಲಾಗುತ್ತಿದೆ. ವರದಿ ಆಧರಿಸಿ ತೀರ್ಮಾನ ಕೈಗೊಳ್ಳಲಾಗುವುದು.
    | ಕುಮಾರ ಪುಷ್ಕರ್ ಎಂಡಿ, ಕೆಎಸ್‌ಟಿಡಿಸಿ.

    ಡಬಲ್ ಡೆಕ್ಕರ್ ಬಸ್‌ಗಳಿಂದ ಸ್ಮಾರಕಗಳಿಗೆ ಧಕ್ಕೆಯಾಗಲಿದೆ. ರಾಣಿ ಸ್ನಾನಗೃಹ ಮತ್ತು ನೆಲಸ್ತರದ ದೇವಾಲಯದ ಬಳಿ ಭಾರಿ ವಾಹನಗಳು ತೆರಳದಂತೆ ರಸ್ತೆಗೆ ಅಡ್ಡಪಟ್ಟಿ ಹಾಕಲಾಗಿದೆ. ಕುಡಿವ ನೀರು, ವಸತಿ, ಬ್ಯಾಟರಿ ವಾಹನ ಸೇರಿ ಮೂಲ ಸೌಲಭ್ಯ ಕಲ್ಪಿಸಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಲಕ್ಷಾಂತರ ಮೊತ್ತದ ಮೊಬೈಲ್ ಟಾಯ್ಲೆಟ್‌ಗಳು ಮೂಲೆಗುಂಪಾಗಿವೆ. ಅಗತ್ಯ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಮೊದಲು ಆದ್ಯತೆ ನೀಡಬೇಕು.
    | ವಿಶ್ವನಾಥ ಮಾಳಗಿ ಅಧ್ಯಕ್ಷ, ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ, ಕಮಲಾಪುರ.

    ಈಗಿರುವ ಕೆಎಸ್‌ಟಿಡಿಸಿ ಬಸ್‌ಗಳ ಸಂಚಾರದಿಂದ ಯಾವುದೇ ಸ್ಮಾರಕಗಳಿಗೆ ಧಕ್ಕೆ ಇಲ್ಲ. ಸ್ಮಾರಕಗಳ ವೀಕ್ಷಣೆಗೆ ತೆರಳುವ ಮಾರ್ಗ ಕೆಲವೆಡೆ ಕಿರಿದಾಗಿದೆ. ರಸ್ತೆಗೆ ಅಡ್ಡಲಾಗಿ ಕಮಾನುಗಳಿವೆ. ಎತ್ತರದ ವಾಹನಗಳ ಸಂಚಾರ ಸೂಕ್ತವಲ್ಲ.
    | ಗೋಪಾಲ ಮಾರ್ಗದರ್ಶಿ, ಹಂಪಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts