More

    ಎಚ್1ಎನ್1 ಜಾಗೃತಿಗೆ ಕ್ರಮ

    ಉಡುಪಿ: ಜಿಲ್ಲೆಯಲ್ಲಿ ಎಚ್1ಎನ್1 ರೋಗದಿಂದ ಮರಣ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ರೋಗದ ಲಕ್ಷಣ, ಹರಡುವಿಕೆ ಮತ್ತು ತಡೆ ವಿಧಾನಗಳ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದರು.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಸರ್ವೇಕ್ಷಣಾ ಘಟಕದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಹಾಳಾಗಿರುವ ಕಡೆಗಳಲ್ಲಿ ಸೊಳ್ಳೆಗಳ ಉತ್ಪತ್ತಿಯಾಗಿ ರೋಗಗಳು ಹರಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು. ಜಿಲ್ಲಾ ಕೀಟಜನ್ಯ ರೋಗ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಜಪಾನೀಸ್ ಎನ್ಸೆಫಲೈಟಿಸ್ ರೋಗದ 5 ಪ್ರಕರಣಗಳು ಕಂಡುಬಂದಿದ್ದು, ಇದರಲ್ಲಿ 1 ಸಾವು ದಾಖಲಾಗಿದೆ. ಚಿಕೂನ್‌ಗುನ್ಯದ ಏಳು ಪ್ರಕರಣಗಳಲ್ಲಿ 4 ಜನರಲ್ಲಿ ರೋಗ ಲಕ್ಷಣಗಳಿರುವುದು ದೃಢಪಟ್ಟಿದೆ. ಹಿಂದಿನ ಸಾಲಿಗೆ ಹೋಲಿಸಿದಾಗ ಈ ಸಾಲಿನಲ್ಲಿ ಮಲೇರಿಯಾ ರೋಗದ ಪ್ರಕರಣಗಳು ಕಡಿಮೆ ಇವೆ. ಡೆಂೆ ಪ್ರಕರಣಗಳು ರಾಜ್ಯಾದ್ಯಂತ ಹೆಚ್ಚಿದ್ದು, ಉಡುಪಿಯಲ್ಲಿ ಈ ಸಾಲಿನಲ್ಲಿ ಒಟ್ಟು 25 ಪ್ರಕರಣ ದಾಖಲಾಗಿವೆ. ಈ ಎಲ್ಲ ರೋಗಗಳು ಸೊಳ್ಳೆಯಿಂದ ಹರಡುವುದರಿಂದ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಮಾಡಿ, ರೋಗ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಮಂಗನ ಕಾಯಿಲೆ ಇಲ್ಲ: ಮಂಗನ ಕಾಯಿಲೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಎರಡು ಪ್ರಕರಣಗಳು ಕಂಡುಬಂದಿದ್ದು, ಈ ಬಾರಿ ಪ್ರಕರಣ ದಾಖಲಾಗಿಲ್ಲ. ಈ ಕಾಯಿಲೆಯಿಂದ ಬಳಲುವ ವಿವಿಧ ಜಿಲ್ಲೆಗಳ 8 ಜನರು ಕೆಎಂಸಿಯಲ್ಲಿ ದಾಖಲಾಗಿದ್ದು, ಅದರಲ್ಲಿ 1 ಸಾವು ಸಂಭವಿಸಿದೆ. ಜಿಲ್ಲೆಯ ಮಂಗಗಳಲ್ಲಿ ಈ ರೋಗದ ಲಕ್ಷಣಗಳು ಕಂಡುಬಂದಿಲ್ಲ ಎಂದರು. ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಆರ್.ಶೇಷಪ್ಪ, ಡಿಡಿಪಿಐ ಶೇಷಶಯನ ಕಾರಿಂಜ, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ, ಪಶುಸಂಗೋಪನೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಕರೊನಾ ಪ್ರಕರಣ ಇಲ್ಲ: ಜಿಲ್ಲೆಯಲ್ಲಿ ಕರೊನಾ ರೋಗದ ಪ್ರಕರಣಗಳು ಇಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ವಾಸುದೇವ ಉಪಾಧ್ಯಾಯ ತಿಳಿಸಿದರು. ಚೀನಾದಿಂದ ಪ್ರವಾಸ ಬಂದ ಮೂವರು ಸ್ವಯಂಪ್ರೇರಿತರಾಗಿ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆಗೊಳಗಾಗಿದ್ದು, ಅವರಲ್ಲಿ ಸೋಂಕು ಇಲ್ಲ ಎಂದು ದೃಢಪಟ್ಟಿದೆ. ಜಿಲ್ಲೆಯಲ್ಲಿ 2019ರಲ್ಲಿ 424 ಎಚ್1ಎನ್1 ಪ್ರಕರಣಗಳು ಕಂಡುಬಂದಿತ್ತು. 10 ಜನರು ಮೃತಪಟ್ಟಿದ್ದು, 2020 ಫೆಬ್ರವರಿವರೆಗೆ 55 ಪ್ರಕರಣಗಳು ದಾಖಲಾಗಿದ್ದು, ಯಾರೂ ಸಾವನ್ನಪ್ಪಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts