More

    ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ, ಸವಾರರಿಗೆ ಧೂಳಾಭಿಷೇಕ

    ನಾಲತವಾಡ: ಶಿರಾಡೋಣ ಲಿಂಗಸಗೂರ ರಸ್ತೆ ಕಾಮಗಾರಿ ಪಟ್ಟಣದ ಪ್ರವೇಶದಲ್ಲಿ ಅರ್ಧಕ್ಕೆ ನಿಂತ ಪರಿಣಾಮ ವಾಹನ ಸವಾರರು ಸೇರಿದಂತೆ ಸಾರ್ವಜನಿಕರು ನಿತ್ಯ ಸಂಕಷ್ಟ ಅನುಭವಿಸಬೇಕಿದೆ.

    ಲೋಕೋಪಯೋಗಿ ಇಲಾಖೆಯಡಿ ಸುಮಾರು 9 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ ಕೈಗೊಂಡು 2ವರ್ಷ ಕಳೆದರೂ ಎಪಿಎಂಸಿ ಬಳಿ ಕೇವಲ 100ಮೀಟರ್ ರಸ್ತೆ ಪೂರ್ಣಗೊಳಿಸದ ಅಧಿಕಾರಿಗಳ ಕ್ರಮದಿಂದ ನಿತ್ಯ ಸಂಚರಿಸುವ ನೂರಾರು ವಾಹನ ಸವಾರರು ಧೂಳಾಭಿಷೇಕ ಮಾಡಿಕೊಳ್ಳುವಂತಾಗಿದೆ.

    ಮುದ್ದೇಬಿಹಾಳ ಮೂಲಕ ಹಿರೇಮುರಾಳ ಮಧ್ಯದಲ್ಲಿ ಆರಂಭಗೊಂಡ ರಸ್ತೆಯನ್ನು ನಾಲತವಾಡ ಪಟ್ಟಣದ ತಾಳಿಕೋಟಿ ವೃತ್ತದ ಬಳಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಅರ್ಧ ನಿಂತ ರಸ್ತೆಯಲ್ಲಿ ತಗ್ಗು ದಿನ್ನೆಗಳು ಸೃಷ್ಟಿಗೊಂಡು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಸಾರಿಗೆ, ಆರೋಗ್ಯ ಇಲಾಖೆಯ 108 ವಾಹನ, ಬೈಕ್ ಸವಾರರು ಹಾಗೂ ಕಬ್ಬಿನ ಸಾಗಣೆ ವಾಹನಗಳು ಜೋಲಿ ಹೊಡೆದುಕೊಂಡು ಸಾಗುತ್ತಿದ್ದು, ಜೀವ ಭಯ ಹುಟ್ಟಿಸಿದೆ. ಅಧಿಕಾರಿಗಳು ರಸ್ತೆ ಪೂರ್ಣಗೊಳಿಸಲು ವಾರದೊಳಗೆ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಸುಮಾರು ತಿಂಗಳಿಂದ ಇಲಾಖೆಯ ಅಧಿಕಾರಿಗಳು ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ ಕೈಗೊಳ್ಳುತ್ತಿಲ್ಲ. ಇದು ಗುತ್ತಿಗೆದಾರರ ತಪ್ಪೋ ಇಲಾಖೆಯ ತಪ್ಪೋ ಎಂಬ ಸಂಶಯವೂ ಜನರಲ್ಲಿ ಮೂಡಿದೆ. ಕೂಡಲೇ ರಸ್ತೆ ದುರಸ್ತಿಗೆ ಹಿಡಿದ ಗ್ರಹಣ ಬಿಡಿಸಬೇಕಿದೆ. ಕೇವಲ 100 ಮೀಟರ್ ರಸ್ತೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ಇಲಾಖೆಯವರ ಬೇಜವಾಬ್ದಾರಿ ಸರಿಯಲ್ಲ. ಶೀಘ್ರ ಅಧಿಕಾರಿಗಳು ಸಮಸ್ಯೆಗೆ ಮುಕ್ತಿ ಹಾಡಬೇಕು ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಗುಂಡಣ್ಣ ಚಲವಾದಿ ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts