More

    ಸಾರಿಗೆ ಸೌಲಭ್ಯ ಒದಗಿಸುವ ಸಂಸ್ಥೆಗಳಿಗೆ ಮಾರ್ಗಸೂಚಿ ಪ್ರಕಟ

    ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸಾರಿಗೆ ಸೌಲಭ್ಯ ಒದಗಿಸುವ ಸಂಸ್ಥೆಗಳಿಗೆ (ಅಗ್ರಿಗೇಟರ್ಸ್) ಮಾರ್ಗಸೂಚಿ ಪ್ರಕಟಿಸಿದೆ. ಮೋಟರ್ ವಾಹನಗಳ ತಿದ್ದುಪಡಿ ಕಾನೂನು 2019ರ ಅನ್ವಯ ಈ ಮಾರ್ಗಸೂಚಿಗಳನ್ನು ರೂಪಿಸಲಾಗಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ಸಾರಿಗೆದಾರರಿಗೆ ಲೈಸೆನ್ಸ್ ಮಂಜೂರು ಮಾಡುವಾಗ ಈ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸಚಿವಾಲಯ ಸೂಚಿಸಿದೆ.

    ವಾಹನ ಪರವಾನಗಿ ಮಂಜೂರಾತಿ ಅಥವಾ ನವೀಕರಣಕ್ಕೆ ಸಾರಿಗೆದಾರರಿಂದ ನಿಗದಿತ ಶುಲ್ಕ ಮತ್ತು ಭದ್ರತಾ ಠೇವಣಿಯನ್ನು ಸಂಗ್ರಹಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಒಮ್ಮೆ ಮಂಜೂರಾದ ಲೈಸೆನ್ಸ್ ಐದು ವರ್ಷದವರೆಗೆ ಸಿಂಧುವಾಗಲಿದ್ದು, ನಂತರ ಅದನ್ನು ನವೀಕರಣಗೊಳಿಸಬೇಕು. ಸಕಾರಣವಿದ್ದರೆ ಸಂಬಂಧಪಟ್ಟ ಪ್ರಾಧಿಕಾರಿಗಳು ಪರವಾನಗಿಯನ್ನು ರದ್ದುಪಡಿಸಲು ಅವಕಾಶ ಕಲ್ಪಿಸಲಾಗಿದೆ. ಮಂಜೂರು ಮಾಡಲಾದ ಪರವಾನಗಿ ವಿವರಗಳನ್ನು ರಾಜ್ಯ ಸರ್ಕಾರಗಳ ಸಾರಿಗೆ ಪೋರ್ಟಲ್​ಗಳಲ್ಲಿ ಅಪ್​ಲೋಡ್ ಮಾಡುವಂತೆಯೂ ಮಾರ್ಗಸೂಚಿ ತಿಳಿಸಿದೆ.

    ಲೈಸೆನ್ಸ್ ಬಯಸುವ ಚಾಲಕರು ತಮ್ಮ ಚಾಲನಾ ಸಾಮರ್ಥ್ಯ ಸಾಬೀತುಪಡಿಸಬೇಕು ಹಾಗೂ ಐದು ದಿನಗಳ ಕಡ್ಡಾಯ ತರಬೇತಿಗೆ ಒಳಗಾಗಬೇಕೆಂದು ತಿದ್ದುಪಡಿ ಕಾನೂನು ಸ್ಪಷ್ಟಪಡಿಸಿದೆ. ರಸ್ತೆ ಸುರಕ್ಷತೆ ನಿಯಮಗಳನ್ನು ಚಾಲಕರು ಸೂಕ್ತವಾಗಿ ತಿಳಿದುಕೊಂಡಿರಬೇಕು ಎಂದು ಮಾರ್ಗಸೂಚಿ ಹೇಳಿದೆ. ವಾಹನಗಳ ನಿರ್ವಹಣೆ ಕೌಶಲ್ಯವನ್ನೂ ಹೊಂದಿರುವುದು ಅಗತ್ಯ ಎಂದಿದೆ.

    ವಾಹನಗಳಿಗೆ ನಾಮನಿರ್ದೇಶನ ವ್ಯವಸ್ಥೆ : ವಾಹನಗಳ ನೋಂದಣಿ ಪ್ರಮಾಣಪತ್ರದಲ್ಲಿ ನಾಮನಿರ್ದೇಶನ ಮಾಡಲು ಅನುಕೂಲವಾಗುವಂತೆ 1989ರ ಕೇಂದ್ರ ಮೋಟಾರು ವಾಹನ ನಿಯಮಗಳನ್ನು ತಿದ್ದುಪಡಿ ಮಾಡಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪ್ರಸ್ತಾವನೆ ನೀಡಿದೆ. ಇದರ ಅನ್ವಯ ವಾಹನ ಮಾಲೀಕರು ತಮ್ಮ ಸಾವಿನ ಬಳಿಕ ವಾಹನವನ್ನು ಯಾರಿಗೆ ನೀಡಬೇಕು ಎಂಬುದನ್ನು ನೋಂದಣಿಯ ಸಂದರ್ಭದಲ್ಲೇ ನಾಮನಿರ್ದೇಶನ ಮಾಡಬಹುದಾಗಿದೆ. ಈ ಪ್ರಕ್ರಿಯೆ ದೇಶಾದ್ಯಂತ ಏಕರೂಪದ್ದಾಗಿರಲಿದೆ ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸ್ತಾವಿತ ತಿದ್ದುಪಡಿಯ ಬಗ್ಗೆ ಸಾರ್ವಜನಿಕರಿಂದ ಸಲಹೆ ಆಹ್ವಾನಿಸಲಾಗಿದೆ.

    ಬಿಐಎಸ್ ಹೆಲ್ಮೆಟ್ ಮಾತ್ರ ಮಾರಾಟ

    ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ದೃಢೀಕರಿಸಿದ ಹೆಲ್ಮೆಟ್​ಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟ ಮಾಡಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. ಈ ಕ್ರಮದಿಂದ ಕಳಪೆ ಹೆಲ್ಮೆಟ್ ಮಾರಾಟ ತಡೆಯಲು ಹಾಗೂ ಅಪಘಾತದ ವೇಳೆ ಮಾರಣಾಂತಿಕ ಗಾಯಗಳಿಂದ ರಕ್ಷಿಸಲು ಸಹಾಯವಾಗುತ್ತದೆ ಎಂದು ಸಚಿವಾಲಯ ಹೇಳಿದೆ. ರಸ್ತೆ ಸುರಕ್ಷತೆ ಕುರಿತ ಸುಪ್ರೀಂಕೋರ್ಟ್ ಸಮಿತಿಯ ನಿರ್ದೇಶನಗಳನ್ನು ಅನುಸರಿಸಿ ಕ್ರಮ ಕೈಗೊಳ್ಳಲಾಗಿದೆ. ಇದರ ಅನ್ವಯ ಬಿಐಎಸ್ ದೃಢೀಕರಿಸಿದ ಹಗುರ ಹೆಲ್ಮೆಟ್​ಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಸೂಚಿಸಲಾಗಿದೆ. ಭಾರತದಲ್ಲಿ ಸದ್ಯ ಪ್ರತಿವರ್ಷ 1.70 ಕೋಟಿ ದ್ವಿಚಕ್ರ ವಾಹನಗಳನ್ನು ತಯಾರಿಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts