More

    ನರೇಗಾ ಕೂಲಿಗೆ ಹೊರಟ ಅತಿಥಿ ಉಪನ್ಯಾಸಕರು

    ಪರಶುರಾಮ ಕೆರಿ ಹಾವೇರಿ

    ಅತಿಥಿ ಉಪನ್ಯಾಸಕರಿಗೆ ಕರೊನಾ ಬರೆ ಎಳೆದಿದೆ. ಕಳೆದ 2 ತಿಂಗಳಿನಿಂದ ಕೆಲಸ, ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವನ ನಿರ್ವಹಣೆಗಾಗಿ ಹಣ್ಣು, ದಿನಸಿ ವ್ಯಾಪಾರ ಸೇರಿದಂತೆ ನರೇಗಾ ಕೂಲಿ ಕೆಲಸಕ್ಕೂ ಇಳಿದಿದ್ದಾರೆ.

    ಜಿಲ್ಲೆಯಲ್ಲಿ ಒಟ್ಟು 350 ಅತಿಥಿ ಉಪನ್ಯಾಸಕರಿದ್ದಾರೆ. ಕಳೆದ ವರ್ಷ ಲಾಕ್​ಡೌನ್ ಸಮಯದಲ್ಲಿಯೂ ವೇತನ ಸ್ಥಗಿತಗೊಂಡಿದ್ದು, ಸಂಕಷ್ಟ ಅನುಭವಿಸಿದ್ದರು. ಕೊನೆಗೆ ಅನೇಕ ಒತ್ತಾಯ, ಹೋರಾಟದ ನಂತರ ಸರ್ಕಾರ ಕಳೆದ ಜನವರಿಯಲ್ಲಿ ಮರಳಿ ಸೇವೆಗೆ ಅವಕಾಶ ನೀಡಿತ್ತು. ಅದರಂತೆ ಫೆಬ್ರವರಿ ಅಂತ್ಯದವರೆಗೆ ಕೆಲಸ ಮಾಡಿದರು. ಮೇ 3ರಿಂದ ಮರಳಿ ಕೆಲಸಕ್ಕೆ ಹಾಜರಾಗುವಂತೆ ಸರ್ಕಾರ ಸೂಚನೆ ನೀಡಿತ್ತು. ಆದರೆ, ಮತ್ತೆ ಕರೊನಾ ಮಹಾಮಾರಿ ವಕ್ಕರಿಸಿದ್ದರಿಂದ ಕೆಲಸಕ್ಕೆ ಕುತ್ತು ಬಂದಿದೆ. ಹೀಗಾಗಿ, ಕುಟುಂಬ ನಿರ್ವಹಣೆಗೆ ಅನಿವಾರ್ಯವಾಗಿ ಅನ್ಯ ಉದ್ಯೋಗದತ್ತ ಉಪನ್ಯಾಸಕರು ಒಲವು ತೋರುವಂತಾಗಿದೆ.

    ನರೇಗಾ ಕೆಲಸಕ್ಕೆ: ಜಿಲ್ಲೆಯ ಡೊಮ್ಮನಾಳ ಗ್ರಾಮದ ಅತಿಥಿ ಉಪನ್ಯಾಸಕ ಹಾಗೂ ಅತಿಥಿ ಉಪನ್ಯಾಸಕರ ಸಂಘದ ಜಂಟಿ ಕಾರ್ಯದರ್ಶಿಯೂ ಆಗಿರುವ ಸಿ.ಕೆ. ಪಾಟೀಲ ಅವರು ಹಾವೇರಿಯಲ್ಲಿ ಮಾವಿನಹಣ್ಣು ಮಾರಾಟದಲ್ಲಿ ತೊಡಗಿದ್ದಾರೆ. ಸದ್ಯ ಮಾವಿನಹಣ್ಣಿನ ಸೀಜನ್ ಜೋರಾಗಿದೆ. ರೈತರಿಂದ ನೇರವಾಗಿ ಮಾವಿನಕಾಯಿ ಖರೀದಿಸಿ ನೈಸರ್ಗಿಕವಾಗಿ ಹಣ್ಣಾಗಿಸಿ ಮಾರಾಟ ಮಾಡುತ್ತಿದ್ದಾರೆ. ಹಾನಗಲ್ ಮಲಗುಂದ ಗ್ರಾಮದ ಅತಿಥಿ ಉಪನ್ಯಾಸಕ ವಿನಾಯಕ ಸಾತೇನಹಳ್ಳಿ ನರೇಗಾ ಯೋಜನೆಯಡಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಕೆಲ ಉಪನ್ಯಾಸಕರು ಕಾಳುಕಡಿ ವ್ಯಾಪಾರ ನಡೆಸುತ್ತಿದ್ದಾರೆ.

    ಅನ್ಯ ಮಾರ್ಗ ಅನಿವಾರ್ಯ: ‘ಕಾಯಂ ನೌಕರರಿಗೆ ವೇತನ ನೀಡಲು ಸರ್ಕಾರಕ್ಕೆ ದುಡ್ಡಿನ ಸಮಸ್ಯೆ ಎದುರಾಗಿದೆ. ಸರ್ಕಾರದ ಬಳಿ ಕಾಸಿದ್ದಾಗಲೇ ತಾರತಮ್ಯ ಧೋರಣೆ ಅನುಸರಿಸಿತು. ಸಕಾಲದಲ್ಲಿ ವೇತನ ನೀಡಲಿಲ್ಲ. ನಮ್ಮನ್ನು ಕಾಯಂಗೊಳಿಸಿ ಎಂದರೂ ಪರಿಗಣಿಸಿಲ್ಲ. ಇನ್ನು ಈ ಸಂಕಷ್ಟ ಸಮಯದಲ್ಲಿ ನಮಗೆ ವೇತನ ಕೊಡುವುದು ಸಾಧ್ಯವಿಲ್ಲ ಎಂಬುದರ ಅರಿವಾಗಿದೆ. ಸರ್ಕಾರವನ್ನು ನಂಬಿ ಕೂರುವ ಬದಲು ಏನಾದರೂ ಮಾಡಲು ನಿರ್ಧರಿಸಿದ್ದೇವೆ. ಸದ್ಯ ವ್ಯಾಪಾರ ಹೊಸದಾಗಿದ್ದರೂ ಮುಂದೆ ಕೈ ಹಿಡಿಯುವ ನಿರೀಕ್ಷೆಯೂ ಮೂಡಿದೆ’ ಎನ್ನುತ್ತಾರೆ ಅತಿಥಿ ಉಪನ್ಯಾಸಕರು.

    ರಾಜ್ಯದಲ್ಲಿನ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಯುಜಿಸಿ ಪ್ರಕಾರ ಅತಿಥಿ ಉಪನ್ಯಾಸಕರಿಗೆ 50 ಸಾವಿರ ರೂಪಾಯಿ ವೇತನ ನೀಡಬೇಕು. ಆದರೆ ಸದ್ಯ ನೆಟ್, ಸೆಟ್ ಆದವರಿಗೆ 13ಸಾವಿರ, ಎಂಎ ಆದವರಿಗೆ 11ಸಾವಿರ ರೂ. ವೇತನ ನೀಡಲಾಗುತ್ತಿದೆ. ಕರೊನಾ ಸಂಕಷ್ಟದ ಸಮಯದಲ್ಲಿ ಸರ್ಕಾರ ನಮಗೆ ನೆರವು ನೀಡುವ ಭರವಸೆ ಇಲ್ಲವಾಗಿದೆ. ಸರ್ಕಾರ ನಮ್ಮನ್ನು ಕಾರ್ವಿುಕರೆಂದು ಪರಿಗಣಿಸಿ ವಿಶೇಷ ಪ್ಯಾಕೇಜ್ ಆದರೂ ನೀಡಬೇಕು.

    | ಸಿ.ಕೆ. ಪಾಟೀಲ, ಅತಿಥಿ ಉಪನ್ಯಾಸಕರ ಸಂಘದ ಜಂಟಿ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts