More

    ಪೇಜಾವರ ಶ್ರೀಗಳ ವೃಂದಾವನ ದರ್ಶನ ಪಡೆದ ಎಚ್​. ಡಿ.ದೇವೇಗೌಡರು; ಎಚ್​ಡಿಕೆ ಬಿಡುಗಡೆ ಮಾಡಿದ ಸಿಡಿ ಬಗ್ಗೆ ಮಾತನಾಡಲು ನಿರಾಕರಣೆ

    ಬೆಂಗಳೂರು: ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು ಇಂದು ವಿದ್ಯಾಪೀಠದಲ್ಲಿನ ಪೇಜಾವರ ಮಠಕ್ಕೆ ಭೇಟಿ ನೀಡಿ ಶ್ರೀ ವಿಶ್ವೇಶ ತೀರ್ಥರ ವೃಂದಾವನ ದರ್ಶನ ಪಡೆದರು. ಹಾಗೇ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

    ಬಳಿಕ ಮಾತನಾಡಿ, ಪೇಜಾವರ ಶ್ರೀಗಳು ಕೃಷ್ಣೈಕ್ಯರಾದಾಗ ನಾನು ಹೊರರಾಜ್ಯದಲ್ಲಿ ಇದ್ದೆ. ಮಾಧ್ಯಮಗಳಿಂದ ವಿಷಯ ತಿಳಿಯಿತು. ಆಗ ಫ್ಲೈಟ್​ ಇಲ್ಲದ ಕಾರಣ ಬರಲು ಸಾಧ್ಯವಾಗಲಿಲ್ಲ. ಪ್ರತಿಯೊಂದು ದೃಶ್ಯವನ್ನೂ ಮಾಧ್ಯಮಗಳ ಮೂಲಕ ನೋಡಿದೆ. ಮಂಡಿ ನೋವಿನ ಚಿಕಿತ್ಸೆಗೆ ಮತ್ತೆ ಕೇರಳಕ್ಕೆ ಹೋಗುತ್ತೇನೆ ಎಂದು ಹೇಳಿದರು.

    ಮೂರು ತಿಂಗಳ ಹಿಂದೆ ಉಡುಪಿಗೆ ಹೋಗಿದ್ದೆ. ನಾನು ಹೋದ ದಿನ ಅವರೇ ಪೂಜೆ ಮಾಡಿ ನನಗೆ ಆಶೀರ್ವಾದ ಮಾಡಿದ್ದರು. ಕೃಷ್ಣ ಪರಮಾತ್ಮ ಬಾ ಎಂದು ಕರೆದಾನ ಹೋಗಲೇಬೇಕಾಗುತ್ತದೆ ಎಂದರು.

    ಸ್ವಾಮೀಜಿಗಳು ದಲಿತರ ಕಾಲನಿಗಳಿಗೆ ಭೇಟಿ ಕೊಟ್ಟು ಅಸ್ಪೃಶ್ಯತೆ ನಿವಾರಣೆ ಮಾಡುವ ಕೆಲಸ ಮಾಡಿದ್ದಾರೆ. ಅವರು ತೋರಿಕೆಗಾಗಿ ಯಾವ ಕೆಲಸವನ್ನೂ ಮಾಡಲಿಲ್ಲ. ಮುಸ್ಲಿಮರಿಗೆ ಇಫ್ತಿಯಾರ್​ ಕೂಟ ಆಯೋಜಿಸಿ ರಾಷ್ಟ್ರಕ್ಕೇ ಒಂದು ಸಂದೇಶ ನೀಡಿದರು ಎಂದು ಎಚ್​.ಡಿ.ದೇವೇಗೌಡರು ಹೇಳಿದರು.

    ನಾನು ಮಠಕ್ಕೆ ಏನು ಮಾಡಿದ್ದೇನೆ ಎಂದು ಹೇಳೋದಿಲ್ಲ. ಮಠಕ್ಕೆ ಜಾಗ ಕೇಳಿದ್ದರು. ಹತ್ತೂವರೆ ತಿಂಗಳು ಪ್ರಧಾನಿಯಾಗಿದ್ದಾಗ ನಾನು ಜಾಗ ಕೊಡಿಸಿದೆ. ವಿದ್ಯಾಪೀಠಕ್ಕಾಗಿ ಕಡಿಮೆ ಹಣಕ್ಕಾಗಿ ಭೂಮಿ ಕೊಟ್ಟಿದ್ದೇವೆ. ಇದನ್ನು ಹಲವು ಸಭೆಗಳಲ್ಲಿ ಸ್ವಾಮೀಜಿಗಳೇ ಹೇಳಿದ್ದಾರೆ. ನಾನು ದೊಡ್ಡ ಕೆಲಸ ಏನೂ ಮಾಡಿಲ್ಲ. ಸಾರ್ವಜನಿಕ ಸಭೆಗಳಲ್ಲಿ ಹೇಳಬೇಡಿ ಎಂದು ಮನವಿ ಮಾಡಿಕೊಂಡೆ. ಆದರೆ ನೀವು ನಮಗೆ ಜಾಗ ಕೊಟ್ಟಿರಿ ಎಂದು ಹೇಳುವುದರಲ್ಲಿ ಏನು ತಪ್ಪಿದೆ ಎಂದು ನನ್ನನ್ನು ಶ್ರೀಗಳು ಪ್ರಶ್ನಿಸಿದರು ಎಂದು ನೆನಪಿಸಿಕೊಂಡರು.

    ಮಂಗಳೂರು ಗಲಭೆ ಸಂಬಂಧ ಎಚ್​.ಡಿ.ಕುಮಾರಸ್ವಾಮಿಯವರು ಬಿಡುಗಡೆ ಮಾಡಿದ ವಿಡಿಯೋ ಬಗ್ಗೆ ದೇವೇಗೌಡರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ವೃಂದಾವನ ಪಕ್ಕ ನಿಂತು ರಾಜಕೀಯ ಮಾತಾಡೋದಿಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts