More

    ಅರ್ಧ ಶತಮಾನ ಕಳೆದರೂ ಒಬ್ಬರೂ ನೌಕರಿ ಸೇರಿಲ್ಲ

    ಕುಷ್ಟಗಿ: ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಶೇ.80 ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ತಹಸೀಲ್ದಾರ್ ಎಂ.ಸಿದ್ದೇಶ ಹೇಳಿದರು.

    ತಾಲೂಕಿನ ರ‌್ಯಾವಣಕಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿವಿಧ ಇಲಾಖೆಯ ಅಧಿಕಾರಿಗಳು ಇಡೀ ದಿನ ಗ್ರಾಮದಲ್ಲಿದ್ದು, ಸಮಸ್ಯೆ ಆಲಿಸುವರು. ಸಮಸ್ಯೆ ಯಾವುದೇ ಇಲಾಖೆಗೆ ಸಂಬಂಧಿಸಿದ್ದಿರಲಿ ಪರಿಹರಿಸುವ ಕಾರ್ಯ ಮಾಡಲಾಗುವುದು. ಗ್ರಾಮಸ್ಥರು ಕಾರ್ಯಕ್ರಮದ ಸದುಪಯೋಗ ಪಡೆಯಬೇಕಿದೆ ಎಂದರು.

    ಕುಡಿವ ನೀರಿನದ್ದೇ ಸಮಸ್ಯೆ
    ಗ್ರಾಮದಲ್ಲಿ ಕುಡಿವ ನೀರಿನ ತೀವ್ರ ಸಮಸ್ಯೆ ಇದೆ. ಈ ಸಂಬಂಧ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಮುಂದುವರಿದಿದೆ ಎಂದು ಗ್ರಾಮಸ್ಥರು ಅಲವತ್ತುಕೊಂಡರು. ಗ್ರಾಮದಲ್ಲಿರುವ ಶುದ್ಧೀಕರಣ ಘಟಕಕ್ಕೆ ಈಗಾಗಲೇ 40ಸ್ಮಾರ್ಟ್ ಕಾರ್ಡ್ ವಿತರಿಸಲಾಗಿದೆ. ಇನ್ನೂ 150 ಹಂಚಿಕೆ ಮಾಡಲಾಗುವುದು. ಶಾಖಾಧಿಕಾರಿಗಳಿಂದ ಮಾಹಿತಿ ಪಡೆದು ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಶ್ಯಾಮಣ್ಣ ನಾರಿನಾಳ ಹೇಳಿದರು.

    ಒಬ್ಬರೂ ನೌಕರಿ ಪಡೆದಿಲ್ಲ
    ಗ್ರಾಮದಲ್ಲಿ ಶಾಲೆ ಆರಂಭವಾಗಿ 50 ವರ್ಷ ಕಳೆದರೂ ಈ ವರೆಗೆ ಒಬ್ಬರೂ ಸರ್ಕಾರಿ ನೌಕರಿ ಪಡೆದಿಲ್ಲ. ಶಾಲೆ ಕಟ್ಟಡದ ತಳಪಾಯವೇ ಹಾಗಿದೆಯೋ ಏನೋ ಗೊತ್ತಿಲ್ಲ. ಬರುವ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಸದ್ಯ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಸಮಯ ಪಾಲನೆ ಮಾಡುತ್ತಿಲ್ಲ. ಉತ್ತಮ ಶಿಕ್ಷಕರನ್ನು ಶಾಲೆಗೆ ನಿಯೋಜಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

    ಶಿಕ್ಷಕರ ಜತೆ ಮನೆಯಲ್ಲಿ ಪಾಲಕರೂ ಮಕ್ಕಳಿಗೆ ಅಭ್ಯಾಸ ಮಾಡಿಸಬೇಕು. ಸಮಯ ಪಾಲನೆ ಮಾಡುವಂತೆ ಶಿಕ್ಷಕರಿಗೆ ತಾಕೀತು ಮಾಡಲಾಗುವುದು ಎಂದು ಬಿಇಒ ಎಂ.ಚನ್ನಬಸಪ್ಪ ತಿಳಿಸಿದರು. ಗ್ರಾಮದ ಜಾಲಿಹಾಳ ರಸ್ತೆಗೆ ಸೇತುವೆ ನಿರ್ಮಿಸಬೇಕು. ಹಳೆಯ ವಿದ್ಯುತ್ ಕಂಬ ಹಾಗೂ ತಂತಿ ಬದಲಿಸಬೇಕು. ರುದ್ರಭೂಮಿ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಮೆದುಳಿನ ಸಮಸ್ಯೆ ಎದುರಿಸುತ್ತಿರುವ ಮೂರು ವರ್ಷದ ಮಗು ಕೃಷ್ಣ ಬಡಿಗೇರನ ಚಿಕಿತ್ಸೆಗೆ ನೆರವು ನೀಡುವಂತೆ ತಾಯಿಯೊಬ್ಬರು ಅಂಗಲಾಚಿದರು.

    ತಾಪಂ ಇಒ ಕೆ.ತಿಮ್ಮಪ್ಪ, ಲೋಕೋಪಯೋಗಿ ಇಲಾಖೆ ಎಇಇ ಎಸ್.ಬಿ.ಕಂಠಿ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ದುರ್ಗಾ ಪ್ರಸಾದ, ಜೆಸ್ಕಾಂ ಉಪ ವಿಭಾಗದ ಎಇಇ ಮಂಜುನಾಥ, ದೈಹಿಕ ಶಿಕ್ಷಣ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರ್, ನೌಕರರ ಸಂಘದ ಅಧ್ಗಯಕ್ಷ ಶ್ರೀನಿವಾಸ ನಾಯಕ್, ಆರೋಗ್ಯಾಧಿಕಾರಿ ಆನಂದ ಗೋಟೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts