

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವ ಸವಾರರಿಗಿ ಸಂಚಾರಿ ಪೊಲೀಸರು ಮಾರ್ಗ ಮಧ್ಯೆ ದಂಡ ಹಾಕುತ್ತಿರುತ್ತಾರೆ. ಇದೀಗ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬರುತ್ತಿದ್ದ ಪೊಲೀಸರೊಬ್ಬರಿಗೆ, ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರೊಬ್ಬರು ದಂಡ ಹಾಕಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಈ ಘಟನೆ ನಡೆದಿರುವುದು ಆರ್.ಟಿ. ನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ.
ದ್ವಿಚಕ್ರ ವಾಹನ ಸವಾರರು ಹಾಫ್ ಹೆಲ್ಮೆಟ್ ಧರಿಸಿ ಚಾಲನೆ ಮಾಡಬಾರದು ಎಂಬ ನಿಯಮವಿದೆ. ಸುರಕ್ಷತೆಯ ದೃಷ್ಟಿಯಿಂದ ಫುಲ್ಸೈಜ್ ಹೆಲ್ಮೆಟ್ ಬಳಕೆ ಮಾಡಬೇಕು ಎಂದು ನಿಯಮ ರೂಪಿಸಲಾಗಿದೆ. ಇದೀಗ ಬೆಂಗಳೂರು ಪೊಲೀಸರು ಹಾಫ್ಹೆಲ್ಮೆಟ್ ಬಳಕೆದಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಮಾಡುತ್ತಿದ್ದಾರೆ. ಈ ವೇಳೆ ಪೊಲೀಸರೊಬ್ಬರು ನಿಯಮ ಮೀರಿ, ಸಿಕ್ಕಿಬಿದ್ದಿದ್ದಾರೆ.
ಪೊಲೀಸ್ ಎಂಬ ವಿನಾಯಿತಿ ನೀಡದೆ, ಕರ್ತವ್ಯದಲ್ಲಿದ್ದ ಎಎಸ್ಐ ಒಬ್ಬರು ದಂಡ ವಿಧಿಸಿದ್ದಾರೆ. ಇದೀಗ ಆರ್.ಟಿ.ನಗರ ಪೊಲೀಸರು ತಮ್ಮ ಟ್ವಿಟರ್ ಖಾತೆಯಲ್ಲಿ ದಂಡ ವಿಧಿಸುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಪೊಲೀಸರ ಈ ನಡೆಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.