More

    ಶಿಷ್ಯರ ಪ್ರೀತಿಗೆ ಮನಸೋತ ಶಿಕ್ಷಕರು: ನಗರದಲ್ಲಿ ಗುರುವಂದನೆ ಕಾರ್ಯಕ್ರಮ

    ಮಂಡ್ಯ: ಅದು ಬರೋಬರಿ 32 ವರ್ಷಗಳ ನಂತರ ಸ್ನೇಹಿತರೆಲ್ಲ ಒಂದೆಡೆ ಸೇರಿದ ಸಮಯ. ಹರಟೆ, ಕಾಲೆಳೆಯುವ ಮಾತು, ಶಾಲಾ ದಿನಗಳ ನೆನಪು, ಬದುಕಿನ ಪಾಠ ಕಲಿಸಿದ ಗುರುಗಳಿಗೆ ಪ್ರೀತಿಯ ಸನ್ಮಾನ, ಶಿಷ್ಯರ ಆತಿಥ್ಯಕ್ಕೆ ಭಾವುಕರಾದ ಶಿಕ್ಷಕರು.
    ನಗರದ ಹೊರವಲಯದಲ್ಲಿ ಖಾಸಗಿ ಹೋಟೆಲ್‌ನಲ್ಲಿ ತಾಲೂಕಿನ ಹಲ್ಲೆಗೆರೆ ಗ್ರಾಮದ ಚನ್ನಕೇಶವಸ್ವಾಮಿ ಪ್ರೌಢಶಾಲೆಯ 1990-91ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾಗಿದ್ದವರು ಆಯೋಜಿಸಿದ್ದ ಸಂಭ್ರಮದ ಸಮ್ಮಿಲನ ಹಾಗೂ ಗುರುವಂದನಾ ಸಮಾರಂಭದಲ್ಲಿ ಕಂಡು ಬಂದ ಅಪರೂಪದ ದೃಶ್ಯಗಳು.
    ಶಾಲೆಯ ಹಿರಿಯ ವಿದ್ಯಾರ್ಥಿಯೂ ಆದ ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ನೇತೃತ್ವದಲ್ಲಿ ಆಯೋಜಿಸಿದ್ದ ಸಮಾರಂಭ ಭಾವುಕತೆಗೆ ಸಾಕ್ಷಿಯಾಯಿತು. ತ್ಯಾಗರಾಜು ಅವರು ಸುಮಾರು ಒಂದೂವರೆ ತಿಂಗಳು ಶ್ರಮವಹಿಸಿ ತನ್ನ ಎಲ್ಲ ಸ್ನೇಹಿತರನ್ನು ಒಂದೆಡೆ ಸೇರಿಸುವಲ್ಲಿ ಯಶಸ್ವಿಯಾದರು. ಮಾತ್ರವಲ್ಲದೆ ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ ಗುರುಗಳು ಹಾಗೂ ಸ್ನೇಹಿತರ ಪ್ರೀತಿಗೆ ಪಾತ್ರರಾದರು. ಬೆಳಗ್ಗೆಯಿಂದಲೇ ಒಬ್ಬೊಬ್ಬರಾಗಿ ಹಿರಿಯ ವಿದ್ಯಾರ್ಥಿಗಳು ಆಗಮಿಸಿದರು.
    ಸಮಾರಂಭಕ್ಕೆಂದು ಸಭಾಂಗಣವನ್ನು ಮೀಸಲಿಡಲಾಗಿತ್ತು. ಅದರಂತೆ 30 ಜನ ಹಿರಿಯ ವಿದ್ಯಾರ್ಥಿನಿಯರು ಹಾಗೂ 40 ಜನ ಹಿರಿಯ ವಿದ್ಯಾರ್ಥಿಗಳು ಆಗಮಿಸಿದರು. ಸಂಜೆವರೆಗೂ ಹರಟೆ ಹೊಡೆಯುತ್ತಾ, ಒಬ್ಬೊರಿಗೊಬ್ಬರು ಕಾಲು ಎಳೆಯುತ್ತಾ ಕಾಲ ಕಳೆದರು. ವಿಶೇಷವಾಗಿ ಬರೋಬರಿ 32 ವರ್ಷದ ನಂತರ ಎದುರಾದ ಸ್ನೇಹಿತರು ಒಬ್ಬೊರನ್ನೊಬ್ಬರು ಕಂಡು ಆಶ್ಚರ್ಯಪಟ್ಟರು. ಮಾತ್ರವಲ್ಲದೆ ಪ್ರತಿಯೊಬ್ಬರು ತಮ್ಮ ಬಾಲ್ಯದ ನೆನಪು, ಶಾಲಾ ದಿನಗಳ ತುಂತಾಟ, ಜೀವನದಲ್ಲಿ ಎದುರಿಸಿದ ಸವಾಲಗಳನ್ನು ಮೆಟ್ಟಿ ನಿಂತು ಯಶಸ್ಸು ಕಂಡಿದ್ದರ ಬಗ್ಗೆ ಅನುಭವ ಹಂಚಿಕೊಂಡರು. ಜತೆಗೆ ಈ ವೇಳೆ ಹಲವರು ಕಣ್ಣೀರು ಸುರಿಸಿದ ಘಟನೆಯೂ ನಡೆಯಿತು. ಪ್ರತಿ ವರ್ಷ ಇಂತಹದೊಂದು ವಿಶೇಷ ಕಾರ್ಯಕ್ರಮ ಮಾಡಬೇಕೆನ್ನುವ ನಿರ್ಧಾರ ಮಾಡಿದರು. ಎಲ್ಲರಿಗೂ ವಿಶೇಷ ಅಡುಗೆ ಮಾಡಿಸಲಾಗಿತ್ತು.
    ಹಿರಿಯ ವಿದ್ಯಾರ್ಥಿಗಳಾದ ಚಲುವರಾಜು, ಗಿರೀಶ್, ಸೋಮಶೇಖರ್, ರೇವಣ್ಣ, ಕೃಷ್ಣಮೂರ್ತಿ, ಪುಟ್ಟಸ್ವಾಮಿ, ಪುಟ್ಟರಾಜು, ನಾಗರಾಜು, ನಾಗೇಂದ್ರ, ಶ್ರೀನಿವಾಸ್, ರಾಜಪ್ಪ ಇತರರಿದ್ದರು.
    ಗುರುಗಳ ಆನಂದಬಾಷ್ಪ: ಸ್ನೇಹಿತರೆಲ್ಲರೂ ಒಂದೆಡೆ ಸೇರಿದ ಹಿನ್ನೆಲೆಯಲ್ಲಿ ತಮಗೆ ಪಾಠ ಮಾಡಿದ ಶಿಕ್ಷಕರನ್ನು ಸನ್ಮಾನಿಸಲು ತೀರ್ಮಾನಿಸಲಾಗಿತ್ತು. ಅದರಂತೆ ನಿವೃತ್ತ ಶಿಕ್ಷಕರಾದ ರಾಮಲಿಂಗಯ್ಯ, ಎಚ್.ಎಸ್.ಜಗದೀಶ್, ಸಿದ್ದಲಿಂಗಸ್ವಾಮಿ, ಎಂ.ನಾಗಣ್ಣ ಅವರಿಗೆ ಪುಷ್ಪಾರ್ಚನೆ ಮಾಡಿದ ಶಿಷ್ಯರು ನೆನಪಿನ ಕಾಣಿಕೆ ನೀಡಿ ಆಶೀರ್ವಾದ ಪಡೆದರು. ಈ ವೇಳೆ ಗುರುಗಳು ಆನಂದಬಾಷ್ಪ ಸುರಿಸಿದರು. ಮಾತ್ರವಲ್ಲದೆ ಇಂತಹ ವಿಶೇಷ ಕಾರ್ಯಕ್ರಮ ಮಾಡಿ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಬಳಿಕ ಹಿರಿಯ ವಿದ್ಯಾರ್ಥಿಗಳೆಲ್ಲರೂ ತಮ್ಮ ಶಿಕ್ಷಕರೊಂದಿಗೆ ಗ್ರೂಪ್ ಫೋಟೋ ಕ್ಲಿಕ್ಕಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts