More

    ಅಕ್ಷರ ಜ್ಞಾನದ ಜತೆಗೆ ಪರಿಸರ ಸಂರಕ್ಷಣೆ ಅರಿವು

    ಆನಂದ ತುರ್ವಿಹಾಳ್ ಗುರುಗುಂಟ

    ಪ್ರಸ್ತುತ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನದ ಜತೆಗೆ ಪರಿಸರ ಸಂರಕ್ಷಣೆಯ ಅರಿವು ಕೂಡ ಅತ್ಯಗತ್ಯ. ಈ ನಿಟ್ಟಿನಲ್ಲಿ ಪೈದೊಡ್ಡಿ ಸಿಆರ್‌ಸಿ ವ್ಯಾಪ್ತಿಯ ಬಾರಿಗಿಡದೇರ್ ದೊಡ್ಡಿ ಶಾಲೆಯ ಶಿಕ್ಷಕರೊಬ್ಬರು ಮಕ್ಕಳಿಗೆ ಅಕ್ಷರ ಜ್ಞಾನ ನೀಡುವ ಜತೆಗೆ ಪರಿಸರ ರಕ್ಷಣೆಯ ಅರಿವೂ ಮೂಡಿಸುತ್ತಿದ್ದಾರೆ.

    ಸರ್ಕಾರಿ ಕೆಲಸದ ಜತೆಗೆ ಪರಿಸರ ಸಂರಕ್ಷಣೆ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ಚಂದ್ರು ಕಬ್ಬಲಗೇರಿ. ಇವರು ಬಾರಿಗಿಡದೇರ್ ದೊಡ್ಡಿ ಶಾಲೆಯ ಚಿತ್ರಣವನ್ನೇ ಬದಲಿಸಿದ್ದಾರೆ. 100*100 ಶಾಲಾವರಣದಲ್ಲಿ ವಿವಿಧ ಸಸ್ಯ ತಳಿಯ ಬೀಜಗಳನ್ನು ಬಿತ್ತಿ ಹಸಿರು ಕ್ರಾಂತಿಯನ್ನೇ ಸೃಷ್ಟಿಸಿದ್ದಾರೆ. ಅದೂ ತಮ್ಮ ಸ್ವಂತ ದುಡಿಮೆಯಿಂದ ಎಂಬುದು ವಿಶೇಷ. ಶ್ರಮದಾನದ ಮೂಲಕ ಶಾಲೆಯ ಮುಂಭಾಗದಲ್ಲಿ ಸುಂದರ ಉದ್ಯಾನ ನಿರ್ಮಿಸಿರುವ ಅವರ ಕಾರ್ಯಕ್ಕೆ ಶಿಕ್ಷಣ ಇಲಾಖೆ ಹಾಗೂ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಬಾಲವನದಲ್ಲಿ ತರಹೇವಾರಿ ಚಿತ್ರಗಳ
    ಪರಿಸರ ಜಾಗೃತಿ ಹಾಗೂ ಮಕ್ಕಳ ಕಲಿಕೆಗೆ ಅನುಕೂಲವಾಗುವ ಉದ್ದೇಶದಿಂದ ಬಾಲವನದಲ್ಲಿ ಮಕ್ಕಳ ಕಲಿಕೆಗೆ ಆಕೃತಿಗಳು, ತ್ರಿಭುಜ ಆಯತಾಕಾರ, ಬಾವಿ ವೃತ್ತ, ತ್ರಿಕೋನಗಳನ್ನು ಸಸಿಯಲ್ಲಿ ಬಿಡಿಸಲಾಗಿದೆ. ನಲಿಯುತಾ ಕಲಿಯಲು ವಿಜ್ಞಾನ, ರಸಪ್ರಶ್ನೆಗೆ ಪೂರಕವಾಗಿ ಮಕ್ಕಳು ವಿಷಯಗಳನ್ನು ಅರಿಯಲು ಬಿಡಿಸಿದ ಚಿತ್ರಗಳು ಪರಿಣಾಮಕಾರಿಯಾಗಿವೆ.

    ನೃತ್ಯ ಕಾರಂಜಿ ನಿರ್ಮಿಸಲಾಗಿದೆ. ಶಾಲಾವರಣದಲ್ಲಿ ಪೇರಲ, ಸಾಗವಾನಿ, ಹೊನ್ನೆ, ತೇಗ, ಸಿತಾಫಲ, ದಾಳಿಂಬೆ, ನಿಂಬೆ, ಮಾವು…ಹೀಗೆ 75 ಬಗೆಯ ಗಿಡಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ. ಕನಕಾಂಬರ, ದಾಸವಾಳ, ಮಲ್ಲಿಗೆ ಹೂವಿನ ಬಳ್ಳಿಗಳು ಹರಡಿವೆ. ಇವುಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಸರ್ಕಾರದ ವಾರ್ಷಿಕ ಹಣ ಸಾಲದೆ, ಶಿಕ್ಷಕ ಚಂದ್ರು ಪ್ರತಿ ತಿಂಗಳು 1ರಿಂದ 2 ಸಾವಿರ ರೂ.ವರೆಗೆ ತಮ್ಮ ಸ್ವಂತ ದುಡಿಮೆಯನ್ನು ವಿನಿಯೋಗಿಸುತ್ತಿದ್ದಾರೆ.

    ಪಾಲಕರ ಮನವೊಲಿಸುವಲ್ಲಿ ಯಶಸ್ವಿ
    ಕೃಷಿ, ದಿನಗೂಲಿ ನಂಬಿಕೊಂಡ ಈ ಕುಗ್ರಾಮದ ಬಹುತೇಕರು ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುವ ಪರಿಸ್ಥಿತಿ ಇತ್ತು. ಅಂತಹ ಪಾಲಕರ ಮನವೊಲಿಸಿರುವ ಚಂದ್ರು, ಇಂದು ಈ ಹಳ್ಳಿಯಲ್ಲಿ 1ರಿಂದ 5ನೇ ತರಗತಿವರೆಗಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತಲಾ ಮನೆಗಿಬ್ಬರಂತೆ 45 ಮಕ್ಕಳು ಕಲಿಕೆಯಲ್ಲಿ ತೊಡಗುವಂತೆ ಮಾಡಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ ಶಿಕ್ಷಣ ಇಲಾಖೆ ಹಮ್ಮಿಕೊಳ್ಳುವ ಪ್ರತಿಯೊಂದು ಸ್ಪರ್ಧೆಗಳಲ್ಲಿ ಈ ಶಾಲೆ ಮಕ್ಕಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಕೀರ್ತಿ ಹೊಂದಿದ್ದಾರೆ.

    ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ
    ಗ್ರಾಮೀಣ ಭಾಗದ ಶಾಲೆಗಳಿಗೆ ನಿಯುಕ್ತಿಗೊಳ್ಳಲು ಹಿಂದೇಟು ಹಾಕುವ ಸಂದರ್ಭದಲ್ಲಿ 2002ರಲ್ಲಿ ಈ ಶಾಲೆಗೆ ನಿಯುಕ್ತಿಗೊಂಡ ಶಿಕ್ಷಕ ಚಂದ್ರು ಇಲ್ಲಿನ ವಾತಾವರಣವನ್ನು ಸಂಪೂರ್ಣ ಬದಲಿಸಿದ್ದಾರೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುವ ಶಿಕ್ಷಕ, ಮಕ್ಕಳಿಗೆ ಅಕ್ಷರ ಕಲಿಕೆ ಜತೆಜತೆಗೆ ಪರಿಸರ ಪ್ರಜ್ಞೆ, ಅಧ್ಯಾತ್ಮ, ಸಂಸ್ಕಾರ, ಸಂಸ್ಕೃತಿ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಪ್ರೇರೇಪಣೆ ನೀಡುತ್ತಿದ್ದು, ಮಕ್ಕಳನ್ನು ಶಾಲೆಗೆ ಕಳಿಸಲು ಅಸಡ್ಡೆ ತೋರುವ ಪಾಲಕರಿಗೂ ಪ್ರೇರಣೆಯಾಗಿದ್ದಾರೆ. ಅತಿಥಿ ಶಿಕ್ಷಕಿ ಬರುವ ಮುನ್ನ ಏಕೋಪಾಧ್ಯಾಯರ ಉತ್ತಮೋತ್ತಮ ಸೇವೆಯ ಪ್ರತಿರೂಪವಾಗಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ, ಹಸಿರು ಶಾಲೆ ಅಭಿವೃದ್ಧಿ, ಸಾಮರ್ಥ್ಯ ಪ್ರಶಸ್ತಿಗೆ ಶಾಲೆ ಭಾಜನವಾಗಿದೆ.

    ನನ್ನ ವೃತ್ತಿ ಈ ಶಾಲೆಯಿಂದ ಆರಂಭಗೊಂಡಿದೆ. ಆರಂಭದಲ್ಲಿ ಸಾರಿಗೆ ವ್ಯವಸ್ಥೆ ಕಾಣದ ಈ ಕುಗ್ರಾಮದಲ್ಲಿ ಹೇಗೆ? ಕರ್ತವ್ಯ ನಿರ್ವಹಿಸುವುದು ಎಂಬ ಜಿಜ್ಞಾಸೆ ಕಾಡಿತ್ತು. ಆದರೆ ಇಲ್ಲಿನ ಜನತೆ ತೋರಿದ ಪ್ರೀತಿ, ವಿಶ್ವಾಸ, ಸಹಕಾರ ಸ್ವಗ್ರಾಮದಲ್ಲಿದ್ದೇನೆಂಬ ಅನುಭವ ನೀಡುತ್ತಿದೆ. ಒಟ್ಟಾರೆ 2 ದಶಕಗಳ ಸೇವೆ ತೃಪ್ತಿ ತಂದಿದೆ.
    | ಚಂದ್ರು ಕಬ್ಬಲಗೇರಿ, ಶಿಕ್ಷಕ, ಸ.ಕಿ.ಪ್ರಾ.ಶಾಲೆ-ಬಾರಿಗಿಡದೇರ್ ದೊಡ್ಡಿ

    ನಮ್ಮ ಶಾಲೆಯ ಮಕ್ಕಳು ಆಟ-ಪಾಠ, ಸಂಗೀತ-ನೃತ್ಯ… ಹೀಗೆ ಪ್ರತಿಯೊಂದು ಹಂತದಲ್ಲಿಯೂ ಮುನ್ನಡೆ ಸಾಧಿಸುತ್ತಿದ್ದಾರೆ. ಕುಗ್ರಾಮವಾದ ಬಾರಿಗಿಡದೇರ್ ಹೆಸರು ಈಗ ನಾಡಿನಲ್ಲೆಡೆ ಪಸರಿಸಲು ಶಿಕ್ಷಕ ಚಂದ್ರು ಅವರ ಅಗಾಧ ಶ್ರಮವೇ ಕಾರಣ.
    | ದುರುಗಪ್ಪ, ಎಸ್ಡಿಎಂಸಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts