More

    ಸೌಲಭ್ಯ ಒದಗಿಸಲು ಕಾರ್ಯಪ್ರವೃತ್ತರಾಗಿ

    ಮುಳಬಾಗಿಲು: ನಗರಾಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿಸಲಾಗುವುದು, 31 ವಾರ್ಡ್‌ಗಳಲ್ಲಿ ಮೂಲ ಸೌಲಭ್ಯ ಒದಗಿಸಲು ಸದಸ್ಯರು ಮತ್ತು ಆಡಳಿತ ಮಂಡಳಿ ಕಾರ್ಯ ಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಸೂಚನೆ ನೀಡಿದರು.

    ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಗುರುವಾರ ಮಾತನಾಡಿ, ಒಳಚರಂಡಿ ವ್ಯವಸ್ಥೆ ಅಧ್ವಾನಗೊಂಡಿದು, ಅದಕ್ಕೆ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿ ಕುಂಠಿತಗೊಂಡಿರುವ ಕಾಮಗಾರಿಗೆ ಮರುಜೀವ ನೀಡಲಾಗುವುದು. ನಗರದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಾಗುವುದು ಎಂದರು.

    ಮಾಜಿ ಪೌರಾಡಳಿತ ಸಚಿವ ದಿವಂಗತ ಆಲಂಗೂರು ಶ್ರೀನಿವಾಸ ಅವರ ಪ್ರತಿಮೆಯನ್ನು ನಗರಸಭೆ ಮುಂಭಾಗದಲ್ಲಿ ಪ್ರತಿಷ್ಠಾಪನೆ ಮಾಡಲು ಸಚಿವರು ಪ್ರಸ್ತಾಪಿಸುತ್ತಿದ್ದಂತೆ ಸದಸ್ಯರಾದ ಜಗನ್ಮೋಹನರೆಡ್ಡಿ, ಅಕ್ಮಲ್ ಬೇಗ್ ಮತ್ತಿತರರು ರಾಜಕೀಯ ಪ್ರೇರಿತವಾಗಿ ಪ್ರತಿಮೆ ಪ್ರತಿಷ್ಠಾಪನೆಗೆ ಅವಕಾಶ ಮಾಡಬಾರದು. ಸಾಧಕರ ಪ್ರತಿಮೆಗಳನ್ನು ಮಾತ್ರ ಪ್ರತಿಷ್ಠಾಪನೆ ಮಾಡಿ ಎಂದು ತಿಳಿಸಿದರು.

    ಮಾಜಿ ಕೇಂದ್ರ ಸಚಿವ ದಿವಂಗತ ಎಂ.ವಿ.ಕೃಷ್ಣಪ್ಪ ಅವರು ಡೆನ್ಮಾರ್ಕ್‌ನಿಂದ ದೇಶಕ್ಕೆ ಹಸುಗಳನ್ನು ತರಿಸಿ ಹಾಲು ಡೇರಿ ಸ್ಥಾಪನೆಯಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ. ಆಲಂಗೂರು ಶ್ರೀನಿವಾಸ ಅವರಷ್ಟೇ ಮಾಜಿ ಸ್ಪೀಕರ್ ಎಂ.ವಿ.ವೆಂಕಟಪ್ಪ ಅವರು ನಗರ ಮತ್ತು ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದಿದ್ದಾರೆ ಎಂದು ಸದಸ್ಯರು ಸಚಿವರ ಗಮನಕ್ಕೆ ತಂದಾಗ ಸಚಿವರು ತಾಲೂಕಿಗೆ ಆಲಂಗೂರು ಶ್ರೀನಿವಾಸ್, ಎಂ.ವಿ.ಕೃಷ್ಣಪ್ಪ, ಎಂ.ವಿ.ವೆಂಕಟಪ್ಪ ಅವರ ಸೇವೆ ಅಮೂಲ್ಯವಾಗಿದೆ. ಮುಂದಿನ ಹಂತದಲ್ಲಿ ಅವರ ಪ್ರತಿಮೆಗಳನ್ನು ಸೂಕ್ತ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡೋಣ ಎಂದರು.

    ಆಲಂಗೂರು ಪ್ರತಿಮೆ ಸ್ಥಾಪಿಸಲು 31 ಸದಸ್ಯರಲ್ಲಿ ಅಧಿಕ ಮಂದಿ ಬಹುಮತ ವ್ಯಕ್ತಪಡಿಸಿದ್ದರಿಂದ ನಗರಸಭೆ ಮುಂಭಾಗದಲ್ಲಿ ಆಲಂಗೂರು ಶ್ರೀನಿವಾಸ್ ಪ್ರತಿಮೆ ಶೀಘ್ರದಲ್ಲೇ ಪ್ರತಿಷ್ಠಾಪನೆ ಮಾಡಲು ನಿರ್ಧರಿಸಲಾಯಿತು.
    ನೂತನವಾಗಿ ಆಯ್ಕೆಗೊಂಡ 31 ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

    ನಗರಸಭಾಧ್ಯಕ್ಷ ರಿಯಾಜ್‌ಅಹ್ಮದ್, ಉಪಾಧ್ಯಕ್ಷ ಭಾಗ್ಯಮ್ಮರಾಮಚಂದ್ರಪ್ಪ, ಪೌರಾಯುಕ್ತ ಜಿ.ಶ್ರೀನಿವಾಸಮೂರ್ತಿ, ಸದಸ್ಯರಾದ ಜಿ.ನಾಗರಾಜ್, ಎಂ.ಪ್ರಸಾದ್, ಎಸ್.ವೈ.ರಾಜಶೇಖರ್, ಆರ್.ಶಂಕರಪ್ಪ, ಡಿ.ಸೋಮಣ್ಣ, ಜಬೀವುಲ್ಲ, ಬಿ.ಎಸ್. ದಿವ್ಯಶ್ರೀ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts