More

    ಅರ್ಧ ಹೆಲ್ಮೆಟ್ ಜೀವಕ್ಕೆ ಕುತ್ತು: ಶೇ.44 ಬೈಕ್ ಸವಾರರಿಂದ ಪೂರ್ಣ ಶಿರಸ್ತ್ರಾಣ ಬಳಕೆ

    | ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

    ರಾಜಧಾನಿಯಲ್ಲಿರುವ ದ್ವಿಚಕ್ರವಾಹನ ಸವಾರರ ಪೈಕಿ ಶೇ.44 ಮಂದಿ ಮಾತ್ರ ಪೂರ್ತಿ ತಲೆ, ಮುಖ ರಕ್ಷಣೆ ಆಗುವಂತಹ ಹೆಲ್ಮೆಟ್ ಧರಿಸುತ್ತಾರೆಂಬ ಸಂಗತಿ ಬೆಳಕಿಗೆ ಬಂದಿದೆ. ಇನ್ನು ಶೇ.26.75 ಮಂದಿ ಅರ್ಧ ಹೆಲ್ಮೆಟ್ ಧರಿಸಿದರೆ ಒಟ್ಟಾರೆ ಸವಾರರಲ್ಲಿ ಶೇ.92.61 ಮಂದಿ ಜೀವರಕ್ಷಣೆಗೆ ಆದ್ಯತೆ ನೀಡದೆ ಬೇಕಾಬಿಟ್ಟಿ ಶಿರಸ್ತ್ರಾಣಗಳನ್ನು ಬಳಸಿ ವಾಹನ ಚಲಾಯಿಸುತ್ತಾರೆಂದು ನಗರ ಸಂಚಾರ ಪೊಲೀಸರು ಮತ್ತು ನಿಮ್ಹಾನ್ಸ್ ಸಹಯೋಗದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

    ಬೆಂಗಳೂರಲ್ಲಿ ನಾಲ್ಕು ಚಕ್ರ ವಾಹನಗಳಿಗೆ ಹೋಲಿಸಿದರೆ ದ್ವಿಚಕ್ರ ವಾಹನಗಳ (60 ಲಕ್ಷ ) ಸಂಖ್ಯೆ ಹೆಚ್ಚು. ಸವಾರರಿಗೆ ಹೆಲ್ಮೆಟ್ ಬಳಕೆ ಕಡ್ಡಾಯಗೊಳಿಸಲಾಗಿದೆ. ಕಾನೂನು ಪಾಲನೆ ಮಾಡುವರ ಸಂಖ್ಯೆ ಕಡಿಮೆಯಿದೆ. ಸಂಚಾರ ಪೊಲೀಸರನ್ನು ನೋಡಿದಾಗಷ್ಟೇ ಶಿರಸ್ತ್ರಾಣ ಧರಿಸುತ್ತಾರೆ. ಇಲ್ಲದಿದ್ದರೆ ತೊಡೆಯ ಮೇಲೆ ಅಥವಾ ಕೈಗಳ ಮಣಿಕಟ್ಟಿಗೆ ನೇತು ಹಾಕಿಕೊಂಡಿರುತ್ತಾರೆ.

    ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಾವು-ನೋವಿಗೆ ಒಳಗಾಗುವವರು ದ್ವಿಚಕ್ರ ವಾಹನ ಸವಾರರು. ಹೆಲ್ಮೆಟ್ ಬಳಕೆಯಿಂದ ತಲೆಗೆ ಆಗುವ ಅಪಾಯಕಾರಿ ಗಾಯಗಳ ತೀವ್ರತೆಯನ್ನು ಶೇ.69 ಮತ್ತು ಶೇ.42 ಜೀವಹಾನಿ ಕಡಿಮೆ ಮಾಡಬಹುದಾಗಿದೆ. ಪ್ರತಿ ಗಂಟೆಗೆ ದ್ವಿಚಕ್ರ ವಾಹನಗಳು ಸರಾಸರಿ 55 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತವೆ. ಅಂದರೆ ಸೆಕೆಂಡ್​ಗೆ 49 ಅಡಿ ಕ್ರಮಿಸುತ್ತಾರೆ ಎಂದರ್ಥ.

    ಅಪಘಾತದ ಸಮಯದಲ್ಲಿ, ಹೆಲ್ಮೆಟ್ ಧರಿಸಿದವರಿಗಿಂತ ಹೆಲ್ಮೆಟ್ ರಹಿತ ಸವಾರರ ಮಿದುಳಿಗೆ ಆಗುವ ಗಾಯಗಳ ಪ್ರಮಾಣ 3 ಪಟ್ಟು ಹೆಚ್ಚು. ಹೆಲ್ಮೆಟ್ ಬಳಸಿದರೆ ಬುರುಡೆ ಮೂಳೆಗಳು ಮಿದುಳನ್ನು ಹೊಕ್ಕು ಹಾನಿ ಮಾಡುವುದನ್ನು ತಪ್ಪಿಸಬಹುದು. ಅದರಲ್ಲಿಯೂ ಐಎಸ್​ಐ ಮುದ್ರೆ ಹೆಲ್ಮೆಟ್ ಉತ್ತಮ. ಇದಲ್ಲದೆ, ಅಪಘಾತದಲ್ಲಿ ಮಿದುಳಿಗಾಗುವ ಗಾಯಗಳ ಚಿಕಿತ್ಸೆ ವೆಚ್ಚ ದುಬಾರಿ. ಆಜೀವಪರ್ಯಂತ ಅಂಗವೈಕಲ್ಯಕ್ಕೂ ಕಾರಣವಾಗಬಹುದು. ಹೆಲ್ಮೆಟ್ ಧರಿಸುವುದರಿಂದ ಮಿದುಳಿಗೆ ಆಗುವ ಗಾಯಗಳ ತೀವ್ರತೆಯನ್ನು ತಡೆಗಟ್ಟಬಹುದು. ಸವಾರರು ದ್ವಿಚಕ್ರ ವಾಹನ ಚಲಾಯಿಸುವಾಗ ಹೆಚ್ಚು ಜಾಗೃತಿ ವಹಿಸಬೇಕೆಂದು ಸಂಚಾರ ಪೊಲೀಸರ ಸಲಹೆಯಾಗಿದೆ.

    337 ಗಂಟೆ ಅಧ್ಯಯನ: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. ನಗರದ 15 ಸ್ಥಳಗಳಲ್ಲಿ ಅಂದಾಜು 95 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. 225 ದಿನಗಳಲ್ಲಿ ವಿವಿಧ ಸಮಯದಲ್ಲಿ 90 ನಿಮಿಷಗಳ ಕಾಲ ಅಧ್ಯಯನ ನಡೆಸಲಾಗಿದ್ದು, ಒಟ್ಟು 337 ಗಂಟೆ ಸಮೀಕ್ಷೆ ನಡೆಸಲಾಗಿದೆ.

    ಕಾನೂನು ಏನು ಹೇಳುತ್ತದೆ?: ಭಾರತೀಯ ಮೋಟಾರು ವಾಹನ ಕಾಯ್ದೆ 1988ರ ಕಲಂ 129, ಕರ್ನಾಟಕ ಮೋಟಾರು ವೆಹಿಕಲ್ ರೂಲ್ಸ್ 1989 ನಿಯಮ 23(1)ರಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಉಲ್ಲೇಖಿ ಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿ, ರಸ್ತೆ ಯಲ್ಲಿ ಮೋಟಾರು ಸೈಕಲ್ ಚಾಲನೆ ಮಾಡುವಾಗ ಅಥವಾ ಹಿಂಬದಿ ಸವಾರಿ ವೇಳೆ (4 ವರ್ಷ ಮೇಲ್ಪಟ್ಟ)ವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.

    ಹೆಲ್ಮೆಟ್ ಖರೀದಿ ಮುನ್ನ ಗಮನಿಸಿ

    • ಐಎಸ್​ಐ ಮುದ್ರೆ, ಕಂಪನಿ ಹೆಸರು, ಗಾತ್ರ ಪರೀಕ್ಷೆ ಮಾಡಿ, ತಲೆಗೆ ಹೆಲ್ಮೆಟ್ ಧರಿಸಿದಾಗ ಆರಾಮದಾಯಕ ಆಗಿರಲಿ
    • ಅಧಿಕೃತ ಡೀಲರ್ ಬಳಿ ಖರೀದಿಸಿ, ಬಿಲ್ ಜೋಪಾನ ಮಾಡಿ, ಹೆಲ್ಮೆಟ್ ಧರಿಸಿದಾಗ ದೃಷ್ಟಿಗೆ ತಡೆ ಒಡ್ಡುವಂತಿರಬಾರದು
    • ಹೆಲ್ಮೆಟ್ ಬಳಸುವಾಗ ಶ್ರವಣಶಕ್ತಿಗೆ ಅಡ್ಡಿ ಆಗಬಾರದು, ಹಗುರವಾಗಿರಬೇಕು, ಆಯಾಸ ಉಂಟು ಮಾಡಬಾರದು
    • ಹೆಲ್ಮೆಟ್ ಬಳಕೆಯಿಂದ ಚರ್ಮ ರೋಗ, ಕುತ್ತಿಗೆಗೆ ಗಾಯ ಆಗಬಾರದು
    • ಹೆಲ್ಮೆಟ್ ಹಿಂಭಾಗ 3 ಮಾದರಿ ರೆಟ್ರೋ ರಿಪ್ಲೆಕ್ಟಿವ್ ಕೆಂಪು ಪಟ್ಟಿ ಇರಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts