More

    ಕೊನೇ ಉಸಿರು ಇರುವವರೆಗೆ ಹೋರಾಟ : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗುಡುಗು

    ಶಿರಾ: ನಾನು ಜೀವನದ ಕೊನೆಯಲ್ಲಿ ಇದ್ದೇನೆ. ಇನ್ನೂ ಎಷ್ಟು ದಿನ ನಾನು ಇರುತ್ತೇನೋ! ಹೋರಾಟವೇ ನನ್ನ ಬದುಕು. ಅದು ಕೇವಲ ಒಕ್ಕಲಿಗರಿಗೆ, ಲಿಂಗಾಯಿತರಿಗೆ ಸೀಮಿತವಲ್ಲ. ಎಲ್ಲ ವರ್ಗದ ಜನರ ಪರವಾಗಿ ನನ್ನ ಕೊನೇ ಉಸಿರು ಇರುವರೆಗೆ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

    ನಗರದಲ್ಲಿ ಜೆಡಿಎಸ್ ತಾಲೂಕು ಘಟಕ ಆಯೋಜಿಸಿದ್ದ ಅಲ್ಪಸಂಖ್ಯಾತ ಮಹಿಳೆಯರ ಸಮಾವೇಶದಲ್ಲಿ ಶನಿವಾರ ಮಾತನಾಡಿದ ಅವರು, ಈ ದೇವೇಗೌಡ ಒಕ್ಕಲಿಗರು, ಲಿಂಗಾಯಿತರಿಗೆ ಮಾತ್ರ ಹೋರಾಟ ಮಾಡಿಲ್ಲ. ಎಲ್ಲ ವರ್ಗ, ಜಾತಿ, ಧರ್ಮದ ಪರವಾಗಿ ಹೋರಾಡಿಕೊಂಡು ಬಂದಿದ್ದಾನೆ. ಬೆಂಗಳೂರಿನಲ್ಲಿ ಎರಡು ಬಾರಿ ಮುಸ್ಲಿಂ ಮಹಿಳೆಯರನ್ನು ಮೇಯರ್ ಮಾಡಿದ್ದು ನಾನು. ಮುಸ್ಲಿಂರು ಈ ಬಾರಿ ಜೆಡಿಎಸ್‌ಗೆ ಮತ ಹಾಕುವುದಿಲ್ಲವೆಂದು ದೊಡ್ಡನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ತುಂಬಾ ನೋವಾಗಿದೆ. ಈ ವಯಸ್ಸಿನಲ್ಲೂ ಓಡಾಡುತ್ತಿದ್ದಾರೆ ಏನಾದರೂ ಸಹಾಯ ಮಾಡಬೇಕು ಅಂದರೆ ನಮ್ಮ ಅಭ್ಯರ್ಥಿಗೆ ನೀವು ಮತ ನೀಡಿ ಎಂದರು.

    ದೇಶದಲ್ಲಿ ಶ್ರೀಮಂತ ಮುಸ್ಲಿಮರು ನಾವು ಹೇಗೆ ಬದುಕಬಹುದು ಎಂದು ಯೋಚನೆ ಮಾಡುತ್ತಾರೆ. ಬಡ ಮುಸ್ಲಿಮರು ಶ್ರೀಮಂತ ಮುಸ್ಲಿಮರಿಗಾಗಿ ಪ್ರಾಣ ಕೊಡುತ್ತಾರೆ. ಹಿಂದು-ಮುಸ್ಲಿಂ ಗಲಾಟೆಯಾದರೆ ಯಾವ ಶ್ರೀಮಂತ ಮುಸ್ಲಿಂ ಆಚೆ ಬರುತ್ತಾನೆ? ಇಲ್ಲಿರುವ ಬಡ ಮುಸ್ಲಿಂ ಹುಡುಗರು ಪ್ರಾಣಕೊಟ್ಟು ಹೋರಾಟ ಮಾಡುತ್ತಾರೆ ಎನ್ನುವ ಮೂಲಕ ಭಾವನಾತ್ಮಕ ದಾಳ ಉರುಳಿಸಿದರು.

    ಹೊರಗಿನವರನ್ನು ಹೊರದಬ್ಬಿ

    ಹಣ, ಹೆಂಡದ ಹೊಳೆ ಹರಿಸುತ್ತಿರುವ ಹೊರಜಿಲ್ಲೆಗಳ ಬಿಜೆಪಿ ಕಾರ್ಯಕರ್ತರನ್ನು ಮತದಾನದ 48 ಗಂಟೆಗೂ ಮುನ್ನ ಹೊರದಬ್ಬಬೇಕು. ಇಲ್ಲವಾದಲ್ಲಿ ನಾವೇ ದಬ್ಬುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಪಕ್ಷದ ಪ್ರಚಾರ ಕಚೇರಿಯಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಆಯೋಗಕ್ಕೆ ಎಚ್ಚರಿಕೆ ನೀಡಿದರು.

    ಸಾರ್ವಜನಿಕವಾಗಿ ಹಣ, ಹೆಂಡ ಹಂಚುತ್ತಿದ್ದರೂ ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ. ಹೊರಗಿನಿಂದ ಸಾವಿರಾರು ಜನ ಬಂದು ಬಿಜೆಪಿ ಪರ ಹಣ ಹಂಚುತ್ತಿದ್ದಾರೆ. ಹೊರಗೆ ಕಳಿಸುವ ಕೆಲಸವನ್ನು ಆಯೋಗ ಮಾಡಬೇಕು. ತಟಸ್ಥ ಅಂಪೈರ್ ಆಗಿ, ನಿಷ್ಪಕ್ಷಪಾತ ಚುನಾವಣೆಯನ್ನು ಆಯೋಗ ಮಾಡಬೇಕು ಎಂದು ಮಾಜಿ ಡಿಸಿಎಂ ಪರಮೇಶ್ವರ ಒತ್ತಾಯಿಸಿದರು.

    ಶಿರಾದಲ್ಲಿ ಸ್ವಯಂ ಸೇವಕರ ಮೂಲಕ ಅನೈತಿಕ ಕೆಲಸ ನಡೀತಿದೆ ಎಂಬ ಮಾಹಿತಿ ಇದ್ದು ಹಣ ಹಂಚುವಂತಹ ಕೆಲಸ ಮಾಡಲಾಗುತ್ತಿದೆ. ಮತದಾನದ 48 ಗಂಟೆ ಮುಂಚೆ ಹೊರಗಿನಿಂದ ಬಂದವರನ್ನು ಕ್ಷೇತ್ರದಿಂದ ಹೊರಕ್ಕೆ ಹಾಕಬೇಕು. ಇಲ್ಲದಿದ್ದರೆ ನಮ್ಮ ಕಾರ್ಯಕರ್ತರೇ ಅವರನ್ನು ಹೊರಹಾಕುತ್ತಾರೆ ಎಂದು ಕೆ.ಎನ್.ರಾಜಣ್ಣ ಎಚ್ಚರಿಸಿದರು.

    ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ, ಮೇಲ್ಮನೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಶಾಸಕ ವೆಂಕಟರಮಣಪ್ಪ, ಮಾಜಿ ಸಂಸದರಾದ ಎಸ್.ಪಿ.ಮುದ್ದಹನುಮೇಗೌಡ, ಕೆ.ಎಚ್.ಮುನಿಯಪ್ಪ, ಬಿ.ಎನ್.ಚಂದ್ರಪ್ಪ, ಸಾಸಲುಸತೀಶ್ ಮತ್ತಿತರರು ಹಾಜರಿದ್ದರು.

    ಕಾಂಗ್ರೆಸ್, ಜೆಡಿಎಸ್‌ಗೆ ಮತ ಹಾಕುವುದು ವ್ಯರ್ಥ

    ಸರ್ವಜನರ ಕಲ್ಯಾಣಕ್ಕಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿರುವುದು ಬಿಜೆಪಿ ಸರ್ಕಾರ. ಹಾಗಾಗಿ, ಈ ದೇಶದಲ್ಲಿ ಎಲ್ಲ ಜಾತಿ, ಧರ್ಮಗಳನ್ನು ಪ್ರತಿನಿಧಿಸುವ ಏಕೈಕ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ದು ಕಾಂಗ್ರೆಸ್, ಜೆಡಿಎಸ್‌ಗೆ ಮತ ಹಾಕುವುದು ವ್ಯರ್ಥ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಪಕ್ಷದ ವತಿಯಿಂದ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲವರಿಗೆ ಬಿಜೆಪಿ ಮೇಲೆ ಅಪಪ್ರಚಾರ ಮಾಡುವುದೇ ಚಾಳಿಯಾಗಿದೆ. ಬಿಜೆಪಿ ಎಂದರೆ ಅಭಿವೃದ್ಧಿ. ಸರ್ವ ಸಮಾನತೆ. ಮಹರ್ಷಿ ವಾಲ್ಮೀಕಿ ಅವರ ಪ್ರೇರಣೆಯೊಂದಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ ಕರ್ನಾಟಕವನ್ನು ನಮ್ಮ ಪಕ್ಷ ಕಟ್ಟುತ್ತಿದೆ ಎಂದು ತಿರುಗೇಟು ನೀಡಿದರು.

    6 ತಿಂಗಳಲ್ಲಿ ಶಿರಾ ಚಿತ್ರಣ ಬದಲು: ಶಿರಾವನ್ನು ಮಾದರಿ ತಾಲೂಕು ಮಾಡುವುದು, ಮದಲೂರು ಕೆರೆ ಸೇರಿ 65 ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಇಡೀ ಶಿರಾವನ್ನು ಶಿಕಾರಿಪುರದಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದು, ಅದರಂತೆಯೇ ಈ ಚುನಾವಣೆ ಮುಗಿದ ಕೂಡಲೇ ಎಲ್ಲ ಅಭಿವೃದ್ಧಿ ಕೆಲಸಗಳು ಆರಂಭವಾಗಲಿವೆ. 6 ತಿಂಗಳಲ್ಲಿ ಬದಲಾವಣೆ ಹೇಗಾಗುತ್ತದೆ ಎಂಬುದು ಕ್ಷೇತ್ರದ ಜನರಿಗೆ ಮನವರಿಕೆಯಾಗುತ್ತದೆ. ಇದರಲ್ಲಿ ಅಸತ್ಯವಿಲ್ಲ, ಮುಖ್ಯಮಂತ್ರಿ ಹೇಳಿದ್ದು ನಡೆದೇ ನಡೆಯುತ್ತದೆ ಎಂಬ ಅಭಯವಿತ್ತರು.

    ಕಾಂಗ್ರೆಸ್ ಒಡೆದ ಮನೆ: ಮದಲೂರು ಸಮಾವೇಶ, ರೋಡ್ ಶೋ ಅದ್ದೂರಿಯಾಗಿದ್ದು ಇದನ್ನೆಲ್ಲ ಕಂಡರೆ ಜನರು ಈ ಬಾರಿ ಕಾಂಗ್ರೆಸ್, ಜೆಡಿಎಸ್ ವಿರುದ್ಧ ಮತಹಾಕಲು ತೀರ್ಮಾನ ಮಾಡಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು. ಬೈಎಲೆಕ್ಷನ್ ಫಲಿತಾಂಶ ಬಳಿಕ ಕಾಂಗ್ರೆಸ್ ಒಡೆದ ಮನೆಯಾಗಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕನಸು ನುಚ್ಚುನೂರಾಗಲಿದೆ. ಸಿದ್ದರಾಮಯ್ಯರ ಗುಂಪು ಇನ್ನೊಂದು ಆಗಲಿದೆ. ಮತ್ತೆ ಮುಖ್ಯಮಂತ್ರಿ ಆಗ್ತೀನಿ ಎನ್ನುವ ಸಿದ್ದರಾಮಯ್ಯಗೆ ಮುಖಭಂಗವಾಗಲಿದೆ ಎಂದು ಹರಿಹಾಯ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts