More

    10 ವರ್ಷದಿಂದ ಡಾಂಬರೀಕರಣ ಕಾಣದ ಹಲಗೇರಿ ಗ್ರಾಮದಲ್ಲಿನ ಈ ರಸ್ತೆ

    ರಾಣೆಬೆನ್ನೂರ: ತಾಲೂಕಿನ ದೊಡ್ಡ ಗ್ರಾಮ ಎಂದು ಕರೆಯಿಸಿಕೊಳ್ಳುವ ಹಲಗೇರಿ ಗ್ರಾಮದ ಪೊಲೀಸ್ ಠಾಣೆ ಪಕ್ಕದ ರಸ್ತೆ ಕಳೆದ 10 ವರ್ಷದಿಂದ ಡಾಂಬರೀಕರಣ ಕಾಣದ ಕಾರಣ ಮಳೆಗಾಲದಲ್ಲಿ ಜನತೆ ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
    ಗ್ರಾಮದ ಕೆಲ ಭಾಗದಲ್ಲಿ ಸಿಸಿ ರಸ್ತೆಗಳನ್ನು ಮಾಡಲಾಗಿದೆ. ಆದರೆ, ಪೊಲೀಸ್ ಠಾಣೆ ಪಕ್ಕದ ರಸ್ತೆಯನ್ನು ಮಾತ್ರ ಅಭಿವೃದ್ಧಿ ಪಡಿಸಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ರಸ್ತೆ ನಡುವೆ ನೀರು ನಿಂತು ಕೆಸರು ಗದ್ದೆಯಂತಾಗುತ್ತಿದೆ. ಹೀಗಾಗಿ ನಿತ್ಯವೂ ಶಾಲಾ-ಕಾಲೇಜ್ ವಿದ್ಯಾರ್ಥಿಗಳನ್ನು ಪಾಲಕರು ಹೆಗಲ ಮೇಲೆ ಹೊತ್ತುಕೊಂಡು ಬಂದು ಮುಖ್ಯ ರಸ್ತೆ ಬಳಿ ಬಿಡಬೇಕಿದೆ.
    ಅಲ್ಲದೆ ರೈತರು ಈ ರಸ್ತೆ ಮಾರ್ಗವಾಗಿ ಎತ್ತು, ಚಕ್ಕಡಿ ತೆಗೆದುಕೊಂಡು ಹೋಗುವುದನ್ನು ಬಿಟ್ಟಿದ್ದಾರೆ. ರಸ್ತೆಯುದ್ದಕ್ಕೂ ಅಕ್ಕಪಕ್ಕದಲ್ಲಿ ಮನೆ ನಿರ್ಮಿಸಿಕೊಂಡಿರುವ ಜನತೆ ಮಳೆಗಾಲದಲ್ಲಿ ಮನೆಯಿಂದ ಹೊರಗೆ ಬಾರದ ದುಸ್ಥಿತಿ ಎದುರಾಗಿದೆ. ರಾತ್ರಿ ಸಮಯದಲ್ಲಿ ಮನೆಗೆ ಬರುವ ನಿವಾಸಿಗಳು ಕೆಸರಿನಲ್ಲಿ ಬಿದ್ದು ಮನೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ.
    ಇಲ್ಲಿನ ನಿವಾಸಿಗಳು ಬೈಕ್, ಕಾರುಗಳನ್ನು ಮುಖ್ಯ ರಸ್ತೆಯಲ್ಲಿಯೆ ಇಟ್ಟು ಕೆಸರಿನಲ್ಲಿ ಹೊರಳಾಡುತ್ತ ನಡೆದುಕೊಂಡು ಹೋಗಿ ಮನೆ ಸೇರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಬೇರೆಡೆ ಸಿಸಿ ರಸ್ತೆಗಳನ್ನು ನಿರ್ಮಿಸಿದ್ದಾರೆ. ಆದರೆ, ಈ ಭಾಗದಲ್ಲಿ ಮಾತ್ರ ಯಾರೋಬ್ಬರು ಗಮನ ಹರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
    ಮುಂದಿನ ದಿನದಲ್ಲಾದರೂ ಗ್ರಾಪಂ ಹಾಗೂ ಜಿಪಂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ರಸ್ತೆಗೆ ಕಾಂಕ್ರಿಟ್ ಅಥವಾ ಡಾಂಬರೀಕರಣ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts