More

    ಹಂಪನಕಟ್ಟೆಯಲ್ಲಿ ಪುರಾತನ ‘ಅಪ್ಪಣ್ಣನ ಬಾವಿ’ ಪತ್ತೆ!

    ಮಂಗಳೂರು: ನೂರಾರು ವರ್ಷಗಳ ಹಿಂದೆ ಉಪಯೋಗಿಸಲ್ಪಡುತ್ತಿದ್ದ ಪುರಾತನ ಬಾವಿಯೊಂದು ನಗರ ಮಧ್ಯೆ ಹಂಪನಕಟ್ಟೆಯ ಸಿಗ್ನಲ್ ಬಳಿ ಇರುವ ರಿಕ್ಷಾ ಪಾರ್ಕಿಂಗ್ ಬಳಿ ಪತ್ತೆಯಾಗಿದ್ದು, ಅಭಿವೃದ್ಧಿಪಡಿಸುವ ನಿರೀಕ್ಷೆ ಇದೆ.
    100 ಅಡಿಗೂ ಹೆಚ್ಚಿನ ಆಳವಿರುವ ಬಾವಿ ಸುಸ್ಥಿತಿಯಲ್ಲಿದ್ದು, ಅದರ ಮೇಲೆ ಕಾಂಕ್ರೀಟ್ ಸ್ಲಾಬ್ ಅಳವಡಿಸಲಾಗಿತ್ತು. ಇಲ್ಲಿ ಕೆಲವು ದಿನಗಳಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿ ಜಂಕ್ಷನ್ ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ರಸ್ತೆ ಅಗೆಯುವ ಕಾಮಗಾರಿ ನಡೆಸುತ್ತಿದ್ದಾಗ ಕಾಂಕ್ರೀಟ್ ಸ್ಲಾೃಬ್ ಕಾಣಿಸಿದ್ದು, ಮೇಲೆತ್ತಿ ನೋಡಿದಾಗ ಆಳವಾದ ಬಾವಿ ಕಂಡುಬಂದಿದೆ.

    ಅಪ್ಪಣ್ಣನ ಬಾವಿ?: ನೂರಾರು ವರ್ಷಗಳ ಹಿಂದೆ ಮಂಗಳೂರಿಗೆ ದೂರದಿಂದ ಬಂದವರಿಗೆ ಬಾಯಾರಿಕೆಗಾಗಿ ಸ್ಥಳೀಯರಾದ ಅಪ್ಪಣ್ಣ ಅವರು ಈಗಿನ ಹಂಪನಕಟ್ಟೆಯ ಅಶ್ವತ್ಥ ಮರದ ಕಟ್ಟೆಯ ಮೇಲೆ ಕುಳಿತು ನೀರು ಕೊಡುತ್ತಿದ್ದರು. ಅಪ್ಪಣ್ಣ ಅವರ ಕಟ್ಟೆಯಿಂದಾಗಿಯೇ ಹಂಪನಕಟ್ಟೆ ಹೆಸರು ಬಂದಿದೆ. ಈ ಬಾವಿಯೂ ‘ಅಪ್ಪಣ್ಣನ ಬಾವಿ’ ಎಂದೇ ಪ್ರಸಿದ್ಧಿ ಪಡೆದಿತ್ತು ಎನ್ನುತ್ತಾರೆ ಸ್ಥಳೀಯರು.
    ಈ ಬಾವಿಯ ನೀರನ್ನು ಈ ಹಿಂದೆ ಸುತ್ತಮುತ್ತಲಿನ ಜನರು ಉಪಯೋಗಿಸುತ್ತಿದ್ದರು. 1962ರ ಸಮಯದಲ್ಲಿ ನಗರದಲ್ಲಿ ಸ್ಥಳೀಯಾಡಳಿತದಿಂದ ನೀರು ಸರಬರಾಜು ಆರಂಭವಾಗಿತ್ತು. ಆ ಬಳಿಕ ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ಈ ಬಾವಿಯನ್ನು ಮುಚ್ಚಲು ನಿರ್ಧರಿಸಲಾಗಿತ್ತು. ಆಗ ಸ್ಥಳೀಯ ವರ್ತಕರು, ನಿವಾಸಿಗಳು ಆಕ್ಷೇಪಿಸಿದ್ದರಿಂದ ಬಾವಿ ಮುಚ್ಚುವ ಬದಲು ಕಾಂಕ್ರೀಟ್ ಸ್ಲಾಬ್ ಹಾಕಿ ಅದರ ಮೇಲೆ ಡಾಂಬರು ಹಾಕಲಾಗಿತ್ತು.

    ಮೇಯರ್, ಶಾಸಕರ ಭೇಟಿ: ಬಾವಿ ಪತ್ತೆಯಾದ ಜಾಗಕ್ಕೆ ಶುಕ್ರವಾರ ಶಾಸಕ ವೇದವ್ಯಾಸ ಕಾಮತ್ ಹಾಗೂ ಮನಪಾ ಮೇಯರ್ ದಿವಾಕರ ಪಾಂಡೇಶ್ವರ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾವಿಯನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಚರ್ಚೆ ನಡೆದಿದೆ. ಸದ್ಯ ಈ ಭಾಗದ ಸ್ಮಾರ್ಟ್‌ಸಿಟಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

    ಹಿಂದೆ ನಮ್ಮ ಮಳಿಗೆಯ ಎದುರು ಇದ್ದ ಈ ಬಾವಿಯ ನೀರನ್ನು ಸ್ಥಳೀಯರು ಬಳಸುತ್ತಿದ್ದೆವು. ರಸ್ತೆ ಮಾಡುವ ಸಂದರ್ಭ ನನ್ನ ತಂದೆ ದಿ.ಪಾಲ್ಕೆ ಬಾಬುರಾಯ ಆಚಾರ್ಯ ಅವರು ಬಾವಿ ಮೇಲೆ ಸ್ಲಾೃಬ್ ಹಾಕಿಸಿದ್ದರು. ಈಗಲೂ ಈ ಬಾವಿಯ ನೀರು ಉತ್ತಮವಾಗಿದ್ದು, ಬಾವಿಯನ್ನು ಸಂರಕ್ಷಿಸಬೇಕು.
    – ಧನಂಜಯ ಪಾಲ್ಕೆ, ಕೆನರಾ ಜುವೆಲರ್ಸ್ ಮಾಲೀಕ, ಹಂಪನಕಟ್ಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts