More

    ತಪ್ಪಿತಸ್ಥರಿಂದಲೇ ನಷ್ಟ ವಸೂಲಿ

    ಬೆಳಗಾವಿ: ಗೋಕಾಕ ತಾಲೂಕಿನ ವಿವಿಧ ಕಾರಣಗಳಿಂದ ಸ್ಥಗಿತಗೊಂಡಿರುವ ಕುಂದರಗಿ ಹಾಗೂ ಇತರೆ 21 ಬಹುಗ್ರಾಮ ಯೋಜನೆಗಳ ಸ್ಥಿತಿಗತಿ ಕುರಿತು ತಕ್ಷಣ ತನಿಖೆ ನಡೆಸಿ ವರದಿ ಸಲ್ಲಿಸಬೇಕು. ತಪ್ಪಿತಸ್ಥ ಅಧಿಕಾರಿಗಳಿಂದಲೇ ನಷ್ಟ ವಸೂಲಿ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಆದೇಶ ಹೊರಡಿಸಿದರು.

    ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2017ರಲ್ಲಿಯೇ ಕುಂದರಗಿ ಹಾಗೂ ಇತರೆ 21 ಬಹುಗ್ರಾಮ ಯೋಜನೆಗಳ ಕಾಮಗಾರಿಯ 9.85 ಕೋಟಿ ರೂ. ವೆಚ್ಚದ ವರದಿ ತಯಾರಿಸಿ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳ ಹೇಳಿಕೆ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳ ಗೊಂದಲ ಹೇಳಿಕೆಗಳು ನಾನಾ ರೀತಿಯ ಅನುಮಾನ ಹುಟ್ಟು ಹಾಕುತ್ತಿವೆ. ಹಾಗಾಗಿ ಜಿಪಂ ಸಿಇಒ, ಇತರ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಒಂದು ವಾರದಲ್ಲಿ ವರದಿ ಸಲ್ಲಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷೃಮಾಡಿರುವ ಮತ್ತು ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.

    ಕಮಿಷನ್‌ಗಾಗಿ ವಿಳಂಬ: ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಗೋಕಾಕ ತಾಲೂಕಿನ ಬಳೋಬಾಳ ಹಾಗೂ ಇತರೆ 3 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಕಾಮಗಾರಿಗೆ 2017ರಲ್ಲಿಯೇ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಹಿರಿಯ ಅಧಿಕಾರಿಗಳು ಕಾಮಗಾರಿ ಆರಂಭವಾಗಿಲ್ಲ ಎಂದು ಹೇಳುತ್ತಿದ್ದಾರೆ. 3 ವರ್ಷಗಳಾದರೂ ಯೋಜನೆ ಕಾಮಗಾರಿ ಆರಂಭವಾಗಿಲ್ಲ ಏಕೆ? ಕಮಿಷನ್ ಸಲುವಾಗಿ ಕಾಮಗಾರಿ ವಿಳಂಬ ಮಾಡುತ್ತಿದ್ದೀರಿ ಎಂದು ಅಧಿಕಾರಿಗಳನ್ನು ಸಚಿವ ಈಶ್ವರಪ್ಪ ತರಾಟೆಗೆ ತೆಗೆದುಕೊಂಡರು.

    ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಿ.ಜಯರಾಮ್, ಜಿಪಂ ಸಿಇಒ ಎಚ್.ವಿ. ದರ್ಶನ ಇತರರು ಇದ್ದರು.

    ಏಜೆನ್ಸಿಗಳ ವಿರುದ್ಧ ಕ್ರಮದ ಎಚ್ಚರಿಕೆ

    ಜಿಲ್ಲೆಯ ಚಿಕ್ಕೋಡಿ ಮತ್ತುಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಸ್ಥಾಪನೆಗಗೊಂಡಿರುವ 1,330 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಆದರೆ, ವಾಸ್ತವ್ಯದಲ್ಲಿ ಅಧಿಕ ಪ್ರಮಾಣದ ಘಟಕಗಳು ಬಂದ್ ಆಗಿದೆ. ಕಳಪೆ ಮಟ್ಟದ ವಸ್ತುಗಳನ್ನು ಅಳವಡಿಸಲಾಗಿದೆ. ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿರುವ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿಲ್ಲ ಜಿಪಂ, ತಾಪಂ ಸದಸ್ಯರು ದೂರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ಘಟಕಗಳ ಏಜೆನ್ಸಿಗಳ ವಿರುದ್ಧ ಕ್ರಮ ಜರುಗಿಸಬೇಕು. ಕೆಆರ್‌ಡಿಎಲ್‌ನಿಂದಲೇ ಘಟಕಗಳು ಹಾಳಾಗಿವೆ. ಜಿಪಂ ಸಿಇಒ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದರು.

    ಆನ್‌ಲೈನ್ ವ್ಯವಸ್ಥೆ ರಾಜ್ಯದ್ಯಂತ ವಿಸ್ತರಣೆ

    ಸರ್ಕಾರವು ಶುದ್ಧ ಕುಡಿಯುವ ನೀರಿನ ಘಟಕಗಳಿಗಾಗಿ ವಾರ್ಷಿಕ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ಆದರೆ, ವಾಸ್ತವದಲ್ಲಿ ಜನರಿಗೆ ಶುದ್ಧವಾದ ಕುಡಿಯುವ ನೀರು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶುದ್ಧ ನೀರಿನ ಘಟಕಗಳ ಸ್ಥಿತಿಗತಿ ಅರಿಯಲು ಮತ್ತು ನಿಗಾ ವಹಿಸುವ ಉದ್ದೇಶದಿಂದ ಬೆಳಗಾವಿ ಜಿಲ್ಲಾ ಪಂಚಾಯಿತಿ ಅನುಷ್ಠಾನಗೊಳಿಸಿರುವ ಆನ್‌ಲೈನ್ ಮಾಹಿತಿ ವ್ಯವಸ್ಥೆಯನ್ನು ಎಲ್ಲ ಜಿಲ್ಲೆಗಲ್ಲಿಯೂ ಅನುಷ್ಠನಗೊಳಿಸಲಾಗುವುದು ಎಂದು ಸಚಿವ ಈಶ್ವರಪ್ಪ ಹೇಳಿದರು.

    ನರೇಗಾ ಯೋಜನೆಯಡಿ 2021ರ ಮಾರ್ಚ್ ಒಳಗಾಗಿ ಎಲ್ಲ ಗ್ರಾಪಂಗಳಲ್ಲಿ ಘನತ್ಯಾಜ್ಯ ವಿಲೇವಾರಿ ನಿರ್ವಹಣಾ ಘಟಕ ಆರಂಭಿಸಬೇಕು. ಜತೆಗೆ ಗ್ರಾಪಂ, ತಾಪಂ ಕಚೇರಿಗಳಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ವರ್ಷದ ಒಳಗಾಗಿ ರಾಜ್ಯದ ಪ್ರತಿ ಮನೆಗೆ ನಲ್ಲಿ ಮೂಲಕ ನೀರು ತಲುಪಿಸಬೇಕು.
    | ಕೆ.ಎಸ್. ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ

    ಜಿಲ್ಲೆಯಲ್ಲಿನ ಕುಡಿಯುವ ನೀರಿನ ಘಟಕಗಳ ಸ್ಥಿತಿ ಕುರಿತು ಜಿಪಂ ಸಿಇಒ ಅವರೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕು. ವಿವಿಧ ಕಾರಣಗಳಿಂದ ಸ್ಥಗಿತಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳಿಗೆ ವೇಗ ನೀಡಬೇಕು. ಅಧಿಕಾರಿಗಳು ವಾಸ್ತವ್ಯದಲ್ಲಿರುವ ಸಮಸ್ಯೆಗಳನ್ನು ತಿಳಿದುಕೊಳ್ಳುವ ಕೆಲಸ ಮಾಡಬೇಕು. ಕಚೇರಿಯಲ್ಲಿ ಕುಳಿತುಕೊಂಡು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಬೇಡಿ.
    | ಮಹಾಂತೇಶ ಕವಟಗಿಮಠ ವಿಪ ಆಡಳಿತ ಪಕ್ಷದ ಮುಖ್ಯ ಸಚೇತಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts